FIFA 2026 | ಕ್ವಾರ್ಟರ್ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜು : ಮೊದಲ ಪಂದ್ಯದಲ್ಲಿ ಫ್ರಾನ್ಸ್-ಮೊರಾಕ್ಕೊ ಸೆಣಸಾಟ

Photo Credit : AP
ಬೋಸ್ಟನ್, ಜು.8: 2026ರ ಆವೃತ್ತಿ ಫಿಫಾ ವಿಶ್ವಕಪ್ನ ಅಂತಿಮ-16ರ ಸುತ್ತಿನ ಪಂದ್ಯವು ಫುಟ್ಬಾಲ್ ಅಭಿಮಾನಿಗಳು ನಿರೀಕ್ಷಿಸಿದ್ದ ಎಲ್ಲವನ್ನೂ ನೀಡಿದೆ. ಕೊನೆಯ ಕ್ಷಣದ ಗೆಲುವು, ನಾಟಕೀಯ ಮರು ಹೋರಾಟ, ಭಾವನಾತ್ಮಕ ವಿದಾಯಗಳು, ಪೆನಾಲ್ಟಿ ಶೂಟೌಟ್ಗಳು, ಪ್ರಮುಖ ತಂಡಗಳ ನಿರ್ಗಮನದ ನಂತರ ಫುಟ್ಬಾಲ್ನ ಅತಿದೊಡ್ಡ ಬಹುಮಾನ ಗಿಟ್ಟಿಸುವ ಸ್ಪರ್ಧೆಯಲ್ಲಿ ಇದೀಗ ಎಂಟು ತಂಡಗಳು ಉಳಿದುಕೊಂಡಿವೆ.
ಫ್ರಾನ್ಸ್, ಮೊರಾಕ್ಕೊ, ನಾರ್ವೆ, ಇಂಗ್ಲೆಂಡ್, ಸ್ಪೇನ್, ಬೆಲ್ಜಿಯಮ್, ಅರ್ಜೆಂಟೀನ ಹಾಗೂ ಸ್ವಿಟ್ಸರ್ಲ್ಯಾಂಡ್ ತಂಡಗಳು ಅಂತಿಮ-8ರ ಸುತ್ತಿನಲ್ಲಿ ಸ್ಥಾನ ಪಡೆದಿವೆ. ನಾಲ್ಕು ಬ್ಲಾಕ್ಬಸ್ಟರ್ ಕ್ವಾರ್ಟರ್ ಫೈನಲ್ ಪಂದ್ಯಗಳು ಅಮೆರಿಕದ ನಾಲ್ಕು ವಿವಿಧ ನಗರಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೈದಾನದ ಹೊರಗೆ ವಿವಾದಗಳು ಮತ್ತೊಮ್ಮೆ ಸದ್ದು ಮಾಡಿವೆ. ಅರ್ಜೆಂಟೀನ ತಂಡದ ವಿರುದ್ಧ ಸೋತಿರುವ ಈಜಿಪ್ಟ್ ತಂಡವು ರೆಫರಿಗಳು ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶದ ನಂತರ ಅಮೆರಿಕ ತಂಡದ ಆಟಗಾರ ಬಾಲೋಗನ್ ಮೇಲಿನ ನಿಷೇಧವನ್ನು ಹಿಂಪಡೆದಿರುವ ಫಿಫಾ ನಿರ್ಧಾರವು ಭಾರೀ ಟೀಕೆಗೆ ಒಳಗಾಗಿದೆ.
ಸಹ ಆತಿಥ್ಯ ದೇಶ ಕೆನಡಾವನ್ನು 3-0 ಅಂತರದಿಂದ ಮಣಿಸಿರುವ ಮೊರಾಕ್ಕೊ ತಂಡವು ತನ್ನದೇ ಶೈಲಿಯಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದೆ. ಮೊರಾಕ್ಕೊ ತಂಡವು 2022ರ ಪ್ರದರ್ಶನವನ್ನು ಮುಂದುವರಿಸಿದರೆ, ಕೆನಡಾ ಇದೇ ಮೊದಲ ಬಾರಿ ವಿಶ್ವಕಪ್ನ ನಾಕೌಟ್ ಹಂತಕ್ಕೇರಿತ್ತು.
ಫ್ರಾನ್ಸ್ ತಂಡವು ಅಂತಿಮ-16ರ ಸುತ್ತಿನಲ್ಲಿ ಪರಾಗ್ವೆ ತಂಡದ ಪ್ರತಿರೋಧವನ್ನು ಹತ್ತಿಕ್ಕಿ 1-0 ಅಂತರದಿಂದ ಮಣಿಸಿದೆ.
ನ್ಯೂ ಜೆರ್ಸಿಯಲ್ಲಿ ನಾರ್ವೆ ತಂಡವು ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡವನ್ನು 2-1 ರಿಂದ ಮಣಿಸಿ ಶಾಕ್ ನೀಡಿತು. ಎರ್ಲಿಂಗ್ ಹಾಲ್ಯಾಂಡ್ ಎರಡು ಗೋಲು ಗಳಿಸಿ ನಾರ್ವೆಗೆ ಗೆಲುವು ತಂದುಕೊಟ್ಟರು. ಕೊನೆಯ ಕ್ಷಣದಲ್ಲಿ ಗೋಲು ಗಳಿಸಿದ ನೇಮರ್ ತನ್ನ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡಿದರು. ನಿರ್ಭೀತಿಯ ಪ್ರದರ್ಶನ ನೀಡುತ್ತಿರುವ ನಾರ್ವೆ ತಂಡವು ಟೂರ್ನಮೆಂಟ್ನ ಅಪಾಯಕಾರಿ ತಂಡದ ಪೈಕಿ ಒಂದಾಗಿದೆ.
ಫುಟ್ಬಾಲ್ನ ಇನ್ನೋರ್ವ ಐಕಾನ್ ಕ್ರಿಸ್ಟಿಯಾನೊ ರೊನಾಲ್ಡೊ ಕೂಡ ವಿಶ್ವಕಪ್ಗೆ ವಿದಾಯ ಹೇಳಿದರು. ಮಿಕೆಲ್ ಮೆರಿಯೊ ಹೆಚ್ಚುವರಿ ಸಮಯದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಸ್ಪೇನ್ ತಂಡವು ಪೋರ್ಚುಗಲ್ ತಂಡವನ್ನು 1-0 ಅಂತರದಿಂದ ಮಣಿಸಿದೆ.
ಅಂತಿಮ-32ರ ಸುತ್ತಿನಲ್ಲಿ ರೆಡ್ಕಾರ್ಡ್ ಪಡೆದಿದ್ದ ಫೊಲಾರಿನ್ ಬಾಲೋಗನ್ ಅವರ ಮೇಲಿನ ನಿಷೇಧವನ್ನು ಹಿಂಪಡೆದಿರುವ ಫಿಫಾದ ವಿವಾದಾತ್ಮಕ ನಿರ್ಧಾರದ ನಡುವೆಯೂ ಬೆಲ್ಜಿಯಮ್ ತಂಡವು ಅಮೆರಿಕ ತಂಡವನ್ನು 4-1 ಅಂತರದಿಂದ ಜಯ ಗಳಿಸಿದೆ.
ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡವು ಲಿಯೊನೆಲ್ ಮೆಸ್ಸಿ ನೆರವಿನಿಂದ 0-2ರಿಂದ ಹಿನ್ನಡೆಯಿಂದ ಪುಟಿದೆದ್ದು, 13 ನಿಮಿಷಗಳಲ್ಲಿ ಮೂರು ಗೋಲುಗಳನ್ನು ಗಳಿಸಿ ಈಜಿಪ್ಟ್ ವಿರುದ್ಧ ಸೋಲಿನ ದವಡೆಯಿಂದ ಪಾರಾಯಿತು.
ಕೊನೆಯ ಅಂತಿಮ-16ರ ಪಂದ್ಯದಲ್ಲಿ ಸ್ವಿಟ್ಸರ್ಲ್ಯಾಂಡ್ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ ಕೊಲಂಬಿಯಾ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
ಕ್ವಾರ್ಟರ್ ಫೈನಲ್ ಪಂದ್ಯವು ಮತ್ತೊಂದು ಸುತ್ತಿನ ಹಣಾಹಣಿಯ ಭರವಸೆ ಮೂಡಿಸಿದೆ. ಮೊರೊಕ್ಕೊ ತಂಡವು ಸೇಡನ್ನು ಮನಸ್ಸಿನಲ್ಲಿಟ್ಟುಕೊಂಡು ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಮೊರಾಕ್ಕೊ ತಂಡ 2022ರ ವಿಶ್ವಕಪ್ನ ಸೆಮಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.
ಯುರೋಪಿನ ಎರಡು ಬಲಿಷ್ಠ ತಂಡಗಳಾದ ಸ್ಪೇನ್ ಹಾಗೂ ಬೆಲ್ಜಿಯಮ್ ಸೆಣಸಾಡಲಿವೆ. ನಾರ್ವೆಯ ಕನಸಿನ ಓಟಕ್ಕೆ ಇಂಗ್ಲೆಂಡ್ನಿಂದ ಕಠಿಣ ಪರೀಕ್ಷೆ ಎದುರಾಗಿದೆ. ಶ್ರೇಷ್ಠ ಸ್ಟ್ರೈಕರ್ಗಳಾದ ಹಾಲ್ಯಾಂಡ್ ಹಾಗೂ ಹ್ಯಾರಿ ಕೇನ್ ಮುಖಾಮುಖಿಯಾಗಲಿದ್ದಾರೆ.
ಇದೇ ವೇಳೆ, ಸ್ವಿಟ್ಸರ್ಲ್ಯಾಂಡ್ ತಂಡವು ಜುಲೈ 12ರಂದು ಕಾನ್ಸಾಸ್ ಸಿಟಿಯಲ್ಲಿ ಅರ್ಜೆಂಟೀನದ ಸವಾಲನ್ನು ಎದುರಿಸಲಿದೆ.






