FIFA 2026 | ಬದಲಿ ಆಟಗಾರ ಜೋಹಾನ್ ಮಂಜಾಂಬಿ ಮಿಂಚಿನ ಪ್ರದರ್ಶನ: ಬೋಸ್ನಿಯಾ ವಿರುದ್ಧ ಸ್ವಿಟ್ಜರ್ಲೆಂಡ್ಗೆ 4-1 ಅಂತರದ ಭರ್ಜರಿ ಗೆಲುವು

ಜೋಹಾನ್ ಮಂಜಾಂಬಿ Photo: x.com/cloudninesports
ಲಾಸ್ ಏಂಜಲೀಸ್: ಬಿ ಗುಂಪಿನ ಪಂದ್ಯದಲ್ಲಿ ಬದಲಿ ಆಟಗಾರ ಜೋಹಾನ್ ಮಂಜಾಂಬಿಯ ಮಿಂಚಿನ ಅವಳಿ ಗೋಲುಗಳ ನೆರವಿನಿಂದ ಸ್ವಿಟ್ಜರ್ಲೆಂಡ್ ತಂಡವು ಬೋಸ್ನಿಯಾ-ಹೆರ್ಜೆಗೊವಿನಾ ವಿರುದ್ಧ 4-1 ಅಂತರದ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ವಿಶ್ವಕಪ್ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ.
ಮೊದಲ 73 ನಿಮಿಷಗಳ ಕಾಲ ಯಾವುದೇ ವಿಶೇಷ ರೋಮಾಂಚನವಿಲ್ಲದೆ ಸಾಮಾನ್ಯವಾಗಿ ಸಾಗಿದ ಪಂದ್ಯವು, 20 ವರ್ಷದ ಯುವ ಆಟಗಾರ ಜೋಹಾನ್ ಮಂಜಾಂಬಿ ಮೈದಾನ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ರೋಚಕತೆಗೆ ಸಾಗಿತು. ಅವರು ಹೊಡೆದ ಆಕರ್ಷಕ ಗೋಲು ಸ್ವಿಟ್ಜರ್ಲೆಂಡ್ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟಿತು.
ಇದರ ಬೆನ್ನಲ್ಲೇ, ಗೋಲು ಗಳಿಸುವ ಸ್ಪಷ್ಟ ಅವಕಾಶದಲ್ಲಿದ್ದ ಬ್ರೀಲ್ ಎಂಬೊಲೊ ಅವರ ಹಿಮ್ಮಡಿಗೆ ಒದ್ದು ಕೆಳಗೆ ಬೀಳಿಸಿದ್ದಕ್ಕಾಗಿ ಬೋಸ್ನಿಯಾದ ರಕ್ಷಣಾ ಆಟಗಾರ ತಾರಿಕ್ ಮುಹಾರೆಮೊವಿಕ್ ಅವರಿಗೆ ಕೆಂಪು ಕಾರ್ಡ್ ತೋರಿಸಲಾಯಿತು.
ಮತ್ತಷ್ಟು ರೋಚಕತೆಗೆ ಸಾಗಿದ ಪಂದ್ಯದಲ್ಲಿ, ಎಂಬೊಲೊ ನೀಡಿದ ಪಾಸ್ ನೆರವಿನಿಂದ ಮತ್ತೊಬ್ಬ ಬದಲಿ ಆಟಗಾರ ರೂಬೆನ್ ವರ್ಗಾಸ್ ಸುಲಭ ಗೋಲು ಗಳಿಸಿ ಅಂತರವನ್ನು 2-0 ಗೆ ಹೆಚ್ಚಿಸಿದರು.
ಪಂದ್ಯದ 90ನೇ ನಿಮಿಷದಲ್ಲಿ ಮಂಜಾಂಬಿ ಮತ್ತೊಂದು ಗೋಲು ಬಾರಿಸುವುದರೊಂದಿಗೆ ತಂಡದ ಮುನ್ನಡೆಯನ್ನು 3-0ಗೆ ಕೊಂಡೊಯ್ದರು.
ಈ ಹಂತದಲ್ಲಿ ಬೋಸ್ನಿಯಾ ದೇಶದ ಪರವಾಗಿ ಕೇವಲ ಮೂರನೇ ಪಂದ್ಯವಾಡುತ್ತಿದ್ದ ಎರ್ಮಿನ್ ಮಹ್ಮಿಕ್, ಬಲವಾದ ಹೊಡೆತದ ಮೂಲಕ ಸೊಗಸಾದ ಗೋಲು ಗಳಿಸಿ ಅಂತರವನ್ನು ಕೊಂಚ ತಗ್ಗಿಸಿದರು.
ಆದರೆ ಪಂದ್ಯ ಮುಗಿಯಲು ಕೆಲವೇ ಕ್ಷಣಗಳು ಬಾಕಿ ಇರುವಾಗ ಪೆನಾಲ್ಟಿ ಮೂಲಕ ಸ್ವಿಟ್ಜರ್ಲೆಂಡ್ ತಂಡದ ನಾಯಕ ಗ್ರಾನಿಟ್ ಝಾಕಾ ಅತ್ಯಂತ ಸುಲಭ ಗೋಲು ಗಳಿಸಿ ಅಂತರವನ್ನು ಹೆಚ್ಚಿಸಿದರು.
ಈ ಮೂಲಕ ಸ್ವಿಟ್ಜರ್ಲೆಂಡ್ ಪೂರ್ಣ ಅಂಕಗಳನ್ನು ಪಡೆದು ಗುಂಪಿನಲ್ಲಿ 2ನೇ ಸ್ಥಾನದಲ್ಲಿದ್ದು, ಬೋಸ್ನಿಯಾ 3ನೇ ಸ್ಥಾನದಲ್ಲಿದೆ.






