FIFA World Cup 2026 | ಅಭ್ಯಾಸ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮಿಂಚು; ಬ್ರೆಝಿಲ್, ಅರ್ಜೆಂಟೀನಾ, ಜರ್ಮನಿಗೂ ಜಯ

Photo Credit : x@selecaoportugal
ನ್ಯೂಯಾರ್ಕ್, ಜೂ. 7: ಫಿಫಾ ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಗಳಲ್ಲಿ ಪ್ರಮುಖ ತಂಡಗಳು ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿವೆ.
ಕ್ರಿಸ್ಟಿಯಾನೊ ರೊನಾಲ್ಡೊ ಆಡಿದ ಪಂದ್ಯದಲ್ಲಿ ಪೋರ್ಚುಗಲ್ ತಂಡವು ಚಿಲಿ ವಿರುದ್ಧ 2–1 ಅಂತರದ ಗೆಲುವು ದಾಖಲಿಸಿತು. ಮೊದಲಾರ್ಧದಲ್ಲಿ ರೊನಾಲ್ಡೊ ಕಣಕ್ಕಿಳಿದಿದ್ದು, ದ್ವಿತೀಯಾರ್ಧದಲ್ಲಿ ತಂಡ ನಿರ್ಣಾಯಕ ಗೋಲು ಗಳಿಸುವ ಮೂಲಕ ಜಯ ತನ್ನದಾಗಿಸಿಕೊಂಡಿತು. ವಿಶ್ವಕಪ್ ಗೆ ಮುನ್ನ ಪೋರ್ಚುಗಲ್ ತನ್ನ ಸಿದ್ಧತೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡವು ಈಜಿಪ್ಟ್ ವಿರುದ್ಧ 2–1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ವಿಶ್ವಕಪ್ ನಲ್ಲಿ ತನ್ನ ಅಭಿಯಾನವನ್ನು ಮೊರೊಕ್ಕೊ ವಿರುದ್ಧ ಆರಂಭಿಸಲಿರುವ ಬ್ರೆಝಿಲ್ ಗೆ ಈ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ.
ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವು ಟೆಕ್ಸಾಸ್ ನಲ್ಲಿ ನಡೆದ ಪಂದ್ಯದಲ್ಲಿ ಹೊಂಡುರಾಸ್ ತಂಡವನ್ನು 2–0 ಅಂತರದಿಂದ ಮಣಿಸಿತು. ಶಿಸ್ತುಬದ್ಧ ಆಟ ಪ್ರದರ್ಶಿಸಿದ ಅರ್ಜೆಂಟೀನಾ ಕ್ಲೀನ್ ಶೀಟ್ ಕಾಯ್ದುಕೊಳ್ಳುವಲ್ಲಿಯೂ ಯಶಸ್ವಿಯಾಯಿತು.
ಸಹ ಆತಿಥ್ಯ ರಾಷ್ಟ್ರ ಅಮೆರಿಕ ವಿರುದ್ಧ ಚಿಕಾಗೊದಲ್ಲಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡವು 2–1 ಅಂತರದ ಗೆಲುವು ಸಾಧಿಸಿ ಉತ್ತಮ ಫಾರ್ಮ್ ಮುಂದುವರಿಸಿತು.
ಇನ್ನೊಂದು ಪಂದ್ಯದಲ್ಲಿ ಬೆಲ್ಜಿಯಂ ತಂಡವು ಟ್ಯುನಿಶಿಯಾವನ್ನು 5–0 ಅಂತರದಿಂದ ಮಣಿಸಿ ಪ್ರಾಬಲ್ಯ ಮೆರೆದಿತು. ತುರ್ಕಿಯಾ ತಂಡವು ವೆನೆಝುವೆಲಾ ವಿರುದ್ಧ 2–1 ಅಂತರದಲ್ಲಿ ಜಯ ಸಾಧಿಸಿದರೆ, ಇಂಗ್ಲೆಂಡ್ ತಂಡವು ನ್ಯೂಝಿಲ್ಯಾಂಡ್ ವಿರುದ್ಧ 1–0 ಅಂತರದ ಗೆಲುವು ದಾಖಲಿಸಿತು.






