FIFA WORLD CUP 2026 | ನೇರ ಫ್ರೀ-ಕಿಕ್ ಮೂಲಕ ಮೊತ್ತ ಮೊದಲ ಗೋಲು ಗಳಿಸಿದ ಕೇಪ್ ವರ್ಡ್

ಕೇವಿನ್ ಪಿನಾ | Photo Credit : AP
ಮಯಾಮಿ, ಜೂ.22: ಉರುಗ್ವೆ ತಂಡದ ವಿರುದ್ಧ 2-2ರಿಂದ ಡ್ರಾ ಸಾಧಿಸುವುದರೊಂದಿಗೆ ತನ್ನ ಅಭಿಯಾನವನ್ನು ಮುಂದುವರಿಸಿದ ಕೇಪ್ ವರ್ಡ್ ತಂಡವು 1966ರ ನಂತರ ನೇರ ಫ್ರೀ-ಕಿಕ್ ಮೂಲಕ ಫಿಫಾ ವಿಶ್ವಕಪ್ ನಲ್ಲಿ ತನ್ನ ಚೊಚ್ಚಲ ಗೋಲು ಗಳಿಸಿದ ಮೊದಲ ತಂಡ ಎನಿಸಿಕೊಂಡು ವಿಶ್ವಕಪ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.
ಕೇವಿನ್ ಪಿನಾ 21ನೇ ನಿಮಿಷದಲ್ಲಿ ಗೋಲು ಗಳಿಸಿದರು. ಈ ಮೂಲಕ ಕೇಪ್ ವರ್ಡ್ ತಂಡವು ವಿಶ್ವಕಪ್ ನಲ್ಲಿ ತನ್ನ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾದುದಲ್ಲದೆ, ಪಂದ್ಯಾವಳಿಯ ದಾಖಲೆಯ ಪುಸ್ತಕದಲ್ಲಿ ವಿಶಿಷ್ಟ ಅಂಕಿ-ಅಂಶದ ಮೈಲಿಗಲ್ಲನ್ನು ನಿರ್ಮಿಸಿತು.
ಸ್ಪೇನ್ ವಿರುದ್ಧ ಆಡಿದ ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲಿ ಗೋಲುರಹಿತ ಡ್ರಾ ಸಾಧಿಸಿ ವಿಶ್ವದ ಗಮನ ಸೆಳೆದಿದ್ದ ಕೇಪ್ ವರ್ಡ್ ತಂಡವು, ಎರಡು ಬಾರಿಯ ವಿಶ್ವ ಚಾಂಪಿಯನ್ ಉರುಗ್ವೆ ವಿರುದ್ಧ ಮತ್ತೊಂದು ಶ್ರೇಷ್ಠ ಪ್ರದರ್ಶನ ನೀಡಿದೆ.
‘ಎಚ್’ ಗುಂಪಿನಲ್ಲಿ ಎರಡು ಪಂದ್ಯಗಳಿಂದ ಎರಡು ಅಂಕಗಳನ್ನು ಗಳಿಸಿರುವ ಕೇಪ್ ವರ್ಡ್ ತಂಡವು ನಾಕೌಟ್ ಹಂತಕ್ಕೇರಿ ಇತಿಹಾಸ ನಿರ್ಮಿಸುವ ಸ್ಪರ್ಧೆಯಲ್ಲಿದೆ.
ಹಿರಿಯ ಗೋಲ್ಕೀಪರ್ ಫೆರ್ನಾಂಡೊ ಮುಸ್ಲೇರಾರನ್ನು ವಂಚಿಸಿ ಪಿನಾ ಅವರು ನೇರ ಫ್ರೀ-ಕಿಕ್ ಮೂಲಕ ಗೋಲು ಗಳಿಸಿದರು. ಇದರೊಂದಿಗೆ ಕೇಪ್ ವರ್ಡ್ ತಂಡವು 1966ರ ನಂತರ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಚೊಚ್ಚಲ ಗೋಲನ್ನು ನೇರ ಫ್ರೀ-ಕಿಕ್ ಮೂಲಕ ಗಳಿಸಿದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಯಿತು.
ಮ್ಯಾಕ್ಸಿ ಅರೌಜೊ (44ನೇ ನಿಮಿಷ) ಹಾಗೂ ಅಗಸ್ಟಿನ್ ಕ್ಯಾನೊಬ್ಬಿಯೊ (45+6) ಗಳಿಸಿದ ಗೋಲುಗಳು ಮೊದಲಾರ್ಧಕ್ಕೂ ಮುನ್ನ ಉರುಗ್ವೆ ತಂಡಕ್ಕೆ ತಿರುಗೇಟು ನೀಡಲು ನೆರವಾದವು.
ದ್ವಿತೀಯಾರ್ಧದಲ್ಲಿ ಮೈದಾನಕ್ಕಿಳಿದ ಹೆಲಿಯೊ ವರೆಲಾ 61ನೇ ನಿಮಿಷದಲ್ಲಿ ಮಥಾಯಿಸ್ ಒಲಿವೆರಾ ಅವರ ತಪ್ಪಿನ ಲಾಭ ಪಡೆದು ಗೋಲು ಗಳಿಸಿದರು. ಇದರೊಂದಿಗೆ ಕೇಪ್ ವರ್ಡ್ ತಂಡವು ಸ್ಕೋರ್ ಅನ್ನು 2-2ರಿಂದ ಸಮಬಲಗೊಳಿಸಿತು.
ಈ ಪಂದ್ಯವು ಗೋಲ್ಕೀಪಿಂಗ್ ಇತಿಹಾಸದಲ್ಲೂ ಅಪರೂಪದ ಅಂಕಿ-ಅಂಶದ ಮೈಲಿಗಲ್ಲಿಗೆ ಸಾಕ್ಷಿಯಾಯಿತು. ಕೇಪ್ ವರ್ಡ್ನ ವೋಝಿನ್ಹಾ (40 ವರ್ಷ, 18 ದಿನ) ಹಾಗೂ ಉರುಗ್ವೆಯ ಫೆರ್ನಾಂಡೊ ಮುಸ್ಲೇರಾ (40 ವರ್ಷ, 5 ದಿನ) ವಿಶ್ವಕಪ್ ಪಂದ್ಯವನ್ನಾಡಿದ 40 ವರ್ಷಕ್ಕಿಂತ ಅಧಿಕ ವಯಸ್ಸಿನ ಗೋಲ್ಕೀಪರ್ ಗಳೆಂಬ ಹಿರಿಮೆಗೆ ಪಾತ್ರರಾದರು.
ಸ್ಪೇನ್ ವಿರುದ್ಧದ ಪಂದ್ಯದಲ್ಲಿ ದಾಖಲೆಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ವೋಝಿನ್ಹಾ ಮತ್ತೊಮ್ಮೆ ಉತ್ತಮ ಆಟದ ಮೂಲಕ ಸ್ಟೇಡಿಯಂನಲ್ಲಿದ್ದ ಕೇಪ್ ವರ್ಡ್ ಅಭಿಮಾನಿಗಳ ಮನ ಗೆದ್ದರು.
ಕೇವಲ ಐದು ಲಕ್ಷ ಜನಸಂಖ್ಯೆ ಹೊಂದಿರುವ ಕೇಪ್ ವರ್ಡ್ ದೇಶವು 48 ತಂಡಗಳು ಆಡುತ್ತಿರುವ ಬಹುದೊಡ್ಡ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆಯುತ್ತಿದೆ. ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲಿ 2010ರ ಚಾಂಪಿಯನ್ ಸ್ಪೇನ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ್ದ ಕೇಪ್ ವರ್ಡ್ ತಂಡವು ಉರುಗ್ವೆ ವಿರುದ್ಧವೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ ನಾಕೌಟ್ ಹಂತಕ್ಕೇರುವ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಸೌದಿ ಅರೇಬಿಯಾ ವಿರುದ್ಧ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನಾಡಲಿರುವ ಕೇಪ್ ವರ್ಡ್ ತಂಡದ ಅಂತಿಮ-32ರ ಸುತ್ತಿಗೇರುವ ಕನಸು ಇನ್ನೂ ಜೀವಂತವಾಗಿದೆ.






