ಇತಿಹಾಸದಲ್ಲಿ ಇದೇ ಮೊದಲು | ಫಿಫಾ ರ್ಯಾಂಕ್ನ ಅಗ್ರ ನಾಲ್ಕು ತಂಡಗಳು ಸೆಮಿ ಫೈನಲ್ಗೆ

Photo Credit : x@FIFAWorldCup
ನ್ಯೂಯಾರ್ಕ್, ಜು.13: ಅಮೆರಿಕ, ಮೆಕ್ಸಿಕೋ, ಕೆನಡಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ರ್ಯಾಂಕಿನ ಅಗ್ರ ನಾಲ್ಕು ತಂಡಗಳಾದ-ಫ್ರಾನ್ಸ್, ಅರ್ಜೆಂಟೀನ, ಸ್ಪೇನ್ ಹಾಗೂ ಇಂಗ್ಲೆಂಡ್ 1992ರಲ್ಲಿ ರ್ಯಾಂಕಿಂಗ್ ಪದ್ದತಿ ಜಾರಿಯಾದ ನಂತರ ಇದೇ ಮೊದಲ ಬಾರಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿವೆ.
ಇದು ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಫಿಫಾ ರ್ಯಾಂಕಿಂಗ್ಗಳು ಸ್ಪರ್ಧಾವಳಿಯ ಸೆಮಿ ಫೈನಲ್ಲಿಸ್ಟ್ಗಳನ್ನು ಸರಿಯಾಗಿ ಪ್ರತಿಬಿಂಬಿಸಿದೆ.
1990ರಲ್ಲಿ ಇಟಲಿಯಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿ ನಾಲ್ಕು ಬಲಿಷ್ಠ ತಂಡಗಳು ಸೆಮಿ ಫೈನಲ್ಗೆ ತಲುಪಿದ್ದವು. ಆಗ ಪಶ್ಚಿಮ ಜರ್ಮನಿ, ಅರ್ಜೆಂಟೀನ, ಇಟಲಿ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿ ಫೈನಲ್ ಸ್ಥಾನವನ್ನು ಅಲಂಕರಿಸಿದ್ದವು. 36 ವರ್ಷಗಳ ನಂತರ ಮಾಜಿ ಚಾಂಪಿಯನ್ ತಂಡಗಳು ಫುಟ್ಬಾಲ್ನ ಅತಿ ದೊಡ್ಡ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
ಅರ್ಜೆಂಟೀನ ಹಾಲಿ ವಿಶ್ವಕಪ್ ಚಾಂಪಿಯನ್ ಆಗಿದ್ದರೆ, ಸ್ಪೇನ್ ಯುರೋಪಿಯನ್ ಚಾಂಪಿಯನ್ ಆಗಿದೆ. ಫ್ರಾನ್ಸ್ 2018ರಲ್ಲಿ ಹಾಗೂ ಇಂಗ್ಲೆಂಡ್ 1966ರಲ್ಲಿ ವಿಶ್ವಕಪ್ ಜಯಿಸಿವೆ.
ಸ್ಪೇನ್ ತಂಡವು ಜುಲೈ 15ರಂದು ಡಲ್ಲಾಸ್ನಲ್ಲಿ ನಡೆಯಲಿರುವ ಮೊದಲ ಸೆಮಿ ಫೈನಲ್ನಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಜುಲೈ 16ರಂದು ಅಟ್ಲಾಂಟಾದಲ್ಲಿ ನಡೆಯಲಿರುವ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನ ತಂಡವು ಇಂಗ್ಲೆಂಡ್ ತಂಡವನ್ನು ಮುಖಾಮುಖಿಯಾಗಲಿದೆ. ಫೈನಲ್ ಪಂದ್ಯವು ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ಜುಲೈ 20ರಂದು ನಡೆಯಲಿದೆ.
ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ರೋಚಕ ಜಯ
ಕಾನ್ಸಾಸ್ ಸಿಟಿಯಲ್ಲಿ ನಡೆದ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 10 ಆಟಗಾರರೊಂದಿಗೆ ಆಡಿದ ಸ್ವಿಟ್ಸರ್ಲ್ಯಾಂಡ್ ತಂಡವನ್ನು ಹೆಚ್ಚುವರಿ ಸಮಯದಲ್ಲಿ 3-1 ಗೋಲುಗಳ ಅಂತರದಿಂದ ಸದೆಬಡಿದ ಅರ್ಜೆಂಟೀನ ತಂಡವು ಸೆಮಿ ಫೈನಲ್ಗೆ ತಲುಪಿದೆ. ಅಲೆಕ್ಸಿಸ್ ಅಲಿಸ್ಟರ್ ಮೊದಲ ಗೋಲು ಗಳಿಸಿದರೆ, ಜೂಲಿಯನ್ ಅಲ್ವರೆಝ್ 112ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಗಳಿಸಿದ್ದರು. ಲೌಟಾರೊ ಮಾರ್ಟಿನೆಝ್ ಹೆಚ್ಚುವರಿ ಅವಧಿಯಲ್ಲಿ ಮತ್ತೊಂದು ಗೋಲು ದಾಖಲಿಸಿ ಮೆಸ್ಸಿ ಪಡೆಯನ್ನು ಅಂತಿಮ-4ರ ಘಟ್ಟಕ್ಕೆ ತಲುಪಿಸಿದ್ದರು.
ಇಂಗ್ಲೆಂಡ್ ತಂಡ ಕೂಡ ಹೆಚ್ಚುವರಿ ಸಮಯದಲ್ಲಿ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದುಕೊಂಡಿದೆ. ಜೂಡ್ ಬೆಲ್ಲಿಂಗ್ಹ್ಯಾಮ್ ಮತ್ತೊಂದು ಆಕರ್ಷಕ ಪ್ರದರ್ಶನ ನೀಡಿದ್ದರು. ಬೆಲ್ಲಿಂಗ್ಹ್ಯಾಮ್ ಅವಳಿ ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡವು ನಾರ್ವೆ ತಂಡವನ್ನು 2-1 ಅಂತರದಿಂದ ಮಣಿಸಿತು.
ಬೆಲ್ಜಿಯಮ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿರುವ ಸ್ಪೇನ್ ತಂಡವು ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದೆ. ಫ್ರಾನ್ಸ್ ವಿರುದ್ಧ ಸೆಮಿ ಫೈನಲ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಪಂದ್ಯಾವಳಿಯ ಫೇವರಿಟ್ ಫ್ರಾನ್ಸ್ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಮೊರಾಕ್ಕೊ ತಂಡವನ್ನು ಮಣಿಸಿದೆ.
ಅರ್ಜೆಂಟೀನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಅಂತಾರಾಷ್ಟ್ರೀಯ ಫುಟ್ಬಾಲ್ ವೈರತ್ವಕ್ಕೆ ದಶಕಗಳ ಇತಿಹಾಸವಿದೆ. 1966ರ ಕ್ವಾರ್ಟರ್ ಫೈನಲ್ ಹಾಗೂ 1986ರ ಡಿಯಾಗೊ ಮರಡೋನರ ‘ಹ್ಯಾಂಡ್ ಆಫ್ ಗಾಡ್’ ಗೋಲಿನಿಂದ ಆರಂಭಿಸಿ 1998ರಲ್ಲಿ ಡೇವಿಡ್ ಬೆಕ್ಹ್ಯಾಮ್ ರೆಡ್ ಕಾರ್ಡ್ ಪಡೆದಿರುವುದು ಹಾಗೂ 2002ರಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಿದ್ದು ಸೇರಿದಂತೆ ಉಭಯ ತಂಡಗಳ ನಡುವೆ ನಿರಂತರವಾಗಿ ಮರೆಯಲಾರದ ಕ್ಷಣಗಳು ದಾಖಲಾಗಿವೆ. ವಿಶೇಷವೆಂದರೆ ಲಿಯೊನೆಲ್ ಮೆಸ್ಸಿ ಇದೇ ಮೊದಲ ಬಾರಿ ಇಂಗ್ಲೆಂಡ್ ವಿರುದ್ಧ ಆಡುತ್ತಿದ್ದಾರೆ.
ವೈಯಕ್ತಿಕ ಪ್ರದರ್ಶನ ಕೂಡ ಗಮನಾರ್ಹವಾಗಿದ್ದು, ಮೆಸ್ಸಿ ಹಾಗೂ ಎಂಬಾಪೆ ತಲಾ ಎಂಟು ಗೋಲುಗಳನ್ನು ಗಳಿಸುವುದರೊಂದಿಗೆ ‘ಗೋಲ್ಡನ್ ಬೂಟ್’ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇಂಗ್ಲೆಂಡ್ನ ಬೆಲ್ಲಿಂಗ್ಹ್ಯಾಮ್ ಹಾಗೂ ಹ್ಯಾರಿ ಕೇನ್ ತಲಾ ಆರು ಗೋಲುಗಳನ್ನು ಗಳಿಸಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಸ್ಕೋರರ್ ಆಗುವ ಸ್ಪರ್ಧೆಯಲ್ಲಿ ಎಂಬಾಪೆ ಹಾಗೂ ಮೆಸ್ಸಿ ನಡುವೆ ಪೈಪೋಟಿ ಏರ್ಪಟ್ಟಿದೆ. ಮೆಸ್ಸಿ ಎರಡನೇ ಬಾರಿ ವಿಶ್ವಕಪ್ ಪ್ರಶಸ್ತಿ ಜಯಿಸಿದರೆ ಫುಟ್ಬಾಲ್ನ ಅತ್ಯಂತ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಲಿದ್ದಾರೆ.






