FIFA 2026 | ಜರ್ಮನಿಗೆ ಸೋಲಿನ ಬರೆ ಎಳೆದ ಈಕ್ವೆಡಾರ್ : ಗೆಲುವಿನ ಗೋಲು ಗಳಿಸಿದ ಗೊಂಝಾಲೊ ಪ್ಲಾಟಾ

Photo Credit ; AP
ನ್ಯೂಜೆರ್ಸಿ, ಜೂ. 26: ದಿಟ್ಟ ಪ್ರದರ್ಶನ ತೋರಿದ ಈಕ್ವೆಡಾರ್ ತಂಡ ಮೆಟ್ಲೈಫ್ ಸ್ಟೇಡಿಯಂನಲ್ಲಿ ದಾಖಲೆ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಶಾಕ್ ನೀಡಿದೆ. ಈ ಮೂಲಕ ಫಿಫಾ ವಿಶ್ವಕಪ್ನ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
ದಾಖಲೆಯ 80,663 ಅಭಿಮಾನಿಗಳು ಸಾಕ್ಷಿಯಾಗಿದ್ದ ಐತಿಹಾಸಿಕ ವಿಶ್ವಕಪ್ ಪಂದ್ಯದಲ್ಲಿ ಗೊಂಝಾಲೊ ಪ್ಲಾಟಾ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ವಿಂಗರ್ ಪ್ಲಾಟಾ 77ನೇ ನಿಮಿಷದಲ್ಲಿ ಗೋಲು ಗಳಿಸಿ ಈಕ್ವೆಡಾರ್ ತಂಡವನ್ನು ಮುಂದಿನ ಸುತ್ತಿಗೆ ತಲುಪಿಸಿದರು.
ಶುಕ್ರವಾರ ಮುಂಜಾನೆ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ಜರ್ಮನಿ ತಂಡ ಕೇವಲ 1 ನಿಮಿಷ ಹಾಗೂ 50 ಸೆಕೆಂಡ್ನಲ್ಲಿ ಮೊದಲ ಗೋಲು ಗಳಿಸಿ ಆರಂಭಿಕ ಮೇಲುಗೈ ಸಾಧಿಸಿತು. ಲೆರಾಯ್ ಸಾನ್ ತನ್ನ 18ನೇ ಅಂತರ್ರಾಷ್ಟ್ರೀಯ ಗೋಲು ಗಳಿಸಿದರು.
ಆದರೆ ಈಕ್ವೆಡಾರ್ ತಂಡ ಸುಲಭವಾಗಿ ಶರಣಾಗಲು ನಿರಾಕರಿಸಿತು. 9ನೇ ನಿಮಿಷದಲ್ಲಿ ನಿಲ್ಸನ್ ಅಂಗುಲೊ ಗಳಿಸಿದ ಗೋಲಿನ ನೆರವಿನಿಂದ 1-1ರಿಂದ ಸಮಬಲ ಸಾಧಿಸಿತು. ಫಾರ್ವರ್ಡ್ ಆಟಗಾರ ನಿಲ್ಸನ್ ಜರ್ಮನಿಯ 40ರ ವಯಸ್ಸಿನ ಹಿರಿಯ ಗೋಲ್ಕೀಪರ್ ಮ್ಯಾನುಯೆಲ್ ನೇಯರ್ರನ್ನು ವಂಚಿಸಿ ಗೋಲು ಗಳಿಸಿದರು.
ದ್ವಿತೀಯಾರ್ಧವು ನಾಟಕೀಯ ಘಟನೆಯೊಂದಿಗೆ ಆರಂಭವಾಯಿತು. ರೆಫರಿ ಪೆನ್ಸೊ ಜರ್ಮನಿಗೆ ಪೆನಾಲ್ಟಿ ಅವಕಾಶ ನೀಡಿದರು. ಆದರೆ ವಿಎಎಆರ್ ರಿವೀವ್ ರೆಫರಿಯ ನಿರ್ಧಾರವನ್ನು ರದ್ದುಪಡಿಸಿತು.
ಪಂದ್ಯ ಮುಗಿಯಲು 13 ನಿಮಿಷಗಳು ಬಾಕಿ ಇರುವಾಗ ಪ್ಲಾಟಾ ನಿರ್ಣಾಯಕ ಗೋಲು ಗಳಿಸಿ ಈಕ್ವೆಡಾರ್ ತಂಡಕ್ಕೆ 2-1 ಅಂತರದ ರೋಚಕ ಗೆಲುವು ತಂದುಕೊಟ್ಟರು.
ಈ ಸೋಲಿನೊಂದಿಗೆ ಜರ್ಮನಿ ತಂಡದ ಸತತ 11 ಪಂದ್ಯಗಳ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ. ಜರ್ಮನಿ ತಂಡವು ಆರು ಅಂಕದೊಂದಿಗೆ ಈಗಲೂ ‘ಇ’ ಗುಂಪಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ನಾಲ್ಕಂಕ ಗಳಿಸಿರುವ ಈಕ್ವೆಡಾರ್ ತಂಡವು ಮೂರನೇ ಸ್ಥಾನ ಗಳಿಸಿ ಮುಂದಿನ ಸುತ್ತಿನಲ್ಲಿ ತನ್ನ ಸ್ಥಾನ ಖಚಿತಪಡಿಸಿದೆ.






