ಫಿಫಾ ವಿಶ್ವಕಪ್ 2026: ಟಿಕೆಟ್ ಖರೀದಿಗೆ ಈ ತಿಂಗಳು ಚಾಲನೆ

ಫಿಫಾ ವಿಶ್ವಕಪ್
ಲಾಸ್ ಏಂಜಲಿಸ್, ಸೆ. 4: 2026ರ ಫುಟ್ಬಾಲ್ ವಿಶ್ವಕಪ್ ನ ಬಹು ಹಂತಗಳ ಟಿಕೆಟ್ ಮಾರಾಟ ಪ್ರಕ್ರಿಯೆಗೆ ಕ್ರೀಡೆಯ ಜಾಗತಿಕ ಆಡಳಿತ ಮಂಡಳಿ ಫಿಫಾ ಈ ತಿಂಗಳು ಚಾಲನೆ ನೀಡಲಿದೆ.
ಗುಂಪು ಹಂತದ ಪಂದ್ಯಗಳ ಟಿಕೆಟ್ ಬೆಲೆಯು 60 ಡಾಲರ್ (5,283 ರೂ.)ನಿಂದ ಆರಂಭಗೊಂಡರೆ, ಗರಿಷ್ಠ ಬೆಲೆಯು ಫೈನಲ್ ಪಂದ್ಯಕ್ಕೆ 6,710 ಡಾಲರ್ (5.9 ಲಕ್ಷ ರೂಪಾಯಿ) ಆಗಿದೆ.
ಟಿಕೆಟ್ ಬೆಲೆಗಳು ಬೇಡಿಕೆಯನ್ನು ಆಧರಿಸಿ ಹೆಚ್ಚು ಕಡಿಮೆಯಾಗುತ್ತವೆ. ಅಭಿಮಾನಿಗಳು ಒಂದು ಪಂದ್ಯದ ಟಿಕೆಟ್ ಗಳು, ಒಂದು ಮೈದಾನದಲ್ಲಿ ನಡೆಯುವ ಎಲ್ಲಾ ಪಂದ್ಯಗಳ ಟಿಕೆಟ್ಗಳು ಮತ್ತು ಒಂದು ತಂಡ ಆಡುವ ಪಂದ್ಯಗಳ ಟಿಕೆಟ್ ಪ್ಯಾಕೇಜ್ ಗಳನ್ನು ಖರೀದಿಸಬಹುದಾಗಿದೆ.
ಬುಧವಾರ ಮೊದಲ ಹಂತದ ಟಿಕೆಟ್ ಮಾರಾಟಗಳ ವೇಳಾಪಟ್ಟಿಯನ್ನು ಪ್ರಕಟಿಸುತ್ತಾ ಫಿಫಾ ಈ ವಿಷಯವನ್ನು ತಿಳಿಸಿದೆ.
ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ಜಂಟಿಯಾಗಿ ಮುಂದಿನ ವರ್ಷ ಜೂನ್ 11ರಿಂದ ಜುಲೈ 19ರವರೆಗೆ ನಡೆಯಲಿರುವ ವಿಶ್ವಕಪ್ ನಲ್ಲಿ 48 ತಂಡಗಳು ಭಾಗವಹಿಸಲಿವೆ. ಫಿಫಾ ವಿಶ್ವಕಪ್ ಒಂದರಲ್ಲಿ ಆಡುವ ತಂಡಗಳ ಸಂಖ್ಯೆಯ ಮಟ್ಟಿಗೆ ಇದೊಂದು ದಾಖಲೆಯಾಗಿದೆ.
ವೀಸಾ ಕಾರ್ಡ್ ಹೊಂದಿರುವವರು ಫಿಫಾ ಯೂಸರ್ ಐಡಿಗಾಗಿ ಅದರ ವೆಬ್ ಸೈಟ್ ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದಾಗಿದೆ. ಅವರು ಸೆಪ್ಟಂಬರ್ 10ರಿಂದ 19ರವರೆಗೆ ನಡೆಯಲಿರುವ ಮಾರಾಟ ಪೂರ್ವ ಡ್ರಾದಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಟ್ಟಾರೆಯಾಗಿ ನಡೆಯುವ ಮಾರಾಟ ಪೂರ್ವ ಡ್ರಾದಲ್ಲಿ ಆಯ್ಕೆಯಾಗುವವರು, ಬಳಿಕ ಅಕ್ಟೋಬರ್ ಒಂದರಿಂದ ಟಿಕೆಟ್ ಗಳ ಖರೀದಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಒಬ್ಬರಿಗೆ ಒಂದು ಪಂದ್ಯಕ್ಕೆ ನಾಲ್ಕಕ್ಕಿಂತ ಹೆಚ್ಚು ಟಿಕೆಟ್ ಗಳನ್ನು ನೀಡಲಾಗುವುದಿಲ್ಲ.







