FIFA World Cup 2026 | ಪ್ರಮುಖ ಟೂರ್ನಿಯಲ್ಲಿ ಆಡಿದ ಜರ್ಮನಿಯ ಹಿರಿಯ ಗೋಲ್ ಕೀಪರ್ ನ್ಯೂಯರ್

ಮ್ಯಾನುಯೆಲ್ ನ್ಯೂಯರ್ | Photo Credit : PTI , AP
ಹ್ಯೂಸ್ಟನ್, ಜೂ.15: ಪ್ರಮುಖ ಟೂರ್ನಿಯಲ್ಲಿ ಆಡಿದ ಜರ್ಮನಿಯ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಮ್ಯಾನುಯೆಲ್ ನ್ಯೂಯರ್ ಪಾತ್ರರಾದರು.
ಲೆಜೆಂಡರಿ ಗೋಲ್ ಕೀಪರ್ ನ್ಯೂಯರ್, ಕ್ಯುರಾಕೊ ವಿರುದ್ಧ ಜರ್ಮನಿ ತಂಡದ 7–1 ಅಂತರದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಎನ್ಆರ್ಜಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 40 ವರ್ಷದ ನ್ಯೂಯರ್ ತಮ್ಮ ಪುನರಾಗಮನದ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ಕ್ಯುರಾಕೊ ವಿರುದ್ಧ ಕಣಕ್ಕಿಳಿದ ನ್ಯೂಯರ್, ಐದು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಜರ್ಮನಿಯ ಎರಡನೇ ಆಟಗಾರ ಎಂಬ ಸಾಧನೆ ಮಾಡಿ ಲೋಥರ್ ಮ್ಯಾಥ್ಯೂಸ್ ದಾಖಲೆಯನ್ನು ಸರಿಗಟ್ಟಿದರು.
40 ವರ್ಷ ವಯಸ್ಸಿನ ನ್ಯೂಯರ್ ಪ್ರಮುಖ ಟೂರ್ನಿಯಲ್ಲಿ ಜರ್ಮನಿಯನ್ನು ಪ್ರತಿನಿಧಿಸಿದ ಅತ್ಯಂತ ಹಿರಿಯ ಆಟಗಾರರಾಗಿದ್ದು, 39 ವರ್ಷ 91 ದಿನಗಳ ವಯಸ್ಸಿನಲ್ಲಿ 2000ರ ಯುರೋ ಚಾಂಪಿಯನ್ ಶಿಪ್ ನಲ್ಲಿ ಆಡಿದ್ದ ಮ್ಯಾಥ್ಯೂಸ್ ಅವರ ದಾಖಲೆಯನ್ನು ಮುರಿದರು.
ಈಗಾಗಲೇ ವಿಶ್ವಕಪ್ ಟ್ರೋಫಿ ಹಾಗೂ ಗೋಲ್ಡನ್ ಗ್ಲೌವ್ ಪ್ರಶಸ್ತಿಯನ್ನು ಗೆದ್ದಿರುವ ನ್ಯೂಯರ್, ಫುಟ್ಬಾಲ್ ಇತಿಹಾಸದ ಶ್ರೇಷ್ಠ ಗೋಲ್ ಕೀಪರ್ ಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
2024ರ ಯುರೋ ಚಾಂಪಿಯನ್ ಶಿಪ್ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದ ನ್ಯೂಯರ್ ಅವರನ್ನು, ಪ್ರಮುಖ ಗೋಲ್ ಕೀಪರ್ ಮಾರ್ಕ್ ಆಂಡ್ರೆ ಟೆರ್ ಸ್ಟೆಗನ್ ಗಾಯಗೊಂಡ ಹಿನ್ನೆಲೆಯಲ್ಲಿ ಕೋಚ್ ಜೂಲಿಯನ್ ನಾಗೆಲ್ಸ್ಮನ್ ಮತ್ತೆ ತಂಡಕ್ಕೆ ಸೇರಿಸಿಕೊಂಡರು.
ಸುಮಾರು ಎರಡು ವರ್ಷಗಳ ಬಳಿಕ ನ್ಯೂಯರ್ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಕಾಣಿಸಿಕೊಂಡರು.






