FIFA World Cup 2026 | ಅಮೇರಿಕಾ ವಿರುದ್ಧ ಬೆಲ್ಜಿಯಂಗೆ 4-1 ಅಂತರದ ಭರ್ಜರಿ ಜಯ

Photo: fifa.com
ಸಿಯಾಟಲ್ : ಚಾರ್ಲ್ಸ್ ಡಿ ಕೆಟೆಲೇರ್ ಅವರ ಮೊದಲಾರ್ಧದ ಅವಳಿ ಗೋಲುಗಳ ನೆರವಿನಿಂದ ಬೆಲ್ಜಿಯಂ ತಂಡವು ಅಮೇರಿಕಾ ವಿರುದ್ಧ 4-1 ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಎಲ್ಲಾ ಆತಿಥೇಯ ರಾಷ್ಟ್ರಗಳ ವಿಶ್ವಕಪ್ ಅಭಿಯಾನ 16ರ ಘಟ್ಟದಲ್ಲಿ ಕೊನೆಗೊಂಡಿದೆ.
ಆರಂಭದಲ್ಲಿ ನಿಕೋಲಸ್ ರಾಸ್ಕಿನ್ ನೀಡಿದ ಕ್ರಾಸ್ ಅನ್ನು ಡಿ ಕೆಟೆಲೇರ್ ಸುಲಭವಾಗಿ ಗೋಲಾಗಿ ಪರಿವರ್ತಿಸಿ ಬೆಲ್ಜಿಯಂ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಬೆಲ್ಜಿಯಂ ಸುಲಭವಾಗಿ ಮುನ್ನಡೆಯುತ್ತಿರುವಂತೆ ಕಂಡುಬಂದರೂ, 31ನೇ ನಿಮಿಷದಲ್ಲಿ ಮಲಿಕ್ ಟಿಲ್ಮನ್ ಅವರ ಫ್ರೀ-ಕಿಕ್ ಗೋಲು ಪೆಟ್ಟಿಗೆಗೆ ಸೇರಿದಾಗ ಅಮೇರಿಕಾ ಸಮಬಲ ಸಾಧಿಸಿತು. ಆದರೆ, ಕೆಲವೇ ಕ್ಷಣಗಳಲ್ಲಿ ಡಿ ಕೆಟೆಲೇರ್ ಹೆಡರ್ ಮೂಲಕ ಪಂದ್ಯದಲ್ಲಿ ತಮ್ಮ ಎರಡನೇ ಗೋಲು ಬಾರಿಸಿ ಮತ್ತೊಮ್ಮೆ ಮುನ್ನಡೆಗೆ ಕಾರಣವಾದರು.
ಪಂದ್ಯದ 60ನೇ ನಿಮಿಷದಲ್ಲಿ ಅಮೇರಿಕಾ ತಂಡದಿಂದ ಸಂಭವಿಸಿದ ರಕ್ಷಣಾತ್ಮಕ ತಪ್ಪೊಂದು ಬೆಲ್ಜಿಯಂಗೆ ಮೂರನೇ ಗೋಲನ್ನು ಉಡುಗೊರೆಯಾಗಿ ನೀಡಿತು. ಚೆಂಡನ್ನು ದೂರ ತಳ್ಳಲು ಬಂದ ಗೋಲ್ಕೀಪರ್ ತಮ್ಮ ಜಾಗದಿಂದ ವೇಗವಾಗಿ ಓಡಿ ಬಂದರಾದರೂ, ಚೆಂಡನ್ನು ತಲುಪಲು ವಿಫಲರಾದರು. ಇದನ್ನು ಬಳಸಿಕೊಂಡು ಡಿ ಕೆಟೆಲೇರ್ ಚೆಂಡನ್ನು ತಮ್ಮ ಸುಪರ್ದಿಗೆ ಪಡೆದು ವಾನಾಕೆನ್ಗೆ ನೀಡಿದರು. ಬಳಿಕ ವಾನಾಕೆನ್ ದೂರದಿಂದ ಹೊಡೆದು ಗೋಲು ಗಳಿಸಿ ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿದರು. ಬದಲಿ ಆಟಗಾರ ರೊಮೇಲು ಲುಕಾಕು ಅವರ ಕೊನೆಯ ಕ್ಷಣದ ಗೋಲು ಬೆಲ್ಜಿಯಂಗೆ ಗೆಲುವನ್ನು ಖಚಿತಪಡಿಸಿತು.
ಆತಿಥೇಯ ರಾಷ್ಟ್ರಗಳಾದ ಕೆನಡಾ, ಮೆಕ್ಸಿಕೊ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಇದೀಗ ಅಮೇರಿಕಾ ಕೂಡ ನಿರ್ಗಮಿಸಿದೆ.
ಬೆಲ್ಜಿಯಂ ತಂಡ ಕ್ವಾರ್ಟರ್ ಫೈನಲ್ನಲ್ಲಿ ಸ್ಪೇನ್ ವಿರುದ್ಧ ಆಡಲಿದೆ.






