FIFA World Cup-2026 | ಹ್ಯಾರಿ ಕೇನ್ ಆಟಕ್ಕೆ ಕ್ರೊಯೇಷಿಯಾ ಶರಣು; ಇಂಗ್ಲೆಂಡ್ಗೆ ಭರ್ಜರಿ ಜಯ

ಹ್ಯಾರಿ ಕೇನ್ Photo : x.com/XHSports
ಡಲ್ಲಾಸ್: ನಾಯಕ ಹ್ಯಾರಿ ಕೇನ್ ಎರಡು ಗೋಲುಗಳನ್ನು ಹೊಡೆಯುವ ಮೂಲಕ ಫಿಫಾ ವಿಶ್ವಕಪ್-2026ರ ಎಲ್ ಗುಂಪಿನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕ್ರೊಯೇಷಿಯಾ ವಿರುದ್ಧ 4-2 ಗೋಲುಗಳ ಭರ್ಜರಿ ವಿಜಯ ಸಾಧಿಸಿದೆ.
ಇದರೊಂದಿಗೆ 1966ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಇಂಗ್ಲೆಂಡ್ ತಂಡ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ.
ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹ್ಯಾರಿ ಕೇನ್ ಇಂಗ್ಲೆಂಡ್ ತಂಡದ ಗೋಲು ಖಾತೆ ತೆರೆದರು. ಸತತ ಎರಡು ಗೋಲುಗಳನ್ನು ಗಳಿಸಿದ ಸಂಭ್ರಮದಲ್ಲಿದ್ದ ತಂಡಕ್ಕೆ ಕ್ರೊಯೇಷಿಯಾ ತಿರುಗೇಟು ನೀಡಿ ವಿರಾಮದ ವೇಳೆಗೆ 2-2 ಸಮಬಲ ಸಾಧಿಸಿತು. ಮಾರ್ಟಿನ್ ಬಟೂರಿನಾ ಮತ್ತು ಪೀಟರ್ ಮೂಸಾ ಗೋಲು ಗಳಿಸಿದರು. ಆದಾಗ್ಯೂ ದ್ವಿತೀಯಾರ್ಧದಲ್ಲಿ ಜ್ಯೂಡ್ ಬೆಲ್ಲಿಂಗ್ಹ್ಯಾಮ್ ಮತ್ತು ಬದಲಿ ಆಟಗಾರ ಮಾಕ್ರ್ಯೂಸ್ ರಶ್ಫೋರ್ಡ್ ತಲಾ ಒಂದು ಗೋಲು ಗಳಿಸಿ ಇಂಗ್ಲೆಂಡ್ ತಂಡ ಸಂಪೂರ್ಣ ಮೂರು ಅಂಕ ಪಡೆಯಲು ಕಾರಣರಾದರು. ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ದಾಳಿಯ ರಭಸಕ್ಕೆ ಕ್ರೊಯೇಷಿಯಾ ಆಟಗಾರರಿಂದ ಪ್ರತಿರೋಧ ಕಂಡುಬರಲಿಲ್ಲ.




