FIFA World Cup 2026 | ಗೋಲ್ಡನ್ ಬೂಟ್ ರೇಸ್: ಮೆಸ್ಸಿ–ಎಂಬಾಪೆ ನಡುವೆ ಪೈಪೋಟಿ

Photo: x.com/KalshiFC
ಪೆನ್ಸಿಲ್ವೇನಿಯಾ, ಜು. 5: 2026ರ ಫಿಫಾ ವಿಶ್ವಕಪ್ನಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿಗಾಗಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಮತ್ತು ಫ್ರಾನ್ಸ್ನ ಕೈಲಿಯನ್ ಎಂಬಾಪೆ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಪರಾಗ್ವೆ ವಿರುದ್ಧ ಫ್ರಾನ್ಸ್ ತಂಡಕ್ಕೆ ಜಯ ತಂದುಕೊಟ್ಟಿರುವ ಎಂಬಾಪೆ, ಮೆಸ್ಸಿ ಹೆಸರಲ್ಲಿರುವ ಸಾರ್ವಕಾಲಿಕ ವಿಶ್ವಕಪ್ ಗೋಲು ದಾಖಲೆಯ ಹೊಸ್ತಿಲಿಗೆ ಬಂದು ನಿಂತಿದ್ದಾರೆ.
ಶನಿವಾರ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಪರಾಗ್ವೆಯನ್ನು 1–0 ಗೋಲುಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಪಂದ್ಯದ 70ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಫ್ರಾನ್ಸ್ ನಾಯಕ ಎಂಬಾಪೆ, ಪ್ರಸಕ್ತ ಟೂರ್ನಿಯಲ್ಲಿ ತಮ್ಮ ಏಳನೇ ಗೋಲು ದಾಖಲಿಸಿದರು. ಇದರೊಂದಿಗೆ ಅವರು, ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಏಳು ಗೋಲುಗಳೊಂದಿಗೆ ಮೆಸ್ಸಿ ಅವರೊಂದಿಗೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.
ಕೇವಲ 24 ತಾಸುಗಳ ಹಿಂದಷ್ಟೇ ಕೇಪ್ ವರ್ಡ್ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ತಮ್ಮ ವಿಶ್ವಕಪ್ ವೃತ್ತಿಜೀವನದ 20ನೇ ಗೋಲು ದಾಖಲಿಸಿ, ಸಾರ್ವಕಾಲಿಕ ಗರಿಷ್ಠ ವಿಶ್ವಕಪ್ ಸ್ಕೋರರ್ ಎನಿಸಿಕೊಂಡಿದ್ದರು. ಆದರೆ, ಎಂಬಾಪೆ ಕೇವಲ 19 ವಿಶ್ವಕಪ್ ಪಂದ್ಯಗಳಲ್ಲಿ 19 ಗೋಲುಗಳನ್ನು ಗಳಿಸಿದ್ದು, ಮೆಸ್ಸಿ ಅವರ 29 ಪಂದ್ಯಗಳಲ್ಲಿ ದಾಖಲಿಸಿರುವ 20 ಗೋಲುಗಳ ದಾಖಲೆಯನ್ನು ಸರಿಗಟ್ಟಲು ಇನ್ನೊಂದು ಗೋಲು ಮಾತ್ರ ಬಾಕಿ ಇದೆ.
28 ವರ್ಷದ ಎಂಬಾಪೆ ಸದ್ಯ ಉತ್ತಮ ಲಯದಲ್ಲಿದ್ದು, ಮುಂಬರುವ ಪಂದ್ಯಗಳಲ್ಲೇ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ. ಒಂದು ವೇಳೆ ಟೂರ್ನಿಯ ಅಂತ್ಯಕ್ಕೆ ಮೆಸ್ಸಿ ಮತ್ತು ಎಂಬಾಪೆ ಸಮಾನ ಸಂಖ್ಯೆಯ ಗೋಲುಗಳನ್ನು ಗಳಿಸಿದರೂ, ಅಸಿಸ್ಟ್ಗಳ ಆಧಾರದ ಮೇಲೆ ಎಂಬಾಪೆ (2 ಅಸಿಸ್ಟ್) ಸದ್ಯ ಮೆಸ್ಸಿ (1 ಅಸಿಸ್ಟ್) ಅವರಿಗಿಂತ ಮುಂದಿದ್ದಾರೆ.
ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ನಾರ್ವೆಯ ಅರ್ಲಿಂಗ್ ಹಾಲೆಂಡ್ ಮತ್ತು ಇಂಗ್ಲೆಂಡ್ನ ಹ್ಯಾರಿ ಕೇನ್ ತಲಾ ಐದು ಗೋಲುಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಜುಲೈ 9ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಮೊರಾಕ್ಕೊ ತಂಡವನ್ನು ಎದುರಿಸಲಿದೆ.
ನಾಕೌಟ್ ಹಂತದಲ್ಲಿ ಎಂಬಾಪೆ ದಾಖಲೆ
ಫಿಫಾ ವಿಶ್ವಕಪ್ನ ನಾಕೌಟ್ ಹಂತದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆಯೂ ಕೈಲಿಯನ್ ಎಂಬಾಪೆ ಹೆಸರಿಗೆ ಸೇರಿದೆ. ಅವರು ಇದುವರೆಗೆ 10 ನಾಕೌಟ್ ಪಂದ್ಯಗಳಲ್ಲಿ 11 ಗೋಲುಗಳನ್ನು ದಾಖಲಿಸಿದ್ದಾರೆ. ಈ ಪಟ್ಟಿಯಲ್ಲಿ ಬ್ರೆಝಿಲ್ನ ದಂತಕಥೆ ರೊನಾಲ್ಡೊ ಎಂಟು ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಇದಲ್ಲದೆ, ಮೂರು ವಿಭಿನ್ನ ವಿಶ್ವಕಪ್ ಟೂರ್ನಿಗಳಲ್ಲಿ ತಲಾ ಮೂರು ಅಥವಾ ಅದಕ್ಕಿಂತ ಹೆಚ್ಚು ಗೋಲುಗಳನ್ನು ದಾಖಲಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯೂ ಎಂಬಾಪೆ ಅವರಿಗೆ ಸಲ್ಲುತ್ತದೆ.
ಫ್ರಾನ್ಸ್ಗೆ 150 ಗೋಲುಗಳ ಮೈಲುಗಲ್ಲು
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಫ್ರಾನ್ಸ್ ತಂಡವು 150 ಗೋಲುಗಳ ಮೈಲುಗಲ್ಲು ತಲುಪಿದೆ. ಬ್ರೆಝಿಲ್, ಜರ್ಮನಿ ಮತ್ತು ಅರ್ಜೆಂಟೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ತಂಡ ಎಂಬ ಹೆಗ್ಗಳಿಕೆಗೆ ಫ್ರಾನ್ಸ್ ಪಾತ್ರವಾಗಿದೆ.
ಅಲ್ಲದೆ, ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ತಂಡವು ಇದೇ ಮೊದಲ ಬಾರಿಗೆ ಸತತ ಐದು ಪಂದ್ಯಗಳಲ್ಲಿ ಜಯ ಸಾಧಿಸಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ.






