FIFA 2026| ಐತಿಹಾಸಿಕ ಅವಳಿ ಗೋಲು: 60 ವರ್ಷದ ದಾಖಲೆ ಮುರಿದ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ Photo: x.com/cloudninesports
ಹೂಸ್ಟನ್ : ಫಿಫಾ ವಿಶ್ವಕಪ್ ಫುಟ್ಬಾಲ್ನಲ್ಲಿ ಅತಿಹೆಚ್ಚು ಗೋಲುಗಳನ್ನು ಬಾರಿಸಿದ ಪೋರ್ಚುಗಲ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಆರು ದಶಕಗಳಿಂದ ಹೊಂದಿದ್ದ ಯುಸೆಬಿಯೊ ಅವರ ದಾಖಲೆಯನ್ನು ಮಂಗಳವಾರ ಕ್ರಿಸ್ಟಿಯಾನೊ ರೊನಾಲ್ಡೊ ಮುರಿದಿದ್ದಾರೆ. ಉಜ್ಬೇಕಿಸ್ತಾನ ವಿರುದ್ಧ ಎರಡು ಗೋಲುಗಳನ್ನು ಸಿಡಿಸುವ ಮೂಲಕ ಅವರು 5-0 ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟೂರ್ನಿಯ ಮೊದಲ ಪಂದ್ಯದಲ್ಲಿ ಡಿಆರ್ ಕಾಂಗೊ ವಿರುದ್ಧ 1-1 ಗೋಲುಗಳ ಡ್ರಾದೊಂದಿಗೆ ನೀರಸವಾಗಿ ಟೂರ್ನಿ ಆರಂಭಿಸಿದ್ದ ಪೋರ್ಚುಗಲ್ ಕೆ ಗುಂಪಿನ ಎರಡನೇ ಪಂದ್ಯವನ್ನಾಡಲು ತೀವ್ರ ಒತ್ತಡದೊಂದಿಗೆ ಮೈದಾನಕ್ಕೆ ಇಳಿದಿತ್ತು. ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನದ ಹಿನ್ನೆಲೆಯಲ್ಲಿ ನಾಯಕ ರೊಬೆರ್ಟೊ ಮಾರ್ಟಿನೆಝ್ ಹಾಗೂ ರೊನಾಲ್ಡೊ ವಿರುದ್ಧವೂ ಟೀಕೆಗಳು ಕೇಳಿಬಂದಿದ್ದವು.
ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರನೇ ನಿಮಿಷದಲ್ಲೇ ಜಾವೊ ಕ್ಯಾನ್ಸೆಲೊ ಪೆನಾಲ್ಟಿ ಪ್ರದೇಶಕ್ಕೆ ಚೆಂಡನ್ನು ಪಾಸ್ ಮಾಡಿದ ತಕ್ಷಣವೇ ಮಿಂಚಿನ ವೇಗದಲ್ಲಿ ರೊನಾಲ್ಡೊ ಎದುರಾಳಿ ಗೋಲ್ಕೀಪರ್ ಅಬ್ದುವೋಹಿತ್ ನೆಮಟೋವ್ ಅವರನ್ನು ವಂಚಿಸಿ ಗೋಲುಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಗೋಲು ಪೋರ್ಚುಗಲ್ಗೆ ಆರಂಭಿಕ ಮುನ್ನಡೆ ನೀಡಿದ್ದಲ್ಲದೇ ಆರು ವಿಶ್ವಕಪ್ಗಳಲ್ಲಿ ಗೋಲು ಗಳಿಸಿದ ಪೋರ್ಚುಗಲ್ ಆಟಗಾರ ಎಂಬ ಹೆಗ್ಗಳಿಕೆಗೂ ರೊನಾಲ್ಡೊ ಪಾತ್ರರಾದರು.
ವಿರಾಮಕ್ಕೆ ಕೆಲ ನಿಮಿಷಗಳ ಮೊದಲು ಅವಧಿ ರೊನಾಲ್ಡೊ ಪಾಲಿಗೆ ಐತಿಹಾಸಿಕ ಕ್ಷಣ ಎನಿಸಿತು. ನುನೊ ಮೆಂಡಿಸ್ ಅವರ ಅದ್ಭುತ ಫ್ರೀಕಿಕ್ ಗೋಲಿನಿಂದ 2-0 ಮುನ್ನಡೆ ಗಳಿಸಿದ್ದ ತಂಡದ ಮುನ್ನಡೆಯನ್ನು ರೊನಾಲ್ಡೊ ಹಿಗ್ಗಿಸಿದರು. ಮಿಡ್ಫೀಲ್ಡ್ನಲ್ಲಿ ಚೆಂಡಿನ ಸ್ವಾಧೀನ ಪಡೆದ ಬ್ರೂನೊ ಫೆರ್ನಾಂಡಿಸ್ ನಿಖರ ಪಾಸ್ ಮೂಲಕ ಉಜ್ಬೇಕಿಸ್ತಾನದ ರಕ್ಷಣಾ ಕೋಟೆ ಭೇದಿಸಿದರು. ಇದನ್ನು ನಿರೀಕ್ಷಿಸಿದ್ದ ರೊನಾಲ್ಡೊ ಕಾರ್ನರ್ನಲ್ಲಿ ಗೋಲುಪೆಟ್ಟಿಗೆ ಸೇರಿಸುವ ಮೂಲಕ ಇತಿಹಾಸದ ಪುಟ ಸೇರಿದರು.
ಈ ಗೋಲು ಗಳಿಸುವ ಮೂಲಕ 1966ರ ವಿಶ್ವಕಪ್ನಲ್ಲಿ ಯುಸೆಬಿಯೊ ನಿರ್ಮಿಸಿದ್ದ ಅಧ್ಯಾಯ ಕೊನೆಗೊಂಡಿತು. ಪೋರ್ಚುಗಲ್ ಫುಟ್ಬಾಲ್ ಇತಿಹಾಸದಲ್ಲಿ ಯುಸೆಬಿಯೊ ಒಂದೇ ಟೂರ್ನಿಯಲ್ಲಿ ಒಂಬತ್ತು ಗೋಲುಗಳನ್ನು ಬಾರಿಸಿದ್ದರು. ಬ್ಲ್ಯಾಕ್ ಪ್ಯಾಂಥರ್ ಎಂದೇ ಕರೆಸಿಕೊಂಡಿದ್ದ ಯುಸೆಬಿಯೊ ಕೇವಲ ಆರು ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಲಿವರ್ಪೂಲ್ನ ಗುಡಿಸನ್ ಪಾರ್ಕ್ನಲ್ಲಿ ಆರು ಗೋಲುಗಳನ್ನು ಸಿಡಿಸಿದ್ದರು.
ರೊನಾಲ್ಡೊ ಈ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, 41 ವರ್ಷ 138 ದಿನದ ಅವರು ವಿಶ್ವಕಪ್ ಇತಿಹಾಸದಲ್ಲಿ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರರ ಪೈಕಿ ಎರಡನೇ ಸ್ಥಾನಕ್ಕೇರಿದರು. 1994ರ ವಿಶ್ವಕಪ್ನಲ್ಲಿ ಕ್ಯಾಮರೂನ್ ತಂಡದ ರೋಜರ್ ಮಿಲ್ಲಾ 42ನೇ ವರ್ಷದಲ್ಲಿ ಗೋಲು ಗಳಿಸಿ ದಾಖಲೆ ನಿರ್ಮಿಸಿದ್ದರು.






