FIFA 2026 | ಜು.15ರಂದು ಮೊದಲ ಸೆಮಿ ಫೈನಲ್ನಲ್ಲಿ ಫ್ರಾನ್ಸ್- ಸ್ಪೇನ್ ಸೆಣಸಾಟ

Photo Credit : x@FIFAWorldCup
ಡಲ್ಲಾಸ್, ಜು.13: ಎರಡು ಬಾರಿಯ ವಿಶ್ವ ಚಾಂಪಿಯನ್ ಫ್ರಾನ್ಸ್ ಹಾಗೂ ಯುರೋಪಿಯನ್ ಚಾಂಪಿಯನ್ ಸ್ಪೇನ್ ತಂಡಗಳು ಭಾರತದ ಕಾಲಮಾನ ಬುಧವಾರ ಮುಂಜಾನೆ 12:30ಕ್ಕೆ ಅಮೆರಿಕದ ಟೆಕ್ಸಾಸ್ನ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆಯಲಿರುವ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ನಲ್ಲಿ ಸೆಣಸಾಡಲಿವೆ.
ಫ್ರಾನ್ಸ್ ತಂಡವು ಪಶ್ಚಿಮ ಜರ್ಮನಿ ತಂಡದ ನಂತರ ಸತತ ಮೂರನೇ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟ ಯುರೋಪಿನ ಎರಡನೇ ದೇಶ ಎನಿಸಿಕೊಳ್ಳುವ ಅದಮ್ಯ ವಿಶ್ವಾಸದಲ್ಲಿದೆ. ಆದರೆ ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಎದುರಾಳಿ ಸ್ಪೇನ್ ವಿರುದ್ಧ ಗೆಲುವು ಸಾಧಿಸುವುದು ಅಷ್ಟೊಂದು ಸುಲಭವಲ್ಲ.
ಫ್ರಾನ್ಸ್ ಹಾಗೂ ಸ್ಪೇನ್ ತಂಡಗಳ ಸೆಮಿ ಫೈನಲ್ ಹಾದಿ..
ನಾರ್ವೆ, ಸೆನೆಗಲ್ ಹಾಗೂ ಇರಾಕ್ ತಂಡಗಳ ವಿರುದ್ಧ ಜಯ ಸಾಧಿಸಿ ಒಟ್ಟು 9 ಅಂಕ ಗಳಿಸಿ ಪರಿಪೂರ್ಣ ದಾಖಲೆಯೊಂದಿಗೆ ಫ್ರಾನ್ಸ್ ತಂಡವು ‘ಐ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿತ್ತು. ಅಂತಿಮ-16ರ ಸುತ್ತಿನಲ್ಲಿ ಪರಾಗ್ವೆ ತಂಡವನ್ನು 1-0 ಅಂತರದಿಂದ ಸೋಲಿಸುವ ಮೊದಲು ಅಂತಿಮ-32ರ ಸುತ್ತಿನಲ್ಲಿ ಸ್ವೀಡನ್ ತಂಡವನ್ನು 3-0 ಅಂತರದಿಂದ ಸದೆಬಡಿದಿತ್ತು. ಮೊರಾಕ್ಕೊ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಚೊಚ್ಚಲ ವಿಶ್ವಕಪ್ ಆಡಿದ್ದ ದ್ವೀಪರಾಷ್ಟ್ರ ಕೇಪ್ ವರ್ಡ್ ವಿರುದ್ಧ ಡ್ರಾ ಸಾಧಿಸಿದ ಸ್ಪೇನ್ ತಂಡವು ಸೌದಿ ಅರೇಬಿಯ ಹಾಗೂ ಉರುಗ್ವೆ ತಂಡವನ್ನು ಮಣಿಸಿ ‘ಎಚ್’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿತ್ತು. 32ರ ಸುತ್ತಿನಲ್ಲಿ ಆಸ್ಟ್ರಿಯಾ ತಂಡವನ್ನು 3-0 ಅಂತರದಿಂದ ಮಣಿಸಿ ತನ್ನ ನಾಕೌಟ್ ಅಭಿಯಾನ ಆರಂಭಿಸಿದ್ದ ಸ್ಪೇನ್ ತಂಡವು ಅಂತಿಮ-16ರ ಸುತ್ತಿನಲ್ಲಿ ಪೋರ್ಚುಗಲ್ ತಂಡದ ವಿರುದ್ಧ 1-0 ಅಂತರದಿಂದ ರೋಚಕ ಜಯ ಸಾಧಿಸಿತ್ತು. ಬೆಲ್ಜಿಯಮ್ ವಿರುದ್ಧ 2-1ರಿಂದ ರೋಚಕ ಜಯ ಗಳಿಸಿ ಸೆಮಿ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು. ಮಿಕೆಲ್ ಮೆರಿನೊ ಎರಡು ಬಾರಿ ಕೊನೆಯ ಕ್ಷಣದಲ್ಲಿ ಗೆಲುವಿನ ಗೋಲು ಗಳಿಸಿದ್ದರು.
ಫ್ರಾನ್ಸ್ನ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ ಐದು ಪಂದ್ಯಗಳಲ್ಲಿ ಎಂಟು ಗೋಲುಗಳನ್ನು ಗಳಿಸಿದ್ದು, ‘ಗೋಲ್ಡನ್ ಬೂಟ್’ ರೇಸ್ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಉಸ್ಮಾನ್ ಡೆಂಬೆಲೆ ಐದು ಗೋಲುಗಳನ್ನು ಗಳಿಸಿದ್ದಾರೆ. ಬ್ರಾಡ್ಲಿ ಬಾರ್ಕೊಲಾ ಎರಡು ಗೋಲು ಗಳಿಸಿದರೆ, ಮೈಕಲ್ ಒಲಿಸ್ ಐದು ಅಸಿಸ್ಟ್ ಮಾಡಿದ್ದಾರೆ.
‘‘ತಂಡದಲ್ಲಿರುವ ಆಟಗಾರರು ತಮ್ಮ ಪ್ರಶಸ್ತಿಯ ಪಯಣದಲ್ಲಿ ನಿರ್ಣಾಯಕ ಅಂಕವನ್ನು ಇನ್ನೂ ಗಳಿಸಿಲ್ಲ. 2018ರಲ್ಲಿ ನಾವು ಚಾಂಪಿಯನ್ ಆಗಿದ್ದೆವು, 2022ರಲ್ಲಿ ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದೆವು. ಈಗಿನ ತಂಡ ಆ ಮಟ್ಟಿನ ಪ್ರದರ್ಶನವನ್ನು ಇನ್ನೂ ನೀಡಿಲ್ಲ. ನಮ್ಮ ತಂಡಕ್ಕೆ ಭಾರೀ ಸಾಮರ್ಥ್ಯವಿದೆ. ಈ ತಂಡದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ’’ ಎಂದು ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ 20 ಪಂದ್ಯಗಳ ಪೈಕಿ 20 ಗೋಲುಗಳನ್ನು ಗಳಿಸಿರುವ ಎಂಬಾಪೆ ಹೇಳಿದ್ದಾರೆ.
ಫ್ರಾನ್ಸ್ ತಂಡವು ಹಿಂದಿನ ಏಳು ವಿಶ್ವಕಪ್ ಟೂರ್ನಿಗಳ ಪೈಕಿ ನಾಲ್ಕು ಬಾರಿ ಸೆಮಿ ಫೈನಲ್ಗೆ ತಲುಪಿದೆ. 1998 ಹಾಗೂ 2018ರಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. 2006 ಹಾಗೂ 2022ರ ಟೂರ್ನಿಯ ಫೈನಲ್ನಲ್ಲಿ ಸೋತಿತ್ತು.
ಸ್ಪೇನ್ನ ರಕ್ಷಣಾ ವಿಭಾಗವು ಬಲಿಷ್ಠವಾಗಿದ್ದು, ಬೆಲ್ಜಿಯಮ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾತ್ರ ಒಂದು ಗೋಲು ಬಿಟ್ಟುಕೊಟ್ಟಿದೆ. ರೋಡ್ರಿ, ಪೆಡ್ರಿ ಹಾಗೂ ಡ್ಯಾನಿ ಒಲ್ಮೊ ಮಿಡ್ ಫೀಲ್ಡ್ನಲ್ಲಿ ಹಿಡಿತ ಸಾಧಿಸಲಿದ್ದಾರೆ.
ಸ್ಪೇನ್ ತಂಡವು ಸೆಮಿ ಫೈನಲ್ಗೆ ತಲುಪಿದ ತಕ್ಷಣ ಕೋಚ್ ಲೂಯಿಸ್ ಡಿ ಲಾ ಅವರು ಫ್ರಾನ್ಸ್ ವಿರುದ್ಧ ಪಂದ್ಯದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ‘‘ಫಿಫಾ ವಿಶ್ವ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದಲ್ಲಿರುವ ಫ್ರಾನ್ಸ್ ಯಾವುದೇ ತಂಡವನ್ನು ಮಣಿಸುವ ಸಾಮರ್ಥ್ಯ ಹೊಂದಿದೆ. ನಮಗೆ ಆ ತಂಡದ ಅಪಾರ ಸಾಮರ್ಥ್ಯದ ಅರಿವಿದೆ. ನಾವು ಆ ತಂಡವನ್ನು ಎರಡು ಬಾರಿ ಸೆಮಿ ಫೈನಲ್ನಲ್ಲಿ ಸೋಲಿಸಿದ ಹಿರಿಮೆ ಹೊಂದಿದ್ದೇವೆ’’ಎಂದರು.
ಸ್ಪೇನ್ ತಂಡವು ಫ್ರಾನ್ಸ್ ತಂಡವನ್ನು 2024ರ ಯುರೋ ಚಾಂಪಿಯನ್ಶಿಪ್ ಸೆಮಿ ಫೈನಲ್ನಲ್ಲಿ ಸೋಲಿಸಿ ಯುರೋ ಚಾಂಪಿಯನ್ ಪಟ್ಟಕ್ಕೇರಿತ್ತು. 2025ರ ಯುಇಎಫ್ಎ ನೇಶನ್ಸ್ ಲೀಗ್ ಸೆಮಿ ಫೈನಲ್ನಲ್ಲೂ ಸೋಲಿಸಿತ್ತು.
ಫ್ರಾನ್ಸ್ -ಸ್ಪೇನ್ ಹೆಡ್-ಟು-ಹೆಡ್ ದಾಖಲೆ
ಫ್ರಾನ್ಸ್ ಹಾಗೂ ಸ್ಪೇನ್ ತಂಡಗಳು ಪರಸ್ಪರ 38 ಬಾರಿ ಮುಖಾಮುಖಿಯಾಗಿವೆ. ಹೆಡ್-ಟು-ಹೆಡ್ ದಾಖಲೆಯಲ್ಲಿ 18 ಪಂದ್ಯಗಳಲ್ಲಿ ಜಯ ಸಾಧಿಸಿರುವ ಸ್ಪೇನ್ ತಂಡ ಮೇಲುಗೈ ಹೊಂದಿದೆ. ಫ್ರಾನ್ಸ್ 13 ಬಾರಿ ಗೆಲುವು ಪಡೆದಿದೆ. ಏಳು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
ಉಭಯ ತಂಡಗಳು ವರ್ಷದ ಹಿಂದೆ ಜರ್ಮನಿಯಲ್ಲಿ ನಡೆದಿದ್ದ ನೇಶನ್ಸ್ ಲೀಗ್ ಸೆಮಿ ಫೈನಲ್ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ಸ್ಪೇನ್ ತಂಡವು ಫ್ರಾನ್ಸ್ ತಂಡವನ್ನು 5-4 ಅಂತರದಿಂದ ಸೋಲಿಸಿದ್ದು, ಸ್ಪೇನ್ನ ಯುವ ಆಟಗಾರ ಲಾಮಿನ್ ಯಮಲ್ ಎರಡು ಗೋಲುಗಳನ್ನು ಗಳಿಸಿ ಗೆಲುವಿಗೆ ನೆರವಾಗಿದ್ದರು.
ಸೆಮಿ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ ಏನಾಗುತ್ತದೆ?
ಒಂದು ವೇಳೆ ಸೆಮಿ ಫೈನಲ್ ಪಂದ್ಯವು ನಿಗದಿತ ಸಮಯದಲ್ಲಿ ಡ್ರಾನಲ್ಲಿ ಅಂತ್ಯಗೊಂಡರೆ, 30 ನಿಮಿಷಗಳ ಹೆಚ್ಚುವರಿ ಪಂದ್ಯ ಆಡಲಾಗುತ್ತದೆ. ಆಗ ಕೂಡ ಪಂದ್ಯವು ಟೈ ಆದರೆ, ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ನಲ್ಲಿ ನಿರ್ಧರಿಸಲಾಗುತ್ತದೆ.






