ಫಿಫಾ ರ್ಯಾಂಕಿಂಗ್ | ಅರ್ಜೆಂಟೀನದ ಅಗ್ರ ಸ್ಥಾನ ಭದ್ರ
124ನೇ ಸ್ಥಾನ ಉಳಿಸಿಕೊಂಡ ಭಾರತ

PC : X
ಹೊಸದಿಲ್ಲಿ : ಇತ್ತೀಚೆಗೆ ಕೊನೆಗೊಂಡ ಕೊಪಾ ಅಮೆರಿಕ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಅರ್ಜೆಂಟೀನ ತಂಡ ಗುರುವಾರ ಬಿಡುಗಡೆಯಾದ ಫಿಫಾ ಪುರುಷರ ರ್ಯಾಂಕಿಂಗ್ನಲ್ಲಿ ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಭಾರತ ಫುಟ್ಬಾಲ್ ತಂಡವು 124ನೇ ಸ್ಥಾನವನ್ನು ಉಳಿಸಿಕೊಂಡಿದೆ.
ಖತರ್ ಹಾಗೂ ಅಫ್ಘಾನಿಸ್ತಾನ ತಂಡಗಳ ವಿರುದ್ಧ ಸೋತ ನಂತರ 2025ರ ವಿಶ್ವಕಪ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದ ಭಾರತೀಯ ಪುರುಷರ ರಾಷ್ಟ್ರೀಯ ಫುಟ್ಬಾಲ್ ತಂಡವು ಜೂನ್ ನಲ್ಲಿ ಬಿಡುಗಡೆಯಾಗಿದ್ದ ರ್ಯಾಂಕಿಂಗ್ನಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡಿತ್ತು.
ಕಳೆದ ವರ್ಷ ಡಿಸೆಂಬರ್ ನಿಂದ ಭಾರತದ ರ್ಯಾಂಕಿಂಗ್ ಇಳಿಮುಖವಾಗುತ್ತಿದೆ. ಈ ಹಿಂದೆ 99ನೇ ರ್ಯಾಂಕಿಗೆ ತಲುಪುವ ಮೂಲಕ ಅಗ್ರ-100ರೊಳಗೆ ಸ್ಥಾನ ಪಡೆದಿತ್ತು.
ಏಶ್ಯನ್ ರ್ಯಾಂಕಿಂಗ್ ನಲ್ಲಿ ಭಾರತ ತಂಡವು 22ನೇ ಸ್ಥಾನವನ್ನು ಉಳಿಸಿಕೊಂಡಿದ್ದು, ಲೆಬಾನನ್, ಫೆಲೆಸ್ತೀನ್ ಹಾಗೂ ವಿಯೆಟ್ನಾಂಗಿಂತ ಹಿಂದಿದೆ.
ಕೊಪಾ ಅಮೆರಿಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಅರ್ಜೆಂಟೀನ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲನೇ ಸ್ಥಾನ ಭದ್ರಪಡಿಸಿಕೊಂಡಿದೆ. ಯುರೋ-2024ರಲ್ಲಿ ಸೆಮಿ ಫೈನಲ್ಗೆ ತಲುಪಿದ್ದ ಫ್ರಾನ್ಸ್ ತಂಡ 2ನೇ ಸ್ಥಾನ ಕಾಯ್ದುಕೊಂಡು ಅರ್ಜೆಂಟೀನಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.
ಯುರೋಪಿಯನ್ ಚಾಂಪಿಯನ್ಶಿಪ್ ನಲ್ಲಿ ವಿನ್ನರ್ ಟ್ರೋಫಿ ಗಳಿಸಿರುವ ಸ್ಪೇನ್ 5 ಸ್ಥಾನ ಮೇಲಕ್ಕೇರಿ 3ನೇ ಸ್ಥಾನ ತಲುಪಿದೆ. ಯುರೋ ಕಪ್ನ ರನ್ನರ್ಸ್ ಅಪ್ ಇಂಗ್ಲೆಂಡ್ 1 ಸ್ಥಾನ ಜಿಗಿದು 4ನೇ ಸ್ಥಾನದಲ್ಲಿದೆ. ಬ್ರೆಝಿಲ್ ಒಂದು ಸ್ಥಾನ ಕಳೆದುಕೊಂಡು 5ನೇ ಸ್ಥಾನಕ್ಕೆ ಕುಸಿದಿದೆ.
ಬೆಲ್ಜಿಯಮ್(6ನೇ ಸ್ಥಾನ)ಮೂರು ಸ್ಥಾನ ಕಳೆದುಕೊಂಡು ಅಗ್ರ-5ರಿಂದ ಹೊರಗುಳಿದಿದೆ. ನೆದರ್ಲ್ಯಾಂಡ್ಸ್(7ನೇ ಸ್ಥಾನ) ಹಾಗೂ ಪೋರ್ಚುಗಲ್(8ನೇ ಸ್ಥಾನ, 2 ಸ್ಥಾನ ನಷ್ಟ)ಆ ನಂತರದ ಸ್ಥಾನದಲ್ಲಿವೆ. ಕೊಪಾ ಅಮೆರಿಕ ಫೈನಲ್ನಲ್ಲಿ ಅರ್ಜೆಂಟೀನ ವಿರುದ್ಧ 1-2 ಅಂತರದಿಂದ ಸೋತಿದ್ದ ಕೊಲಂಬಿಯಾ 3 ಸ್ಥಾನ ಮೇಲಕ್ಕೇರಿ 9ನೇ ಸ್ಥಾನದಲ್ಲಿದೆ.







