FIFA World Cup 2026 | ಕೊನೆಯ ಕ್ಷಣಗಳ ಹೀರೋ ಮೈಕೆಲ್ ಮೆರಿನೊ ಮ್ಯಾಜಿಕ್ : ಬೆಲ್ಜಿಯಂ ಸೋಲಿಸಿ ಸ್ಪೇನ್ ಸೆಮಿಫೈನಲ್ಗೆ

Photo: x.com/sport24
ಲಾಸ್ ಏಂಜಲೀಸ್ : ಮೈಕೆಲ್ ಮೆರಿನೊ ಅವರ ಕೊನೆಯ ಕ್ಷಣಗಳ ಗೋಲು ನೆರವಿನಿಂದ ಸ್ಪೇನ್ ತಂಡವು ಬೆಲ್ಜಿಯಂ ತಂಡವನ್ನು 2-1 ಅಂತರದಿಂದ ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಪಂದ್ಯ ಮುಗಿಯಲು ಕೆಲವೇ ನಿಮಿಷಗಳಿದ್ದಾಗ ಬದಲಿ ಆಟಗಾರನಾಗಿ ಬಂದ ಮೈಕೆಲ್ ಮೆರಿನೊ, ಸ್ಪೇನ್ ಪರ ಗೆಲುವಿನ ಗೋಲು ದಾಖಲಿಸಿದರು.
ಭಾರಿ ಪೈಪೋಟಿಯಿಂದ ಕೂಡಿದ್ದ ಕ್ವಾರ್ಟರ್ಫೈನಲ್ನಲ್ಲಿ ಸ್ಪೇನ್ ತಂಡವು ಈ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಗೋಲು ಬಿಟ್ಟುಕೊಟ್ಟಿತು. ಫ್ಯಾಬಿಯನ್ ರೂಯಿಝ್ ಪಂದ್ಯದ 30ನೇ ನಿಮಿಷದಲ್ಲಿ ಆಕರ್ಷಕ ಗೋಲು ಗಳಿಸಿ ಸ್ಪೇನ್ಗೆ ಮೊದಲ ಮುನ್ನಡೆ ಗಳಿಸಿಕೊಟ್ಟರು. ಆದರೆ ಬೆಲ್ಜಿಯಂನ ಚಾರ್ಲ್ಸ್ ಡಿ ಕೆಟೆಲೇರೆ ಕೆಲವೇ ನಿಮಿಷಗಳಲ್ಲಿ ಹೆಡರ್ ಮೂಲಕ ಗೋಲು ದಾಖಲಿಸಿ ಸಮಬಲಗೊಳಿಸಿದರು. ಇದು ಸ್ಪೇನ್ ತಂಡದ ವಿರುದ್ಧ ಈ ವಿಶ್ವಕಪ್ನಲ್ಲಿ ಬಂದ ಮೊದಲ ಗೋಲು ಕೂಡ ಆಗಿದೆ.
ದ್ವಿತೀಯಾರ್ಧದಲ್ಲಿ ಕೊನೆಯವರೆಗೂ ಯಾವುದೇ ಗೋಲು ದಾಖಲಾಗದೆ ಸಮಬಲದಲ್ಲಿಯೇ ಮುನ್ನಡೆಯುತ್ತಿದ್ದಾಗ ಬದಲಿ ಆಟಗಾರನಾಗಿ ಮೈದಾನಕ್ಕೆ ಬಂದ ಮೈಕೆಲ್ ಮೆರಿನೊ ಕೇವಲ 117 ಸೆಕೆಂಡುಗಳಲ್ಲಿ, ಚೆಂಡನ್ನು ಕೇವಲ ಎರಡನೇ ಬಾರಿ ಸ್ಪರ್ಶಿಸುತ್ತಿದ್ದಂತೆ ಗೋಲು ಬಾರಿಸುವ ಮೂಲಕ ಮತ್ತೊಮ್ಮೆ ಸ್ಪೇನ್ ಪಾಲಿಗೆ ಪಂದ್ಯದ ಹೀರೋ ಆಗಿ ಬದಲಾದರು. ಹಿಂದಿನ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧವೂ ಕೊನೆಯ ಕ್ಷಣದ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಮೆರಿನೊ, ಈಗ ಬೆಲ್ಜಿಯಂ ವಿರುದ್ಧವೂ ಅದೇ ಮ್ಯಾಜಿಕ್ ಪುನರಾವರ್ತಿಸಿ ಸ್ಪೇನ್ ತಂಡದ ಪಾಲಿಗೆ ಮತ್ತೊಮ್ಮೆ ಆಪತ್ಭಾಂಧವನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಸ್ಪೇನ್ 2-1 ಅಂತರದಿಂದ ಬೆಲ್ಜಿಯಂ ಅನ್ನು ಸೋಲಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಫ್ರಾನ್ಸ್ ತಂಡವನ್ನು ಎದುರಿಸಲಿದೆ.






