FIFA 2026 | ಅವರ ಹೆಸರು ಮೆಸ್ಸಿ ಎಂದಿದ್ದರೆ ಕೆಂಪು ಕಾರ್ಡ್ ಸಿಗುತ್ತಿರಲಿಲ್ಲ : ಅಮೆರಿಕದ ಮಾಜಿ ಆಟಗಾರ ಟೀಕೆ

Photo Credit : AP
ವಾಶಿಂಗ್ಟನ್, ಜೂ. 2: ಬುಧವಾರ ನಡೆದ ಫಿಫಾ ವಿಶ್ವಕಪ್ ಅಂತಿಮ 32ರ ಸುತ್ತಿನ ಪಂದ್ಯವೊಂದರಲ್ಲಿ ಅಮೆರಿಕ ತಂಡವು ಬೋಸ್ನಿಯಾ ಮತ್ತು ಹರ್ಝೇಗೊವಿನಾ ತಂಡವನ್ನು ಸೋಲಿಸಿ ಪ್ರಿಕ್ವಾರ್ಟರ್ ಫೈನಲ್ಗೆ ಸೇರ್ಪಡೆಗೊಂಡಿದೆ. ಆದರೆ, ಈ ಪಂದ್ಯದಲ್ಲಿ ಎದುರಾಳಿ ಆಟಗಾರನನ್ನು ತಡೆದದ್ದಕ್ಕಾಗಿ ಅಮೆರಿಕದ ಫ್ಲೊ ಬಾಲೋಗನ್ರಿಗೆ ರೆಫರಿ ಕೆಂಪು ಕಾರ್ಡ್ ತೋರಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ಮಾಜಿ ಫುಟ್ಬಾಲ್ ಆಟಗಾರ ಅಲೆಕ್ಸಿ ಲ್ಯಾಲಸ್, ಪಂದ್ಯಾವಳಿಯ ಆರಂಭದಲ್ಲಿ ಅರ್ಜೆಂಟೀನದ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ಇಂಥದೇ ಅಪರಾಧಕ್ಕೆ ಈ ಶಿಕ್ಷೆಯಿಂದ ಹೇಗೆ ಬಚಾವಾದರು ಎಂದು ಪ್ರಶ್ನಿಸಿದ್ದಾರೆ.
‘‘ಅದು ಕೆಂಪು ಕಾರ್ಡ್ ನೀಡಬಹುದಾದ ಅಪರಾಧವಲ್ಲ’’ ಎಂದು ಸ್ಟೇಟ್ ಆಫ್ ದ ಯೂನಿಯನ್ ಪಾಡ್ಕಾಸ್ಟ್ನಲ್ಲಿ ಲ್ಯಾಲಸ್ ಹೇಳಿದ್ದಾರೆ.
‘‘ಆ ಕ್ಷಣದಲ್ಲಿ ಅದು ಕೆಟ್ಟದಾಗಿ ಕಾಣುತ್ತದೆ, ಅದನ್ನು ವೀಡಿಯೊದಲ್ಲಿ ನೋಡಿದಾಗಲೂ ಕೆಟ್ಟದಾಗಿ ಕಾಣುತ್ತದೆ, ಹೌದು. ಆದರೆ, ಏನು ನಡೆಯುತ್ತಿದೆ ಎನ್ನುವುದರ ಅರಿವು ಮತ್ತು ತಿಳುವಳಿಕೆ ನಮಗಿರಬೇಕು. ಅದೊಂದು ಕೆಟ್ಟ ನಿರ್ಧಾರ ಎಂದು ನನಗನಿಸಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಒಂದು ವಿಷಯವನ್ನು ಇಲ್ಲಿ ಹೇಳಬೇಕು. ಅವರ ಹೆಸರು ಮೆಸ್ಸಿಯಾಗಿದ್ದರೆ, ಅವರು ಮೈದಾನದಲ್ಲೇ ಉಳಿಯುತ್ತಿದ್ದರು ಹಾಗೂ ಸೋಮವಾರ ಸಿಯಾಟಲ್ನಲ್ಲಿ ನಡೆಯುವ ಪಂದ್ಯದಲ್ಲೂ ಆಡುತ್ತಿದ್ದರು. ಇದನ್ನು ನಾವು ಈ ಪಂದ್ಯಾವಳಿಯ ಆರಂಭದಲ್ಲಿ ನೋಡಿದ್ದೇವೆ’’ ಎಂದು ಲ್ಯಾಲಸ್ ಹೇಳಿದ್ದಾರೆ.
ಬೋಸ್ನಿಯಾ ಮತ್ತು ಹರ್ಝಗೊವಿನಾ ವಿರುದ್ಧದ ಪಂದ್ಯದಲ್ಲಿ ಬಾಲೋಗನ್ ಸಿಹಿ ಮತ್ತು ಕಹಿ ಎರಡನ್ನೂ ಅನುಭವಿಸಿದ್ದಾರೆ. ಪಂದ್ಯದಲ್ಲಿ ಅವರೊಂದು ಗೋಲು ಬಾರಿಸಿದರು. ಬಳಿಕ, ಎದುರಾಳಿ ತಂಡದ ತಾರಿಕ್ ಮುಹರೆಮೊವಿಚ್ರಿಗೆ ತಡೆಯೊಡ್ಡಿದ ಆರೋಪದಲ್ಲಿ ಕೆಂಪು ಕಾರ್ಡ್ ಪಡೆದು ಮೈದಾನದಿಂದ ಹೊರ ಹೋದರು.
ಅವರು ಈ ಪಂದ್ಯಾವಳಿಯಲ್ಲಿ ಮೂರು ಗೋಲುಗಳನ್ನು ಬಾರಿಸಿದ್ದಾರೆ. ಜುಲೈ 7ರಂದು ಬೆಲ್ಜಿಯಮ್ ವಿರುದ್ಧ ನಡೆಯಲಿರುವ ಅಮೆರಿಕದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಿಂದಲೂ ಅವರು ಹೊರಗಿರುತ್ತಾರೆ.






