ಫಿಫಾ ವಿಶ್ವಕಪ್ 2026: ಮೆಕ್ಸಿಕೊದಲ್ಲಿ ಉದ್ಘಾಟನಾ ಪಂದ್ಯ, ನ್ಯೂಜೆರ್ಸಿಯಲ್ಲಿ ಫೈನಲ್

Photo: fifa.com
ಮೆಕ್ಸಿಕೊ ಸಿಟಿ: 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯು ಜೂನ್ 11ರಿಂದ ಜುಲೈ 19ರ ತನಕ ನಡೆಯಲಿದೆ. ಮೆಕ್ಸಿಕೊ ಸಿಟಿಯ ಅಝ್ಟೆಕಾ ಸ್ಟೇಡಿಯಮ್ ನಲ್ಲಿ ಜೂನ್ 11ರಂದು ಟೂರ್ನಿಯ ಉದ್ಘಾಟನಾ ಪಂದ್ಯವು ನಡೆಯಲಿದೆ. ನ್ಯೂ ಜೆರ್ಸಿಯ ಮೆಟ್ಲೈಫ್ ಕ್ರೀಡಾಂಗಣವು ವಿಶ್ವ ಫುಟ್ಬಾಲ್ ನ ಫೈನಲ್ ಪಂದ್ಯದ ಆತಿಥ್ಯವಹಿಸಲಿದೆ ಎಂದು ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಸೋಮವಾರ ಪ್ರಕಟಿಸಿದೆ.
ಮುಂಬರುವ ಟೂರ್ನಮೆಂಟ್ನಲ್ಲಿ ಪ್ರತಿಷ್ಠಿತ ಟ್ರೋಫಿಗಾಗಿ ಒಟ್ಟು 48 ತಂಡಗಳು 104 ಪಂದ್ಯಗಳಲ್ಲಿ ಭಾಗವಹಿಸಲಿದ್ದು ಮೆಕ್ಸಿಕೊ, ಅಮೆರಿಕ ಹಾಗೂ ಕೆನಡಾದ ಸಹ ಆತಿಥ್ಯದಲ್ಲಿ ಟೂರ್ನಮೆಂಟ್ ನಡೆಯಲಿದೆ. ಮೂರು ದೇಶಗಳ 16 ನಗರಗಳಲ್ಲಿ ಫಿಫಾ ವಿಶ್ವಕಪ್ ಟೂರ್ನಿಯು ನಡೆಯಲಿದೆ.
ಅಝ್ಟೆಕಾ ಕ್ರೀಡಾಂಗಣವು 1970 ಹಾಗೂ 1986ರ ಆವೃತ್ತಿಯ ನಂತರ ಮೂರನೇ ಬಾರಿ ವಿಶ್ವಕಪ್ ಟೂರ್ನಮೆಂಟ್ ಆಯೋಜಿಸುತ್ತಿರುವ ಮೊದಲ ಕ್ರೀಡಾಂಗಣವಾಗಿದೆ. ಈ ಕ್ರೀಡಾಂಗಣವು 1970 ಹಾಗೂ 1986ರ ಟೂರ್ನಿಗಳ ಫೈನಲ್ ಆತಿಥ್ಯ ವಹಿಸಿತ್ತು.
ಅಮೆರಿಕದದ ಲಾಸ್ ಏಂಜಲಿಸ್ನ ಸೋಫಿ ಸ್ಟೇಡಿಯಮ್ ನಲ್ಲಿ ಜೂನ್ 12ರಿಂದ ಗ್ರೂಪ್ ಹಂತದ ಅಭಿಯಾನ ಆರಂಭವಾಗಲಿದೆ.
ಅಟ್ಲಾಂಟ ಹಾಗೂ ಡಲ್ಲಾಸ್ ಸೆಮಿ ಫೈನಲ್ ಆತಿಥ್ಯಕ್ಕೆ ಸಜ್ಜಾಗಿದ್ದು, ಮಿಯಾಮಿಯಲ್ಲಿ 3ನೇ ಸ್ಥಾನಕ್ಕಾಗಿ ಪಂದ್ಯ ನಡೆಯಲಿದೆ. ಲಾಸ್ ಏಂಜಲೀಸ್, ಕಾನ್ಸಾಸ್ ಸಿಟಿ, ಮಿಯಾಮಿ ಹಾಗೂ ಬೋಸ್ಟನ್ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದ ಆತಿಥ್ಯವಹಿಸಲಿವೆ.
ಸಹ ಆತಿಥೇಯ ತಂಡವಾಗಿರುವ ಕೆನಡಾ 13 ಪಂದ್ಯಗಳನ್ನು ಆಯೋಜಿಸಲಿದೆ. ಟೊರೊಂಟೊವು ಕೆನಡಾ ತಂಡದ ಮೊದಲ ಗೇಮ್ ನ ಆತಿಥ್ಯವಹಿಸಲಿದೆ. ವ್ಯಾಂಕೋವರ್ ಕೆನಡಾ ಆಡಲಿರುವ ಮತ್ತೊಂದು ಸ್ಟೇಡಿಯಮ್ ಆಗಿದೆ.
ವಿಶ್ವಕಪ್ ಫೈನಲ್ ಪಂದ್ಯವು ಜುಲೈ 19ರಂದು ನ್ಯೂಜೆರ್ಸಿಯ 82,500 ಆಸನಗಳ ಸಾಮರ್ಥ್ಯದ ಮೆಟ್ಲೈಫ್ ಸ್ಟೇಡಿಯಮ್ ನಲ್ಲಿ ನಡೆಯಲಿದೆ. ಈ ಕ್ರೀಡಾಂಗಣವು 2016ರ ಕೊಪಾ ಅಮೆರಿಕ ಟೂರ್ನಮೆಂಟ್ ಫೈನಲ್ ಸಹಿತ ಹಲವಾರು ಅಂತರ್ರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳ ಆತಿಥ್ಯವನ್ನು ವಹಿಸಿದೆ.
2026ರ ವಿಶ್ವಕಪ್ ಟೂರ್ನಿಯಲ್ಲಿ 32ರ ಬದಲು 48 ತಂಡಗಳು ಭಾಗವಹಿಸಲಿದ್ದು , 24 ಹೆಚ್ಚುವರಿ ಪಂದ್ಯಗಳು ನಡೆಯಲಿವೆ. ಹೀಗಾಗಿ 16 ತಾಣಗಳಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.
ಟೂರ್ನಮೆಂಟ್ನಲ್ಲಿ ತಲಾ ನಾಲ್ಕು ತಂಡಗಳಂತೆ 12 ಗುಂಪುಗಳು ಇರುತ್ತವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಮೂರನೇ ಸ್ಥಾನ ಪಡೆಯಲಿರುವ 8 ಶ್ರೇಷ್ಠ ತಂಡಗಳೊಂದಿಗೆ ಮುಂದಿನ ಸುತ್ತಿಗೇರಲಿವೆ.
ಆ ನಂತರ ಸ್ಪರ್ಧಾವಳಿಯು ನೇರ ನಾಕೌಟ್ ಮಾದರಿಯಲ್ಲಿ ನಡೆಯಲಿದೆ.







