FIFA World Cup 2026 | ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ ಎಂಬಾಪೆ

Photo credit : X@KMbappe
ಮಿಯಾಮಿ ಗಾರ್ಡನ್ಸ್, ಜು. 19 : FIFA ವಿಶ್ವಕಪ್ ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಫ್ರಾನ್ಸ್ ನ ಕೈಲಿಯನ್ ಎಂಬಾಪೆ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
ಶನಿವಾರ ನಡೆದ ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇಆಫ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ಗೋಲು ಗಳಿಸಿದ ಅವರು, ವಿಶ್ವಕಪ್ ನಲ್ಲಿ ತಮ್ಮ ವೃತ್ತಿಜೀವನದ ಒಟ್ಟು ಗೋಲುಗಳ ಸಂಖ್ಯೆಯನ್ನು 22ಕ್ಕೆ ಏರಿಸಿಕೊಂಡು, 21 ಗೋಲುಗಳಿದ್ದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಯವರನ್ನು ಹಿಂದಿಕ್ಕಿದ್ದಾರೆ.
2026ರ FIFA ವಿಶ್ವಕಪ್ ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ತಂಡವು ಇಂಗ್ಲೆಂಡ್ ವಿರುದ್ಧ 4–6 ಅಂತರದಿಂದ ಸೋತರೂ, ಎಂಬಾಪೆ ಅವರ ವೈಯಕ್ತಿಕ ಸಾಧನೆ ಗಮನ ಸೆಳೆಯಿತು.
ಪಂದ್ಯದ ಮೊದಲಾರ್ಧದಲ್ಲಿ ಫ್ರಾನ್ಸ್ ತಂಡವು ಸಂಪೂರ್ಣವಾಗಿ ಹಿಡಿತ ಕಳೆದುಕೊಂಡು 4–0 ಅಂತರದಿಂದ ಹಿನ್ನಡೆಯಲ್ಲಿತ್ತು. ವಿರಾಮದ ಬಳಿಕ 48ನೇ ನಿಮಿಷದಲ್ಲಿ ಎಂಬಾಪೆ ಗೋಲು ಗಳಿಸಿ ತಂಡಕ್ಕೆ ಚೈತನ್ಯ ತುಂಬಿದರು. ನಂತರ ಬ್ರಾಡ್ಲಿ ಬಾರ್ಕೋಲಾ ಗೋಲು ಗಳಿಸಿ ಅಂತರವನ್ನು ಕಡಿಮೆ ಮಾಡಿದರು. 66ನೇ ನಿಮಿಷದಲ್ಲಿ ಮತ್ತೆ ಗೋಲು ದಾಖಲಿಸಿದ ಎಂಬಾಪೆ, ಫ್ರಾನ್ಸ್ ನ ಪುನರಾಗಮನದ ಭರವಸೆಯನ್ನು ಜೀವಂತವಾಗಿರಿಸಿದರು. ಡಿಡಿಯರ್ ಡೆಸ್ಚಾಂಪ್ಸ್ ಪಡೆ ನಾಲ್ಕನೇ ಗೋಲನ್ನೂ ದಾಖಲಿಸಿತು.
ಆದರೆ ಇಂಗ್ಲೆಂಡ್ ಪರ ಬುಕಾಯೊ ಸಕಾ ಹ್ಯಾಟ್ರಿಕ್ ಸಾಧಿಸಿದರೆ, ಜೂಡ್ ಬೆಲ್ಲಿಂಗ್ಹ್ಯಾಮ್ ಒಂದು ಗೋಲು ಗಳಿಸಿದರು. ಪರಿಣಾಮ 10 ಗೋಲುಗಳ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ 6–4 ಅಂತರದ ಗೆಲುವಿನೊಂದಿಗೆ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು.
39 ವರ್ಷದ ಮೆಸ್ಸಿ ಇದೀಗ ತಮ್ಮ ಆರನೇ ವಿಶ್ವಕಪ್ ನಲ್ಲಿ ಆಡುತ್ತಿದ್ದಾರೆ. ರವಿವಾರ ಸ್ಪೇನ್ ವಿರುದ್ಧ ನಡೆಯಲಿರುವ ಫೈನಲ್ ನಲ್ಲಿ ಗೋಲು ಗಳಿಸುವ ಮೂಲಕ ಎಂಬಾಪೆ ಮೀರಿಸಿರುವ ದಾಖಲೆಯನ್ನು ಮರಳಿ ತಮ್ಮದಾಗಿಸಿಕೊಳ್ಳುವ ಅವಕಾಶ ಅವರಿಗೆ ಲಭಿಸಿದೆ.
ಪಂದ್ಯದ ಬಳಿಕ ಫಾಕ್ಸ್ ಸ್ಪೋರ್ಟ್ಸ್ ಗೆ ಪ್ರತಿಕ್ರಿಯಿಸಿದ ಎಂಬಾಪೆ, "ಲಿಯೋ ಯಾವಾಗಲೂ ಗೋಲು ಗಳಿಸುತ್ತಾರೆ. ನಾಳೆಯೂ ಅವರು ಖಂಡಿತ ಗೋಲು ಗಳಿಸುತ್ತಾರೆ ಎಂಬ ವಿಶ್ವಾಸವಿದೆ. ನಾನು ಪ್ರತಿ ಪಂದ್ಯದಲ್ಲೂ ತಂಡದ ಗೆಲುವಿಗೆ ನೆರವಾಗಲು ಪ್ರಯತ್ನಿಸುತ್ತೇನೆ. ವಿಶ್ವಕಪ್ ನಲ್ಲಿ ಹೆಚ್ಚು ಗೋಲು ಗಳಿಸುವುದು ಆಟಗಾರನನ್ನು ವಿಶೇಷ ಸ್ಥಾನಕ್ಕೆ ಕೊಂಡೊಯ್ಯುತ್ತದೆ," ಎಂದರು.
"ವಿಶ್ವಕಪ್ ಇತಿಹಾಸದಲ್ಲಿ ಅಗ್ರ ಗೋಲುಗಾರ ಎಂಬ ಹೆಗ್ಗಳಿಕೆಗಿಂತ ಫೈನಲ್ ನಲ್ಲಿ ಆಡಲು ಸಾಧ್ಯವಾಗಿದ್ದರೆ ಅದನ್ನೇ ನಾನು ಆಯ್ಕೆ ಮಾಡುತ್ತಿದ್ದೆ. ದಾಖಲೆಗಳು ಮುಖ್ಯವೇ ಸರಿ. ಆದರೆ ಇಂದು ನನ್ನ ಮೊದಲ ಆದ್ಯತೆ ಅದು ಅಲ್ಲ," ಎಂದು ಹೇಳಿದರು.
ಈ ವಿಶ್ವಕಪ್ನ ಆರಂಭಿಕ ಪಂದ್ಯದಲ್ಲೇ ಹ್ಯಾಟ್ರಿಕ್ ದಾಖಲಿಸಿದ್ದ ಮೆಸ್ಸಿ, ಆಸ್ಟ್ರಿಯಾ ವಿರುದ್ಧ ಎರಡು ಗೋಲು ಗಳಿಸುವ ಮೂಲಕ ಜರ್ಮನಿಯ ಮಿರೋಸ್ಲಾವ್ ಕ್ಲೋಸೆ ಹೊಂದಿದ್ದ ಹಿಂದಿನ ದಾಖಲೆಯನ್ನು ಮೀರಿದ್ದರು. ಬಳಿಕ ಜೋರ್ಡಾನ್, ಕೇಪ್ ವರ್ಡೆ ಮತ್ತು ಈಜಿಪ್ಟ್ ವಿರುದ್ಧದ ಪಂದ್ಯಗಳಲ್ಲೂ ಗೋಲು ಗಳಿಸಿ ತಮ್ಮ ಖಾತೆಗೆ ಗೋಲು ಹೆಚ್ಚಿಸಿಕೊಂಡಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಎಂಬಾಪೆ ಇದೀಗ ಮೆಸ್ಸಿಯನ್ನೂ ಹಿಂದಿಕ್ಕಿದ್ದಾರೆ.
ರಿಯಲ್ ಮ್ಯಾಡ್ರಿಡ್ ಪರ ಆಡುತ್ತಿರುವ 27 ವರ್ಷದ ಎಂಬಾಪೆ, ಉತ್ತರ ಅಮೆರಿಕದಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ನಲ್ಲಿ ಒಟ್ಟು 10 ಗೋಲು ಗಳಿಸಿದ್ದು, ಗೋಲ್ಡನ್ ಬೂಟ್ ಸ್ಪರ್ಧೆಯಲ್ಲೂ ಮುನ್ನಡೆ ಸಾಧಿಸಿದ್ದಾರೆ. ಮೆಸ್ಸಿ ಎಂಟು ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
2018ರ ವಿಶ್ವಕಪ್ ನಲ್ಲಿ ಫ್ರಾನ್ಸ್ ಪರ ನಾಲ್ಕು ಗೋಲು ಗಳಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದ ಎಂಬಾಪೆ, ಟೂರ್ನಿಯ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿಯನ್ನೂ ಪಡೆದಿದ್ದರು. 2022ರ ಖತರ್ ವಿಶ್ವಕಪ್ ಫೈನಲ್ ನಲ್ಲಿ ಅವರು ಹ್ಯಾಟ್ರಿಕ್ ಸಾಧಿಸಿದ್ದರೂ, ಮೆಸ್ಸಿ ನೇತೃತ್ವದ ಅರ್ಜೆಂಟೀನಾವನ್ನು ಪ್ರಶಸ್ತಿ ಗೆಲ್ಲುವುದನ್ನು ತಡೆಯಲು ಸಾಧ್ಯವಾಗಿರಲಿಲ್ಲ.
ಅಂತರರಾಷ್ಟ್ರೀಯ ವೃತ್ತಿಜೀವನದ ಆರಂಭದಲ್ಲಿ ಕ್ಲಬ್ ಮಟ್ಟದ ಯಶಸ್ಸನ್ನು ರಾಷ್ಟ್ರೀಯ ತಂಡದಲ್ಲಿ ಪುನರಾವರ್ತಿಸಲು ಮೆಸ್ಸಿ ಹೆಣಗಾಡಿದ್ದರು. ಆದರೆ ನಂತರ ವಿಶ್ವಕಪ್ ನಲ್ಲಿ ಸತತ ಉತ್ತಮ ಪ್ರದರ್ಶನ ನೀಡಿದರು. 2014ರಲ್ಲಿ ಜರ್ಮನಿ ವಿರುದ್ಧದ ಫೈನಲ್ ನಲ್ಲಿ ಸೋತಿದ್ದ ಅವರು, ಎಂಟು ವರ್ಷಗಳ ಬಳಿಕ ಖತರ್ ನಲ್ಲಿ ನಡೆದ 2022ರ ವಿಶ್ವಕಪ್ ನಲ್ಲಿ ಟ್ರೋಫಿ ಎತ್ತಿಹಿಡಿದು ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದರು.






