FIFA World Cup 2026 | ನೀರಿನ ಬಾಟಲಿ ವಿವಾದದಲ್ಲಿ ಯೂ–ಟರ್ನ್ ತೆಗೆದುಕೊಂಡ FIFA

Photo Credit : x@FIFAcom
ನ್ಯೂಯಾರ್ಕ್, ಜೂ. 7: 2026ರ FIFA ವಿಶ್ವಕಪ್ ವೇಳೆ ಕ್ರೀಡಾಂಗಣಗಳಿಗೆ ನೀರಿನ ಬಾಟಲಿಗಳನ್ನು ಕೊಂಡೊಯ್ಯುವ ಕುರಿತ ತನ್ನ ನಿಯಮದಲ್ಲಿ FIFA ಬದಲಾವಣೆ ಮಾಡಿದ್ದು, ಅಭಿಮಾನಿಗಳಿಂದ ವ್ಯಕ್ತವಾದ ತೀವ್ರ ವಿರೋಧದ ಬಳಿಕ ನಿಲುವು ಸಡಿಲಿಸಿದೆ.
ಅಮೆರಿಕ ಹಾಗೂ ಕೆನಡಾದಲ್ಲಿ ನಡೆಯುವ ಪಂದ್ಯಗಳಿಗೆ ಆಗಮಿಸುವ ಪ್ರೇಕ್ಷಕರು ಸೀಲ್ ಮಾಡಲಾದ ನೀರಿನ ಬಾಟಲಿಗಳನ್ನು ಕ್ರೀಡಾಂಗಣಗಳಿಗೆ ಕೊಂಡೊಯ್ಯಲು ಅವಕಾಶ ನೀಡಲಾಗುವುದು ಎಂದು FIFA ಸ್ಪಷ್ಟಪಡಿಸಿದೆ. ಆದರೆ ಮೆಕ್ಸಿಕೊದಲ್ಲಿ ನಡೆಯುವ ಪಂದ್ಯಗಳಿಗೂ ಇದೇ ನಿಯಮ ಅನ್ವಯವಾಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಮೊದಲು ಒಂದು ಲೀಟರ್ ಸಾಮರ್ಥ್ಯದ ಪಾರದರ್ಶಕ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮಾತ್ರ ತರಲು ಅವಕಾಶ ನೀಡಲಾಗಿತ್ತು. ಅಭಿಮಾನಿಗಳು ಕ್ರೀಡಾಂಗಣದೊಳಗಿನ ಕುಡಿಯುವ ನೀರಿನ ಘಟಕಗಳಲ್ಲಿ ಅವುಗಳನ್ನು ತುಂಬಿಸಿಕೊಳ್ಳಬಹುದಾಗಿತ್ತು.
ಆದರೆ ಬಳಿಕ FIFA ತನ್ನ ನಿಯಮಾವಳಿಯನ್ನು ಪರಿಷ್ಕರಿಸಿ ಈ ಅವಕಾಶವನ್ನು ಕೈಬಿಟ್ಟಿತ್ತು. ಇದರಿಂದ ಪ್ರೇಕ್ಷಕರು ಕ್ರೀಡಾಂಗಣದೊಳಗಿನ ಮಾರಾಟ ಕೇಂದ್ರಗಳಿಂದಲೇ ಪಾನೀಯಗಳನ್ನು ಖರೀದಿಸಬೇಕಾಗುವ ಪರಿಸ್ಥಿತಿ ಉಂಟಾಗಿತ್ತು.
ವಿಶ್ವಕಪ್ ಪಂದ್ಯಗಳು ಉತ್ತರ ಅಮೆರಿಕಾದ ಬೇಸಿಗೆ ಅವಧಿಯಲ್ಲಿ ನಡೆಯಲಿರುವ ಕಾರಣ ತೀವ್ರ ಬಿಸಿಲು ಹಾಗೂ ಕುಡಿಯುವ ನೀರಿನ ಲಭ್ಯತೆ ಕುರಿತು ಕಳವಳ ವ್ಯಕ್ತವಾಗಿತ್ತು. ರಾಜಕಾರಣಿಗಳು, ಆರೋಗ್ಯ ತಜ್ಞರು ಹಾಗೂ ಅಭಿಮಾನಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಬಳಿಕ FIFA ತನ್ನ ನಿರ್ಧಾರವನ್ನು ಮರುಪರಿಶೀಲಿಸಿದೆ.






