ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದ ಟಾಪ್-5 ಪುಟ್ಟ ರಾಷ್ಟ್ರಗಳು ಯಾವುವು?

Photo Credit : aljazeera.com
ಚೆನ್ನೈ: ಎಸ್ಟಾಟಿನಿ ವಿರುದ್ಧ ಸೋಮವಾರ ನಡೆದ ಅರ್ಹತಾ ಪಂದ್ಯದಲ್ಲಿ 3-0 ಅಂತರದಿಂದ ಗೆಲುವು ದಾಖಲಿಸಿರುವ ದ್ವೀಪ ರಾಷ್ಟ್ರ ಕೇಪ್ ವರ್ಡ್ ಮೊದಲ ಬಾರಿ ಫಿಫಾ ವಿಶ್ವಕಪ್ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದೆ.
1930ರಲ್ಲಿ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಆರಂಭವಾದಾಗಿನಿಂದ ಜನಸಂಖ್ಯೆಯ ದೃಷ್ಟಿಯಿಂದ ಐಸ್ಲ್ಯಾಂಡ್ ನಂತರ ವಿಶ್ವಕಪ್ಗೆ ಅರ್ಹತೆ ಪಡೆದ 2ನೇ ಪುಟ್ಟ ರಾಷ್ಟ್ರ ಕೇಪ್ ವರ್ಡ್.
‘ಡಿ’ ಗುಂಪಿನಲ್ಲಿ 23 ಅಂಕ ಕಲೆ ಹಾಕಿರುವ ‘ಬ್ಲ್ಯೂ ಶಾರ್ಕ್’ಖ್ಯಾತಿಯ ಕೇಪ್ ವರ್ಡ್ ತಂಡವು 8 ಬಾರಿ ವಿಶ್ವಕಪ್ನಲ್ಲಿ ಭಾಗವಹಿಸಿರುವ ಕ್ಯಾಮರೂನ್ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನ ಪಡೆದಿದೆ. ದ್ವಿತೀಯಾರ್ಧದಲ್ಲಿ ಡೈಲೊನ್ ಲಿವ್ರಮೆಂಟೊ, ವಿಲ್ಲಿ ಸೆಮೆಡೊ ಹಾಗೂ ಸ್ಟೋಪಿರಾ ಗೋಲುಗಳ ನೆರವಿನಿಂದ ಕೇಪ್ ವರ್ಡ್ ತಂಡವು ಗೆಲುವು ದಾಖಲಿಸಿದ ಬೆನ್ನಿಗೇ ರಾಜಧಾನಿ ಪ್ರೈಯಾದಲ್ಲಿ ಸಂಭ್ರಮಾಚರಣೆ ಕಂಡು ಬಂತು.
ಅಂಗೋಲ ಹಾಗೂ ಕ್ಯಾಮರೂನ್ ತಂಡಗಳ ವಿರುದ್ಧ ಸೋಲನುಭವಿಸಿ ಕಳಪೆ ಆರಂಭ ಪಡೆದಿದ್ದ ಕೇಪ್ ವರ್ಡ್ ಆ ನಂತರ ಸತತ 5 ಪಂದ್ಯಗಳಲ್ಲಿ ಜಯ ದಾಖಲಿಸಿ ವಿಶ್ವಕಪ್ಗೆ ಅರ್ಹತೆ ಪಡೆದಿದೆ.
ಐತಿಹಾಸಿಕ ಗೆಲುವನ್ನು ಶ್ಲಾಘಿಸಿದ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ, ‘‘ದೇಶಾದ್ಯಂತವಿರುವ ಹೊಸ ತಲೆಮಾರಿನ ಫುಟ್ಬಾಲ್ ಪ್ರೇಮಿಗಳ ಶಕ್ತಿ ಇದಾಗಿದೆ’’ ಎಂದರು.
ಕೇಪ್ ವರ್ಡ್ ತಂಡವು ಈಗಾಗಲೇ 2026ರ ವಿಶ್ವಕಪ್ಗೆ ಅರ್ಹತೆ ಪಡೆದಿರುವ 5 ಆಫ್ರಿಕಾ ದೇಶಗಳಾದ ಅಲ್ಜಿರಿಯ, ಈಜಿಪ್ಟ್, ಮೊರೊಕ್ಕೊ, ಟ್ಯುನಿಶಿಯ ಹಾಗೂ ಘಾನಾವನ್ನು ಸೇರಿಕೊಂಡಿದೆ.
ಈ ಹಿಂದೆ ಪೋರ್ಚುಗಿಸ್ ಕಾಲನಿಯಾಗಿದ್ದ, 1975ರಲ್ಲಿ ಸ್ವಾತಂತ್ರ್ಯ ಪಡೆದಿದ್ದ ಕೇಪ್ ವರ್ಡ್ ತಂಡದ ಪಾಲಿಗೆ ಇದು ಅರ್ಥಪೂರ್ಣ ಗೆಲುವಾಗಿದೆ. 2002ರಲ್ಲಿ ಮೊದಲ ಬಾರಿ ವಿಶ್ವಕಪ್ಗೆ ಅರ್ಹತೆ ಪಡೆಯಲು ಪ್ರಯತ್ನಿಸಿದ್ದ ಕೇಪ್ ವರ್ಡ್, 2013 ಹಾಗೂ 2023ರಲ್ಲಿ ಎರಡು ಬಾರಿ ಆಫ್ರಿಕಾ ಕಪ್ ಆಫ್ ನೇಶನ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿತ್ತು.
ಫಿಫಾ ವಿಶ್ವಕಪ್ನಲ್ಲಿ ಅರ್ಹತೆ ಪಡೆದಿರುವ ಐದು ಪುಟ್ಟ ರಾಷ್ಟ್ರಗಳತ್ತ ಒಂದು ನೋಟ:
► ಐಸ್ಲ್ಯಾಂಡ್: 3,50,000ಕ್ಕಿಂತ ಸ್ವಲ್ಪ ಹೆಚ್ಚು ಜನಸಂಖ್ಯೆ ಹೊಂದಿರುವ ಐಸ್ಲ್ಯಾಂಡ್, ರಶ್ಯದಲ್ಲಿ 2018ರ ಆವೃತ್ತಿಯಲ್ಲಿ ಪಾದಾರ್ಪಣೆ ಮಾಡಿದಾಗ ಫಿಫಾ ವಿಶ್ವಕಪ್ಗೆ ಅರ್ಹತೆ ಪಡೆದ ಅತ್ಯಂತ ಚಿಕ್ಕ ರಾಷ್ಟ್ರ ಎನಿಸಿಕೊಂಡಿತ್ತು.
►ಕೇಪ್ ವರ್ಡ್: ಪಶ್ಚಿಮ ಆಫ್ರಿಕಾದ ಕರಾವಳಿಯಲ್ಲಿರುವ ಈ ದೇಶವು ಸುಮಾರು 5,25,000 ಜನಸಂಖ್ಯೆಯನ್ನು ಹೊಂದಿದೆ. ವಿಶ್ವದ 70ನೇ ಸ್ಥಾನದಲ್ಲಿದೆ. 10 ಪಂದ್ಯಗಳಿಂದ 23 ಅಂಕಗಳೊಂದಿಗೆ ತನ್ನ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಅರ್ಹತೆಯನ್ನು ಪಡೆದುಕೊಂಡಿದೆ. 2ನೇ ಸ್ಥಾನದಲ್ಲಿರುವ ಕ್ಯಾಮರೂನ್ ತಂಡಕ್ಕಿಂತ 4 ಅಂಕ ಮುಂದಿದೆ. ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ಗೆ ಅರ್ಹತೆ ಪಡೆದ ಅತ್ಯಂತ ಚಿಕ್ಕ ರಾಷ್ಟ್ರ ಕೇಪ್ ವರ್ಡ್.
►ಪರಾಗ್ವೆ: 1930ರ ಉದ್ಘಾಟನಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದಾಗ ಕೇವಲ 1 ಮಿಲಿಯನ್ಗಿಂತ ಕಡಿಮೆ ಜನಸಂಖ್ಯೆ ಹೊಂದಿದ್ದ ದಕ್ಷಿಣ ಅಮೆರಿಕಾದ ರಾಷ್ಟ್ರ ಪರಾಗ್ವೆ 2027ರ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. 9ನೇ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಜ್ಜಾಗಿದೆ.
►ಟ್ರಿನಿಡಾಡ್ ಆ್ಯಂಡ್ ಟೊಬಾಗೊ: ಕೆರಿಬಿಯನ್ ರಾಷ್ಟ್ರ 2006ರಲ್ಲಿ ಜರ್ಮನಿಯಲ್ಲಿ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡಿತ್ತು. ಆಗ ಅದು 1.3 ಮಿಲಿಯನ್ ಜನಸಂಖ್ಯೆಯೊಂದಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಅತ್ಯಂತ ಚಿಕ್ಕ ದೇಶವಾಗಿತ್ತು. ತನ್ನ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದ ನಂತರ ಗುಂಪು ಹಂತದಲ್ಲೇ ನಿರ್ಗಮಿಸಿತು. ಆ ನಂತರ ಮತ್ತೆ ಹಿಂತಿರುಗಿಲ್ಲ.
►ಉತ್ತರ ಐರ್ಲ್ಯಾಂಡ್: 1958ರ ವಿಶ್ವಕಪ್ಗೆ ಅರ್ಹತೆ ಪಡೆದಾಗ ಅಂದಾಜು 1.4 ಮಿಲಿಯನ್ ಜನಸಂಖ್ಯೆ ಹೊಂದಿದ್ದ ಉತ್ತರ ಐರ್ಲ್ಯಾಂಡ್ ತಂಡವು ಜೆಕೊಸ್ಲೋವಾಕಿಯಾವನ್ನು ಸೋಲಿಸಿತ್ತು. ಅರ್ಜೆಂಟೀನ ವಿರುದ್ಧ ಸೋತಿತ್ತು. ಗುಂಪು ಹಂತದಲ್ಲಿ ಜರ್ಮನಿಯೊಂದಿಗೆ ಡ್ರಾ ಸಾಧಿಸಿತು. ನಂತರ ಫ್ರಾನ್ಸ್ ವಿರುದ್ಧ ಸೋತು ನಾಕೌಟ್ ಸುತ್ತಿನಲ್ಲಿ ಹೊರಬಿತ್ತು. ಉತ್ತರ ಐರ್ಲ್ಯಾಂಡ್ ತಂಡವು 1982 ಹಾಗೂ 1986ರಲ್ಲಿ ವಿಶ್ವಕಪ್ಗೆ ಅರ್ಹತೆ ಪಡೆಯಿತು.







