FIFA 2026 | ಇತಿಹಾಸ ನಿರ್ಮಿಸಿದ ಕೈಲಿಯನ್ ಎಂಬಾಪೆ

ಕೈಲಿಯನ್ ಎಂಬಾಪೆ | Photo Credit : AP
ಬೋಸ್ಟನ್, ಜು.10: ಎರಡು ಪ್ರತ್ಯೇಕ ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ 1966ರ ನಂತರ 10 ಅಥವಾ ಅದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿರುವ ಫ್ರಾನ್ಸ್ ತಂಡದ ನಾಯಕ ಕೈಲಿಯನ್ ಎಂಬಾಪೆ ಇತಿಹಾಸ ನಿರ್ಮಿಸಿದರು.
ಶುಕ್ರವಾರ ನಡೆದ ಮೊರಾಕ್ಕೊ ವಿರುದ್ಧದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 27ರ ವಯಸ್ಸಿನ ಎಂಬಾಪೆ ಈ ಮೈಲಿಗಲ್ಲು ತಲುಪಿದರು. ಒಂದು ಗೋಲು ಗಳಿಸಿದ ಎಂಬಾಪೆ, ಇನ್ನೊಂದು ಅಸಿಸ್ಟ್ ಮಾಡಿ ಫ್ರಾನ್ಸ್ ತಂಡವು 2-0 ಅಂತರದಿಂದ ಜಯಶಾಲಿಯಾಗಿ ಸೆಮಿ ಫೈನಲ್ ತಲುಪುವಲ್ಲಿ ನೆರವಾದರು.
2022ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 10 ಗೋಲುಗಳ ಕೊಡುಗೆ ನೀಡಿದ್ದ ಎಂಬಾಪೆ, ಈಗ ನಡೆಯುತ್ತಿರುವ 2026ರ ಆವೃತ್ತಿಯ ಟೂರ್ನಿಯಲ್ಲಿ ಈಗಾಗಲೆ 11 ಗೋಲುಗಳನ್ನು ಗಳಿಸಿದ್ದಾರೆ.
ಮತ್ತೊಂದು ದಾಖಲೆ ನಿರ್ಮಿಸಿದ ಎಂಬಾಪೆ
ಎಂಬಾಪೆ ಅವರು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 20 ಪಂದ್ಯಗಳನ್ನಾಡಿದ ಯುವ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಟೂರ್ನಮೆಂಟ್ನ ಇತಿಹಾಸದಲ್ಲಿ ವೇಗವಾಗಿ 20 ಗೋಲುಗಳನ್ನು ಗಳಿಸಿದ ಸಾಧನೆಯನ್ನೂ ಮಾಡಿದ್ದಾರೆ.
ಮೊರಾಕ್ಕೊ ತಂಡದ ವಿರುದ್ಧ 60ನೇ ನಿಮಿಷದಲ್ಲಿ ಗೋಲು ಗಳಿಸಿರುವ ಎಂಬಾಪೆ ತನ್ನ ವೃತ್ತಿಜೀವನದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ 20ನೇ ಗೋಲು ಗಳಿಸಿದರು. ಲಿಯೊನೆಲ್ ಮೆಸ್ಸಿ ಅವರ ಸಾರ್ವಕಾಲಿಕ ಶ್ರೇಷ್ಠ ಸ್ಕೋರ್ ದಾಖಲೆ(21)ಮುರಿಯುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ.
ರಿಯಲ್ ಮ್ಯಾಡ್ರಿಡ್ ಕ್ಲಬ್ನ ಫಾರ್ವರ್ಡ್ ಆಟಗಾರ ಎಂಬಾಪೆ, ‘ಗೋಲ್ಡನ್ ಬೂಟ್’ ಸ್ಪರ್ಧೆಯಲ್ಲಿ ಮತ್ತೊಮ್ಮೆ ಮುಂಚೂಣಿಗೆ ಬಂದಿದ್ದಾರೆ. ಎಂಬಾಪೆ ಹಾಗೂ ಮೆಸ್ಸಿ ಇಬ್ಬರೂ ಟೂರ್ನಿಯಲ್ಲಿ ಒಟ್ಟು ಎಂಟು ಗೋಲುಗಳನ್ನು ಗಳಿಸಿದ್ದಾರೆ. ಆದರೆ ಮೆಸ್ಸಿಗೆ(ಒಂದು ಅಸಿಸ್ಟ್)ಹೋಲಿಸಿದರೆ ಮೂರು ಅಸಿಸ್ಟ್ ಮಾಡಿರುವ ಫ್ರಾನ್ಸ್ ಆಟಗಾರ ಎಂಬಾಪೆ ಟೈ-ಬ್ರೇಕರ್ನಲ್ಲಿ ಮುಂದಿದ್ದಾರೆ.
ಮೆಸ್ಸಿಯೊಂದಿಗೆ ಎಂಬಾಪೆ ಸೇರ್ಪಡೆ: ಮೊರಾಕ್ಕೊ ತಂಡದ ವಿರುದ್ಧ ಪ್ರದರ್ಶನದ ನಂತರ ಎಂಬಾಪೆ ವಿಶೇಷ ಲಿಸ್ಟ್ಗೆ ಸೇರ್ಪಡೆಯಾದರು. ಎಂಬಾಪೆ ಅವರು ಹಿಂದಿನ 60 ವರ್ಷಗಳಲ್ಲಿ ಒಂದೇ ವಿಶ್ವಕಪ್ ಪಂದ್ಯದಲ್ಲಿ ಒಂದು ಗೋಲು, ಒಂದು ಅಸಿಸ್ಟ್ ಮಾಡಿದ ನಂತರ ಒಂದು ಪೆನಾಲ್ಟಿಯನ್ನು ತಪ್ಪಿಸಿಕೊಂಡ ನಾಲ್ಕನೇ ಆಟಗಾರನಾಗಿದ್ದಾರೆ.
ಗಮನಾರ್ಹ ಅಂಶವೆಂದರೆ, ಈ ಅಪರೂಪದ ಸಾಧನೆಯು ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿ ಮೂಡಿ ಬಂದಿದೆ. ಕಳೆದ 60 ವರ್ಷಗಳಲ್ಲಿ ಅತಿ ಹೆಚ್ಚು ಬಾರಿ ಅಪರೂಪದ ಸಾಧನೆಗೈದ ಏಕೈಕ ಆಟಗಾರ ಮೆಸ್ಸಿ. ಅರ್ಜೆಂಟೀನದ ನಾಯಕ ಮೆಸ್ಸಿ ಅವರು ಐದು ಬಾರಿ ಈ ರೀತಿಯ ಪ್ರದರ್ಶನ ನೀಡಿದ್ದರು.
ಎಂಬಾಪೆ ಗೋಲು ಪ್ರಶ್ನಿಸಿದ ಮೊರಾಕ್ಕೊ ಕೋಚ್
ಫ್ರಾನ್ಸ್ ವಿರುದ್ದ ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 0-2 ಅಂತರದಿಂದ ಸೋತ ನಂತರ ಕೈಲಿಯನ್ ಎಂಬಾಪೆ ಅವರ ನಿರ್ಣಾಯಕ ಗೋಲಿನ ಬಗ್ಗೆ ಮೊರಾಕ್ಕೊದ ಮುಖ್ಯ ತರಬೇತುದಾರ ಮುಹಮ್ಮದ್ ಔವಾಬಿ ಪ್ರಶ್ನಿಸಿದರು.
ಖಂಡಿತವಾಗಿಯೂ ಅದೊಂದು ಹ್ಯಾಂಡ್ಬಾಲ್ ಆಗಿತ್ತು. ಈ ಘಟನೆಯನ್ನು ವಿಎಆರ್ ಏಕೆ ಪರಿಶೀಲಿಸಲಿಲ್ಲ ಎಂಬ ಬಗ್ಗೆ ಗೊಂದಲವಿದೆ ಎಂದು ಹೇಳಿದರು.
ಎಂಬಾಪೆ 60ನೇ ನಿಮಿಷದಲ್ಲಿ ಗೋಲು ಗಳಿಸಿದ ನಂತರ ವಿವಾದ ಕಾಣಿಸಿಕೊಂಡಿತು. ಫ್ರಾನ್ಸ್ ತಂಡವು ಬಿಲ್ಡ್ಅಪ್ನಲ್ಲಿ ಚೆಂಡನ್ನು ನಿಭಾಯಿಸಿದೆ ಎಂದು ಭಾವಿಸಿ ಮೊರೊಕ್ಕೊದ ಹಲವಾರು ಆಟವಾಡುವುದನ್ನು ನಿಲ್ಲಿಸಿದರು.
ಮೊರಾಕ್ಕೊದ ವಿಶ್ವಕಪ್ ಅಭಿಯಾನ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೋಚ್, ‘‘ಈ ಘಟನೆಯು ಫ್ರೀ ಕಿಕ್ಗೆ ಕಾರಣವಾಗಬೇಕಿತ್ತೇ ಎಂದು ನನಗೆ ಖಚಿತತೆ ಇಲ್ಲ. ಆದರೆ ಹ್ಯಾಂಡ್ಬಾಲ್ ಸ್ಪಷ್ಟವಾಗಿತ್ತು. ಹ್ಯಾಂಡ್ಬಾಲ್ ಆಗಿದ್ದ ಕಾರಣ ಕೆಲವು ಆಟಗಾರರು ಅಡುವುದನ್ನು ನಿಲ್ಲಿಸಿದರು. ಅದು ಖಂಡಿತವಾಗಿಯೂ ಹ್ಯಾಂಡ್ಬಾಲ್ ಆಗಿತ್ತು. ಅಂತಿಮವಾಗಿ ಕೈಲಿಯನ್ ಎಂಬಾಪೆ ಅವರ ವೈಯಕ್ತಿಕ ಪ್ರಯತ್ನವೇ ಗೋಲಿಗೆ ಕಾರಣವಾಯಿತು’’ ಎಂದರು.
ಮೊರಾಕ್ಕೊ ತಂಡದ ಪ್ರತಿಭಟನೆಯ ಹೊರತಾಗಿಯೂ ಅಧಿಕಾರಿಗಳು ಗೋಲು ನಿರಾಕರಿಸದಿರುವುದು ಸರಿಯಾಗಿದೆ ಎಂದು ರೆಫರಿಂಗ್ ವಿಶ್ಲೇಷಕ ಜುವಾನ್ ಗುಝ್ಮಾನ್ ವಿವರಿಸಿದರು.
ಹ್ಯಾಂಡ್ಬಾಲ್ ಆಕಸ್ಮಿಕವಾಗಿತ್ತು. ಇದು ಗೋಲಿನ ಮೇಲೆ ನೇರ ಅಥವಾ ತಕ್ಷಣದ ಪರಿಣಾಮ ಬೀರಲಿಲ್ಲ. ಎಂಬಾಪೆ ಅವರ ನಿರ್ಣಾಯಕ ಕೊಡುಗೆ ನೀಡಲು ಮೊದಲು ಪೊಸೆಷನ್ ಕೈ ಬದಲಾಯಿತು. ಗೋಲು ಗಳಿಸಲು ಕಾರಣವಾದ ಅಕ್ರಮಣಕಾರಿ ಹಂತವನ್ನು ಹಿಂದಿನ ಘಟನೆಯಿಂದ ಪ್ರತ್ಯೇಕವಾಗಿ ಪರಿಗಣಿಸಲಾಗಿದೆ ಎಂದು ಗುಝ್ಮಾನ್ ಹೇಳಿದರು.






