FIFA World Cup 2026 | ಪಾಸ್ ಗಳಲ್ಲಿ ವಿಶ್ವದಾಖಲೆ ನಿರ್ಮಿಸಿದ ಸ್ಪೇನ್ ಮಿಡ್ಫೀಲ್ಡರ್ ರೋಡ್ರಿ

Photo credit: PTI
ಹೊಸದಿಲ್ಲಿ, ಜು. 15: ಫಿಫಾ ವಿಶ್ವಕಪ್ನಲ್ಲಿ ಬುಧವಾರ ನಡೆದ ಫ್ರಾನ್ಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ನ ಮಿಡ್ಫೀಲ್ಡರ್ ರೋಡ್ರಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ ಸ್ಪೇನ್ನ 2-0 ಅಂತರದ ವಿಜಯಕ್ಕೆ ನೆರವು ನೀಡಿದ್ದಾರೆ.
ರೋಡ್ರಿ ಹಾಲಿ ಪಂದ್ಯಾವಳಿಯಲ್ಲಿ 655 ಪಾಸ್ ಗಳನ್ನು ಪೂರೈಸಿದ್ದಾರೆ. ಆ ಮೂಲಕ, 1966ರಲ್ಲಿ ದಾಖಲೆಗಳು ಆರಂಭವಾದಂದಿನಿಂದ ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ಪಾಸ್ ಗಳನ್ನು ಪೂರೈಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
30 ವರ್ಷದ ಆಟಗಾರ ಗಾಯದಿಂದಾಗಿ ಸುದೀರ್ಘ ಅವಧಿಯವರೆಗೆ ಮೈದಾನದಿಂದ ಹೊರಗಿದ್ದ ಬಳಿಕ ಅತ್ಯುನ್ನತ ಜಾಗತಿಕ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಮರುನಿರೂಪಿಸಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ, ಮ್ಯಾಂಚೆಸ್ಟರ್ ಸಿಟಿ ಪರವಾಗಿ ಆರ್ಸೆನಲ್ ತಂಡದ ವಿರುದ್ಧ ಆಡುತ್ತಿದ್ದಾಗ ಗಂಭೀರವಾಗಿ ಗಾಯಗೊಂಡಿದ್ದರು. ಗಾಯದ ವಿಶ್ರಾಂತಿಯಿಂದ ವಾಪಸ್ ಬಂದ ಬಳಿಕ, ಫ್ರಾನ್ಸ್ ವಿರುದ್ಧದ ನಿರ್ವಹಣೆಯು ಅವರ ಶ್ರೇಷ್ಠ ನಿರ್ವಹಣೆಗಳ ಪೈಕಿ ಒಂದಾಗಿದೆ.
ಚೆಂಡು ತನ್ನ ವಶದಲ್ಲಿದ್ದಾಗ ಶಾಂತವಾಗಿರುವುದು ಮತ್ತು ವಶದಲ್ಲಿ ಇಲ್ಲದಿದ್ದಾಗ ಅಶಾಂತವಾಗಿರುವುದು ಅವರ ವೈಶಿಷ್ಟ್ಯವಾಗಿದೆ. ಅವರು ಸ್ಪೇನ್ನ ಮಿಡ್ಫೀಲ್ಡ್ ಅನ್ನು ಸಮರ್ಥವಾಗಿ ನಿಭಾಯಿಸಿದರು ಮತ್ತು ಫ್ರಾನ್ಸ್ ನ ಅಪಾಯಕಾರಿ ದಾಳಿಯು ಲಯ ಕಂಡುಕೊಳ್ಳದಂತೆ ನೋಡಿಕೊಂಡರು.
ಅವರು ವಿಶ್ವ ಫುಟ್ಬಾಲ್ನ ಅತ್ಯಂತ ಪ್ರಭಾವಶಾಲಿ ಮಿಡ್ಫೀಲ್ಡರ್ ಗಳ ಪೈಕಿ ಒಬ್ಬರಾಗಿದ್ದು, 2024ರಲ್ಲಿ ಶ್ರೇಷ್ಠ ಆಟಗಾರನಿಗೆ ನೀಡಲಾಗುವ ಚಿನ್ನದ ಚೆಂಡು ಪ್ರಶಸ್ತಿಯನ್ನು ಪಡೆದಿದ್ದಾರೆ.






