FIFA 2026 | ಅಪರೂಪದ ವಿಶ್ವಕಪ್ ಸಾಧನೆಯೊಂದಿಗೆ ಪೀಲೆ ದಾಖಲೆ ಸರಿಗಟ್ಟಿದ ನೇಮರ್

ನೇಮರ್ | Photo Credit : AP
ಮಯಾಮಿ, ಜೂ.25: ಸ್ಕಾಟ್ಲ್ಯಾಂಡ್ ವಿರುದ್ಧ 3-0 ಅಂತರದಿಂದ ಗೆದ್ದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಬ್ರೆಝಿಲ್ ತಂಡಕ್ಕೆ ದೀರ್ಘ ಸಮಯದ ನಂತರ ಪುನರಾಗಮನಗೈದ ನೇಮರ್, ಬ್ರೆಝಿಲ್ ಫುಟ್ಬಾಲ್ ಇತಿಹಾಸದಲ್ಲಿ ಎರಡು ಅತ್ಯಂತ ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದರು.
ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ದ್ವಿತೀಯಾರ್ಧದಲ್ಲಿ ಕಣಕ್ಕಿಳಿದ 34ರ ವಯಸ್ಸಿನ ನೇಮರ್ ಅವರು ನಾಲ್ಕು ವಿವಿಧ ವಿಶ್ವಕಪ್ ಟೂರ್ನಿಗಳಲ್ಲಿ ಕಾಣಿಸಿಕೊಂಡ ಬ್ರೆಝಿಲ್ನ ನಾಲ್ಕನೇ ಆಟಗಾರ ಎನಿಸಿಕೊಂಡರು. ಎಲ್ಲ ನಾಲ್ಕು ಆವೃತ್ತಿಗಳ ಪಂದ್ಯಾವಳಿಯಲ್ಲಿ ಬ್ರೆಝಿಲ್ನ ಪ್ರತಿಷ್ಠಿತ ನಂ.10 ಜೆರ್ಸಿಯನ್ನು ಧರಿಸಿದ ಎರಡನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
ನೇಮರ್ 2022ರಲ್ಲಿ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ಅಡಿದ ನಂತರ 2023ರ ಅಕ್ಟೋಬರ್ 17ರಂದು ತನ್ನ ಕೊನೆಯ ಅಂತರ್ರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಉರುಗ್ವೆ ವಿರುದ್ಧ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದ ವೇಳೆ ಗಂಭೀರ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು.
ಬ್ರೆಝಿಲ್ನ ಶ್ರೀಮಂತ ಇತಿಹಾಸವು 1930ಕ್ಕಿಂತ ಹಿಂದಿನದು. ಆದರೆ ಕೇವಲ ನಾಲ್ವರು ಆಟಗಾರರು ಪಂದ್ಯಾವಳಿಯ ನಾಲ್ಕು ವಿಭಿನ್ನ ಆವೃತ್ತಿಗಳಲ್ಲಿ ಬ್ರೆಝಿಲ್ ತಂಡವನ್ನು ಪ್ರತಿನಿಧಿಸಿದ್ದಾರೆ.
2026ರ ಟೂರ್ನಮೆಂಟ್ನಲ್ಲಿ ಮೊದಲ ಬಾರಿ ಕಾಣಿಸಿಕೊಂಡ ನಂತರ ನೇಮರ್ ಈಗ ಆಯ್ದ ಗುಂಪಿನಲ್ಲಿ ಪೀಲೆ(1958, 1962, 1966, 1970), ಜಾಲ್ಮಾ ಸ್ಯಾಂಟೋಸ್(1954, 1958, 1962, 1966)ಹಾಗೂ ಕಾಫು (1994, 1998, 2002, 2006)ಅವರನ್ನು ಸೇರಿಕೊಂಡಿದ್ದಾರೆ.
ನೇಮರ್ ಮರಳಿಕೆಯು ಮತ್ತೊಂದು ಇತಿಹಾಸವನ್ನು ನಿರ್ಮಿಸಿದೆ. 2014, 2018, 2022 ಹಾಗೂ 2026ರ ವಿಶ್ವಕಪ್ ಟೂರ್ನಿಗಳಲ್ಲಿ ಬ್ರೆಝಿಲ್ನ ಪ್ರಸಿದ್ಧ 10ನೇ ಕ್ರಮಾಂಕದ ಶರ್ಟ್ಗಳನ್ನು ಧರಿಸುವ ಮೂಲಕ ನೇಮರ್ ನಾಲ್ಕು ಪ್ರತ್ಯೇಕ ವಿಶ್ವಕಪ್ ಆವೃತ್ತಿಗಳಲ್ಲಿ ಪೀಲೆ ನಂತರ ದೇಶದ ಅತ್ಯಂತ ಪ್ರತಿಷ್ಠಿತ ಜೆರ್ಸಿ ಧರಿಸಿದ ಬ್ರೆಝಿಲ್ನ ಎರಡನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನೇಮರ್ 76ನೇ ನಿಮಿಷದಲ್ಲಿ ಕುನ್ಹಾ ಬದಲಿಗೆ ಮೈದಾನಕ್ಕೆ ಇಳಿದಾಗ ಬ್ರೆಝಿಲ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ನೇಮರ್ ಕೇವಲ 15 ನಿಮಿಷ ಆಡಿದ್ದರೂ ತನ್ನ ಪರಿಚಿತ 10ನೇ ಕ್ರಮಾಂಕದ ಜೆರ್ಸಿ ಧರಿಸಿ ಆರಾಮದಾಯಕವಾಗಿ ಆಡಿದಂತೆ ಕಂಡುಬಂತು. ತನ್ನ 14 ಪಾಸ್ಗಳ ಪೈಕಿ 13 ಅನ್ನು ಪೂರ್ಣಗೊಳಿಸಿ ಎರಡು ಬಾರಿ ಅವಕಾಶ ಸೃಷ್ಟಿಸಿದರು.
‘‘ಫುಟ್ಬಾಲ್ನ ಅತಿ ದೊಡ್ಡ ವೇದಿಕೆಯಲ್ಲಿ ಬ್ರೆಝಿಲ್ ಶರ್ಟ್ ಅನ್ನು ಮತ್ತೊಮ್ಮೆ ಧರಿಸಿದ್ದು ನನ್ನ ವೃತ್ತಿಜೀವನದ ಅತ್ಯಂತ ವಿಶೇಷ ದಿನಗಳ ಪೈಕಿ ಒಂದಾಗಿದೆ’’ ಎಂದು ನೇಮರ್ ಬಣ್ಣಿಸಿದರು.
ಮೊದಲೆರಡು ಗ್ರೂಪ್ ಹಂತದ ಪಂದ್ಯಗಳಿಂದ ವಂಚಿತರಾಗಿದ್ದ ನೇಮರ್ ಯಾವುದೇ ದೈಹಿಕ ಹಿನ್ನಡೆ ಅನುಭವಿಸದೆ ಇರುವುದು ಬ್ರೆಝಿಲ್ ಪಾಲಿಗೆ ಅತ್ಯಂತ ಮುಖ್ಯವಾಗಿದೆ.






