FIFA World Cup 2026 | ವಿಶ್ವಕಪ್ ನಲ್ಲಿ ಪ್ರಯಾಣದ ನಿರ್ಬಂಧ: ದೂರು ಸಲ್ಲಿಸಲು ಇರಾನ್ ನಿರ್ಧಾರ

Photo Credit : FFIRI \ instagram.com
ನ್ಯೂಯಾರ್ಕ್, ಜೂ. 19: ಈಗ ನಡೆಯುತ್ತಿರುವ ಫಿಫಾ ವಿಶ್ವಕಪ್ ಸಮಯದಲ್ಲಿ ವಿಧಿಸಲಾಗಿರುವ ಪ್ರಯಾಣ ನಿರ್ಬಂಧಗಳು ಭಾಗವಹಿಸುವ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ತಂಡಕ್ಕೆ ಗಮನಾರ್ಹ ಅನಾನುಕೂಲತೆಯಾಗಿದೆ ಎಂದು ಆರೋಪಿಸಿರುವ ಫುಟ್ಬಾಲ್ ಫೆಡರೇಶನ್ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಫಿಫಾಗೆ ಔಪಚಾರಿಕ ದೂರು ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.
ಪ್ರಯಾಣದ ನಿರ್ಬಂಧದ ಕ್ರಮಗಳು ಪಂದ್ಯಾವಳಿಯಲ್ಲಿ ತಂಡದ ಸಿದ್ಧತೆಗಳು ಹಾಗೂ ಚೇತರಿಕೆ ಯೋಜನೆಗಳನ್ನು ಅಡ್ಡಿಪಡಿಸಿವೆ ಎಂದು ಇರಾನಿನ ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇರಾನ್ ಫುಟ್ಬಾಲ್ ಫೆಡರೇಶನ್, ‘‘ಇಂತಹ ನಿರ್ಬಂಧಗಳು ಭಾಗವಹಿಸುವ ಎಲ್ಲ ತಂಡಗಳಿಗೆ ಸಮಾನ ಪರಿಸ್ಥಿತಿಗಳನ್ನು ಒದಗಿಸುವ ತತ್ವಕ್ಕೆ ಹೊಂದಿಕೆಯಾಗುವುದಿಲ್ಲ ಹಾಗೂ ತಂಡಗಳ ತಯಾರಿ ಪ್ರಕ್ರಿಯೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು’’ ಎಂದಿದೆ.
ಫೆಡರೇಶನ್ ತನ್ನ ಅತೃಪ್ತಿಯನ್ನು ಔಪಚಾರಿಕವಾಗಿ ವ್ಯಕ್ತಪಡಿಸಲಿದೆ ಹಾಗೂ ಸೂಕ್ತ ಮಾರ್ಗಗಳ ಮೂಲಕ ಫಿಫಾಗೆ ಅಧಿಕೃತ ದೂರು ನೀಡಲಿದೆ. ಈ ಮಿತಿಗಳ ಹೊರತಾಗಿಯೂ, ಇರಾನ್ನ ರಾಷ್ಟ್ರೀಯ ತಂಡವು ತನ್ನ ಪೂರ್ವಸಿದ್ಧತಾ ಕಾರ್ಯಕ್ರಮವನ್ನು ಮುಂದುವರಿಸುತ್ತದೆ ಹಾಗೂ ಬೆಲ್ಜಿಯಂ ವಿರುದ್ಧದ ತನ್ನ ಮುಂಬರುವ ಪಂದ್ಯದ ಮೇಲೆ ಸಂಪೂರ್ಣ ಗಮನ ಹರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇರಾನ್ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ತನ್ನ ಆರಂಭಿಕ ವಿಶ್ವಕಪ್ ಪಂದ್ಯವನ್ನು ಆಡಿದ ನಂತರ ಅಮೆರಿಕವನ್ನು ತೊರೆದು ಮೆಕ್ಸಿಕೊದಲ್ಲಿರುವ ತನ್ನ ತರಬೇತಿ ನೆಲೆಗೆ ಮರಳಬೇಕಾಗಿದೆ.
ಅರಿಜೋನಾದಲ್ಲಿ ಫುಟ್ಬಾಲ್ ವಿಶ್ವಕಪ್ ನ ತಯಾರಿ ನಡೆಸಬೇಕಾಗಿದ್ದ ಇರಾನ್ ತಂಡವು ತನ್ನ ಹಲವಾರು ಸಹಾಯಕ ಸಿಬ್ಬಂದಿಗೆ ವೀಸಾಗಳನ್ನು ನಿರಾಕರಿಸಿದ ಕಾರಣ ಮೆಕ್ಸಿಕೊದಲ್ಲಿ ತರಬೇತಿ ನಡೆಸುತ್ತಿದೆ. ಇದು ಇರಾನ್ ಗೆ ಹೆಚ್ಚುವರಿ ಸಾರಿಗೆ ಸವಾಲುಗಳನ್ನು ಸೃಷ್ಟಿಸುತ್ತಿದೆ.






