FIFA 2026 | 52 ವರ್ಷಗಳ ನಂತರ ವಿಶ್ವಕಪ್ನಲ್ಲಿ ಮೊದಲ ಗೋಲು ಗಳಿಸಿದ ಹೈಟಿ ತಂಡ

Photo Credit : AP , PTI
ಅಟ್ಲಾಂಟಾ, ಜೂ.25: ಹೈಟಿ ತಂಡ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದ್ದರೂ 52 ವರ್ಷಗಳ ನಂತರ ಮೊದಲ ಬಾರಿ ವಿಶ್ವಕಪ್ನಲ್ಲಿ ಗೋಲು ಗಳಿಸಿ ಸಂಭ್ರಮಿಸಿದೆ.
ಮೊರಾಕ್ಕೊ ವಿರುದ್ಧ ಗುರುವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ 2-4 ಗೋಲುಗಳ ಅಂತರದಿಂದ ಸೋತಿರುವ ಹೈಟಿ ತಂಡದ ಅಭಿಯಾನ ಅಂತ್ಯವಾಗಿದೆ. ಕೆರಿಬಿಯನ್ ದೇಶವು ಪ್ರಸಕ್ತ ಟೂರ್ನಮೆಂಟ್ನಲ್ಲಿ ಸತತ ಮೂರನೇ ಸೋಲು ಕಂಡಿದೆ.
1974ರ ನಂತರ ಮೊದಲ ಬಾರಿ ವಿಶ್ವಕಪ್ನಲ್ಲಿ ಕಾಣಿಸಿಕೊಂಡಿರುವ ಹೈಟಿ ತಂಡವು ಸ್ಕಾಟ್ಲ್ಯಾಂಡ್ ಹಾಗೂ ಬ್ರೆಝಿಲ್ ತಂಡಗಳ ವಿರುದ್ಧ ಸೋಲನುಭವಿಸಿ ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿದೆ.
2022ರ ವಿಶ್ವಕಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದ ಮೊರಾಕ್ಕೊ ತಂಡದ ವಿರುದ್ಧ ಎರಡು ಬಾರಿ ಮುನ್ನಡೆ ಸಾಧಿಸಿದ್ದು ಟೂರ್ನಿಯಲ್ಲಿ ಹೈಟಿ ತಂಡದ ಶ್ರೇಷ್ಠ ಪ್ರದರ್ಶನವಾಗಿದೆ.
10ನೇ ನಿಮಿಷದಲ್ಲಿ ಜೀನ್ ಕೆವಿನ್ ನೀಡಿದ ಪಾಸ್ನಿಂದ ಲೆನ್ನಿ ಜೋಸೆಫ್ ಅವರು ಚೆಂಡನ್ನು ಗೋಲುಪೆಟ್ಟಿಗೆಯತ್ತ ಸಾಗಿಸಿದರು. ಆಗ ಮೊರಾಕ್ಕೊ ಗೋಲ್ಕೀಪರ್ ಯಾಸಿನ್ ಬೌನೌ ಸ್ವಯಂ ಗೋಲು ಗಳಿಸಿ ಹೈಟಿಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಆಗ ಹೈಟಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಮೊದಲಾರ್ಧಕ್ಕಿಂತ ಮೊದಲು 39ನೇ ನಿಮಿಷದಲ್ಲಿ ಗೋಲು ಗಳಿಸಿದ ನಾಯಕ ಅಶ್ರಫ್ ಹಕಿಮಿ, ಮೊರಾಕ್ಕೊ 1-1ರಿಂದ ಸಮಬಲಗೊಳಿಸಲು ನೆರವಾದರು. ಆದರೆ ಹೈಟಿ ತಂಡವು ತಕ್ಷಣವೇ ತಿರುಗೇಟು ನೀಡಿತು. ವಿಲ್ಸನ್ ಇಸಿಡೋರ್ 43ನೇ ನಿಮಿಷದಲ್ಲಿ ಗೋಲು ಗಳಿಸಿ ಹೈಟಿ ತಂಡಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು.
ಇಸ್ಮಾಯೀಲ್ ಸಾಯ್ಬಾರಿ 45+1ನೇ ನಿಮಿಷದಲ್ಲಿ ಗೋಲು ಗಳಿಸಿ ಮೊರಾಕ್ಕೊ ತಂಡ 2-2ರಿಂದ ಸಮಬಲಗೊಳಿಸಲು ನೆರವಾದರು.
ದ್ವಿತೀಯಾರ್ಧದಲ್ಲಿ ಕ್ರಮವಾಗಿ 78ನೇ ಹಾಗೂ 89ನೇ ನಿಮಿಷದಲ್ಲಿ ಗೋಲು ಗಳಿಸಿದ ಸೌಫಿಯಾನ್ ರಹಿಮಿ ಹಾಗೂ ಜೆಸಿಮ್ ಯಾಸಿನ್ ಅವರು ಮೊರಾಕ್ಕೊ ತಂಡವು 4-2 ಅಂತರದಿಂದ ಗೆಲುವು ದಾಖಲಿಸುವಲ್ಲಿ ನೆರವಾದರು.
ಹೈಟಿ ತಂಡದ ಐತಿಹಾಸಿಕ ಗೋಲು ಪಂದ್ಯ ಗೆದ್ದಷ್ಟೇ ಖುಷಿಕೊಟ್ಟಿದೆ ಎಂದು ಹೈಟಿ ಅಭಿಯಾನಿಯೊಬ್ಬ ಪ್ರತಿಕ್ರಿಯಿಸಿದರು.
ಮೊರಾಕ್ಕೊ ಅಂತಿಮ-32ರ ಸುತ್ತಿಗೆ ಲಗ್ಗೆ
ಹೈಟಿ ತಂಡದ ವಿರುದ್ಧ ಎರಡು ಬಾರಿ ಹಿನ್ನಡೆಯಿಂದ ಹೊರ ಬಂದ ಮೊರಾಕ್ಕೊ ತಂಡವು 4-2 ಗೋಲುಗಳ ಅಂತರದಿಂದ ಜಯಶಾಲಿಯಾಗಿ ‘ಸಿ ’ಗುಂಪಿನಿಂದ ಎರಡನೇ ಸ್ಥಾನಿಯಾಗಿ ವಿಶ್ವಕಪ್ನ ಅಂತಿಮ-32ರ ಸುತ್ತಿಗೆ ಲಗ್ಗೆ ಇಟ್ಟಿದೆ.
ಇಸ್ಮಾಯೀಲ್ ಸಾಯ್ಬಾರಿ ವಿಶ್ವಕಪ್ನಲ್ಲಿ ಅಡಿರುವ ಮೂರನೇ ಪಂದ್ಯದಲ್ಲಿ ಮೂರನೇ ಗೋಲು ಗಳಿಸಿದರು.
ಬ್ರೆಝಿಲ್ ಹಾಗೂ ಮೊರಾಕ್ಕೊ ತಂಡಗಳು ತಲಾ ಎರಡರಲ್ಲಿ ಜಯ, ಒಂದರಲ್ಲಿ ಡ್ರಾ ಸಾಧಿಸಿ ತಲಾ ಏಳು ಅಂಕ ಹೊಂದಿವೆ. ಆದರೆ ಗೋಲು ವ್ಯತ್ಯಾಸದಿಂದಾಗಿ ಸಿ ಗುಂಪಿನಲ್ಲಿ ಬ್ರೆಝಿಲ್ಗೆ ಅಗ್ರ ಸ್ಥಾನವನ್ನು ಬಿಟ್ಟುಕೊಟ್ಟಿರುವ ಮೊರಾಕ್ಕೊ ತಂಡವು ಜೂನ್ 29ರಂದು ನಡೆಯಲಿರುವ ಅಂತಿಮ 32ರ ಸುತ್ತಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಅಥವಾ ಜಪಾನ್ ತಂಡವನ್ನು ಎದುರಿಸಲಿದೆ.
ಹೈಟಿ ತಂಡವು ಒಂದೂ ಅಂಕವನ್ನು ಗಳಿಸದೆ ಇದ್ದರೂ 1974ರ ನಂತರ ಆಡಿದ ಮೊದಲ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಬ್ರೆಝಿಲ್ ತಂಡವು ಸ್ಕಾಟ್ಲ್ಯಾಂಡ್ ತಂಡವನ್ನು 3-0 ಅಂತರದಿಂದ ಮಣಿಸಿದ ನಂತರ ಮೊರಾಕ್ಕೊ ತಂಡವು ಮುಂದಿನ ಸುತ್ತಿಗೇರಲು ಸಮಗ್ರ ಗೆಲುವಿನ ಅಗತ್ಯವಿತ್ತು.






