FIFA World Cup 2026 | ಡ್ರಾದತ್ತ ಸಾಗಿದ್ದ ಪಂದ್ಯವನ್ನು ತಿರುಗಿಸಿದ ಡೆನಿಝ್ ಉಂಡಾವ್; ಐವರಿ ಕೋಸ್ಟ್ ವಿರುದ್ಧ ಜರ್ಮನಿಗೆ ಗೆಲುವು, ನಾಕೌಟ್ ಗೆ ಪ್ರವೇಶ

ಬೋಸ್ಟನ್, ಜೂ.21: ಡೆನಿಝ್ ಉಂಡಾವ್ ಅವರು ಹೆಚ್ಚುವರಿ ಸಮಯದ 94ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಜರ್ಮನಿ ತಂಡವು ಐವರಿ ಕೋಸ್ಟ್ ವಿರುದ್ಧ 2–1 ಅಂತರದ ರೋಚಕ ಜಯ ಸಾಧಿಸಿ, ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಿತು.
ಗ್ರೂಪ್ ಇ ಯ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡವೇ ಮೊದಲು ಮುನ್ನಡೆ ಸಾಧಿಸಿತು. ಲಿವರ್ಪೂಲ್ ಆಟಗಾರ ಯಾನ್ ಡಿಯೊಮಾಂಡೆ ಅವರ ಚುರುಕಿನ ಓಟ ಹಾಗೂ ಕೆಳಮಟ್ಟದ ಕ್ರಾಸ್ನ ನೆರವಿನಿಂದ ನಾಯಕ ಫ್ರಾಂಕ್ ಕೆಸ್ಸಿ ಮೊದಲಾರ್ಧದಲ್ಲಿ ಗೋಲು ಗಳಿಸಿ ತಂಡಕ್ಕೆ 1–0ರ ಮುನ್ನಡೆ ತಂದುಕೊಟ್ಟರು.
ಹಿನ್ನಡೆಯಲ್ಲಿದ್ದ ಜರ್ಮನಿ ದ್ವಿತೀಯಾರ್ಧದಲ್ಲಿ ಪ್ರತಿದಾಳಿ ನಡೆಸಿತು. 60ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಡೆನಿಝ್ ಉಂಡಾವ್ ಪಂದ್ಯದಲ್ಲಿ ಮಹತ್ವದ ಪ್ರಭಾವ ಬೀರಿದರು. ನಾಡಿಯೆಮ್ ಅಮಿರಿ ಅವರ ಕ್ರಾಸ್ನ್ನು ಉಂಡಾವ್ ಗೋಲಾಗಿ ಪರಿವರ್ತಿಸಿ 1–1ರ ಸಮಬಲ ಗಳಿಸಲು ಕಾರಣರದರು ..
ಉಭಯ ತಂಡಗಳು ಸಮಬಲ ಸಾಧಿಸಿದ್ದ ಸಂದರ್ಭದಲ್ಲಿ ಹೆಚ್ಚುವರಿ ಸಮಯದ ನಾಲ್ಕನೇ ನಿಮಿಷದಲ್ಲಿ ಫೆಲಿಕ್ಸ್ ಎನ್ಮೆಚಾ ನೀಡಿದ ಪಾಸ್ ಅನ್ನು ಅವರು ಮತ್ತೊಮ್ಮೆ ಗೋಲಾಗಿ ಪರಿವರ್ತಿಸಿ ಜರ್ಮನಿಗೆ 2–1ರ ಮುನ್ನಡೆ ತಂದುಕೊಟ್ಟರು. ಇದೇ ಗೋಲು ತಂಡದ ಗೆಲುವನ್ನು ಖಚಿತಪಡಿಸಿತು.
ಬ್ರೈಟನ್ ಕ್ಲಬ್ ನ ಮಾಜಿ ಸ್ಟ್ರೈಕರ್ ಆಗಿರುವ ಉಂಡಾವ್ ಅವರಿಂದ ಜರ್ಮನಿ ಪರ ಇದು 11 ಪಂದ್ಯಗಳಲ್ಲಿ ದಾಖಲಾದ ಒಂಭತ್ತನೇ ಗೋಲು. ಅವರ ಉತ್ತಮ ಫಾರ್ಮ್ ಮತ್ತೊಮ್ಮೆ ತಂಡದ ನೆರವಿಗೆ ಬಂತು.
ಈ ಗೆಲುವಿನೊಂದಿಗೆ ಜರ್ಮನಿ, ಅಮೆರಿಕ ಮತ್ತು ಮೆಕ್ಸಿಕೊ ತಂಡಗಳೊಂದಿಗೆ ಸೇರಿ ಒಂದು ಪಂದ್ಯ ಬಾಕಿ ಇರುವಾಗಲೇ ನಾಕೌಟ್ ಹಂತ ಪ್ರವೇಶಿಸಿತು.
ಮೊದಲ ಪಂದ್ಯದಲ್ಲಿ ಈಕ್ವೆಡಾರ್ ವಿರುದ್ಧ ಜಯ ಸಾಧಿಸಿದ್ದ ಐವರಿ ಕೋಸ್ಟ್ಗೆ ಈ ಸೋಲು ಹಿನ್ನಡೆಯಾಯಿತು. ಮುಂದಿನ ಹಂತಕ್ಕೇರಬೇಕಾದರೆ ತಂಡವು ತನ್ನ ಉಳಿದ ಪಂದ್ಯದಲ್ಲಿ ಉತ್ತಮ ಫಲಿತಾಂಶ ದಾಖಲಿಸಬೇಕಾಗಿದೆ.






