FIFA World Cup 2026 | FIFA ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡದ ಬಗ್ಗೆ ಗೊತ್ತೇ?

Photo Credit : x@FIFAcom
ನ್ಯೂಯಾರ್ಕ್, ಜೂ. 7: FIFA ವಿಶ್ವಕಪ್ ಇತಿಹಾಸದಲ್ಲಿ ಬ್ರೆಝಿಲ್ ತಂಡವು ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಇದುವರೆಗೆ ಐದು ಬಾರಿ ವಿಶ್ವಕಪ್ ಗೆದ್ದಿರುವ ಬ್ರೆಝಿಲ್, ಈ ಸಾಧನೆ ಮಾಡಿದ ಏಕೈಕ ರಾಷ್ಟ್ರವಾಗಿದೆ.
FIFA (ಫೆಡರೇಶನ್ ಇಂಟರ್ನ್ಯಾಶನಲ್ ಡಿ ಫುಟ್ಬಾಲ್ ಅಸೋಸಿಯೇಶನ್) 1904ರಲ್ಲಿ ಸ್ಥಾಪನೆಯಾಯಿತು. FIFAದ ಅಧ್ಯಕ್ಷ ಜೂಲ್ಸ್ ರಿಮೆಟ್ ಅವರ ಪ್ರಯತ್ನದಿಂದ ವಿಶ್ವಕಪ್ ಟೂರ್ನಿಯ ಕನಸು ನನಸಾಯಿತು. ಅವರ ಗೌರವಾರ್ಥ ಆರಂಭಿಕ ವರ್ಷಗಳಲ್ಲಿ ಟ್ರೋಫಿಗೆ ‘ಜೂಲ್ಸ್ ರಿಮೆಟ್ ಟ್ರೋಫಿ’ ಎಂದು ಹೆಸರಿಡಲಾಗಿತ್ತು.
1930ರಲ್ಲಿ ಉರುಗ್ವೆಯಲ್ಲಿ ನಡೆದ ಮೊದಲ ವಿಶ್ವಕಪ್ ನಲ್ಲಿ ಆತಿಥೇಯ ಉರುಗ್ವೆ ತಂಡ ಫೈನಲ್ ನಲ್ಲಿ ಅರ್ಜೆಂಟೀನಾವನ್ನು 4–2 ಗೋಲುಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು.
1934 ಹಾಗೂ 1938ರಲ್ಲಿ ಇಟಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿತು. ಎರಡನೇ ಮಹಾಯುದ್ಧದ ಕಾರಣ 1942 ಮತ್ತು 1946ರ ವಿಶ್ವಕಪ್ ಟೂರ್ನಿಗಳು ರದ್ದಾಗಿದ್ದವು.
1958, 1962, 1970, 1994 ಹಾಗೂ 2002ರಲ್ಲಿ ಬ್ರೆಝಿಲ್ ಪ್ರಶಸ್ತಿ ಗೆದ್ದಿದೆ. ಜರ್ಮನಿ ಹಾಗೂ ಇಟಲಿ ತಲಾ ನಾಲ್ಕು ಬಾರಿ ಚಾಂಪಿಯನ್ ಆಗಿದ್ದರೆ, ಅರ್ಜೆಂಟೀನಾ ಮೂರು ಬಾರಿ ವಿಶ್ವಕಪ್ ಜಯಿಸಿದೆ. ಫ್ರಾನ್ಸ್ ಹಾಗೂ ಉರುಗ್ವೆ ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದು, ಇಂಗ್ಲೆಂಡ್ ಮತ್ತು ಸ್ಪೇನ್ ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
1930ರಿಂದ 2022ರವರೆಗೆ ನಡೆದ 22 ಆವೃತ್ತಿಗಳಲ್ಲಿ ಒಟ್ಟು ಎಂಟು ರಾಷ್ಟ್ರಗಳು ಮಾತ್ರ ವಿಶ್ವಕಪ್ ಪ್ರಶಸ್ತಿ ಗೆದ್ದಿವೆ.






