ಜೂ. 11ರಂದು FIFA World Cup 2026 ಗೆ ಚಾಲನೆ | ಅಮೆರಿಕ, ಕೆನಡಾ, ಮೆಕ್ಸಿಕೊ ಜಂಟಿ ಆತಿಥ್ಯ; ಮೊದಲ ಬಾರಿಗೆ 48 ತಂಡಗಳು

Photo Credit : x@FIFAcom
ನ್ಯೂಯಾರ್ಕ್, ಜೂ. 7: ವಿಶ್ವದ ಅತಿದೊಡ್ಡ ಹಾಗೂ ಅತ್ಯಂತ ಜನಪ್ರಿಯ ಕ್ರೀಡಾಕೂಟಗಳಲ್ಲಿ ಒಂದಾದ FIFA ವಿಶ್ವಕಪ್ ಫುಟ್ಬಾಲ್ ಟೂರ್ನಿಯ 2026ರ ಆವೃತ್ತಿಗೆ ಜೂ. 11ರಂದು ಚಾಲನೆ ದೊರೆಯಲಿದೆ. ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ದೇಶಗಳು ಜಂಟಿಯಾಗಿ ಟೂರ್ನಿಗೆ ಆತಿಥ್ಯ ವಹಿಸುತ್ತಿವೆ.
ಈ ಬಾರಿಯ ವಿಶ್ವಕಪ್ ಹಲವು ಕಾರಣಗಳಿಂದ ಐತಿಹಾಸಿಕ ಮಹತ್ವ ಪಡೆದಿದೆ. ಮೊದಲ ಬಾರಿಗೆ 48 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಇದು ವಿಶ್ವಕಪ್ ಇತಿಹಾಸದಲ್ಲೇ ಅತಿದೊಡ್ಡ ಆವೃತ್ತಿಯಾಗಿದೆ.
1930ರಲ್ಲಿ ಉರುಗ್ವೆಯಲ್ಲಿ ನಡೆದ ಮೊದಲ ವಿಶ್ವಕಪ್ ನಲ್ಲಿ ಕೇವಲ 13 ತಂಡಗಳು ಪಾಲ್ಗೊಂಡಿದ್ದವು. ಬಳಿಕ 1978ರವರೆಗೆ 16 ತಂಡಗಳು, 1982ರಲ್ಲಿ 24 ತಂಡಗಳು ಹಾಗೂ 1998ರಿಂದ 32 ತಂಡಗಳು ಸ್ಪರ್ಧಿಸುತ್ತಿದ್ದವು. ಇದೀಗ ತಂಡಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
ಖತರ್ ನಲ್ಲಿ 2022ರಲ್ಲಿ ನಡೆದ ಹಿಂದಿನ ವಿಶ್ವಕಪ್ ನಲ್ಲಿ ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ ಚಾಂಪಿಯನ್ ಆಗಿತ್ತು. ಫೈನಲ್ ನಲ್ಲಿ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸುವ ಮೂಲಕ ಅರ್ಜೆಂಟೀನಾ ಮೂರನೇ ಬಾರಿ ಪ್ರಶಸ್ತಿ ಗೆದ್ದಿತ್ತು.
ಹಾಲಿ ಚಾಂಪಿಯನ್ ಅರ್ಜೆಂಟೀನಾ, ಐದು ಬಾರಿಯ ಚಾಂಪಿಯನ್ ಬ್ರೆಝಿಲ್, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್ ಸೇರಿದಂತೆ ಹಲವು ಬಲಿಷ್ಠ ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.




