ಫಿಫಾ ವಿಶ್ವಕಪ್ ಭದ್ರತೆಗೆ 1,375 ಕೋಟಿ ರೂ. ಒದಗಿಸಿದ ಕೆನಡಾ ಸರಕಾರ

Photo Credit : PTI
ಟೊರಾಂಟೊ, ಎ. 30: ಮುಂಬರುವ ಫುಟ್ಬಾಲ್ ವಿಶ್ವಕಪ್ ವೇಳೆ ಭದ್ರತೆಗಾಗಿ ಕೆನಡ ಸರಕಾರವು 145 ಮಿಲಿಯ ಡಾಲರ್ (ಸುಮಾರು 1,375 ಕೋಟಿ ರೂಪಾಯಿ) ಒದಗಿಸುವುದು ಎಂದು ದೇಶದ ಸಾರ್ವಜನಿಕ ಸುರಕ್ಷತೆ ಸಚಿವ ಗಾರಿ ಆನಂದಸಂಗರಿ ಬುಧವಾರ ಘೋಷಿಸಿದ್ದಾರೆ.
ಫಿಫಾ ವಿಶ್ವಕಪ್ ಪಂದ್ಯಾವಳಿಯು ಜೂನ್ 11ರಿಂದ ಜುಲೈ 19ರವರೆಗೆ ಅಮೆರಿಕ, ಕೆನಡ ಮತ್ತು ಮೆಕ್ಸಿಕೊ ದೇಶಗಳಲ್ಲಿ ನಡೆಯಲಿದೆ. ಈ ಅವಧಿಯಲ್ಲಿ 13 ಪಂದ್ಯಗಳು ಟೊರಾಂಟೊ ಮತ್ತು ವ್ಯಾಂಕೋವರ್ಗಳಲ್ಲಿ ನಡೆಯುತ್ತವೆ.
‘‘ಜನರು ಪಂದ್ಯಗಳನ್ನು ಸುರಕ್ಷಿತವಾಗಿ ವೀಕ್ಷಿಸುವಂತೆ ಖಾತರಿಪಡಿಸಲು ಏರ್ಪಡಿಸಲಾಗುವ ಭದ್ರತಾ ವ್ಯವಸ್ಥೆಗೆ ಈ ಹಣವನ್ನು ಬಳಸಲಾಗುವುದು. ಈ ಜವಾಬ್ದಾರಿಯನ್ನು ರಾಜ್ಯಗಳು ಮತ್ತು ಮುನಿಸಿಪಾಲಿಟಿಗಳಿಗೆ ನೀಡಲಾಗುವುದು’’ ಎಂದು ಟೊರಾಂಟೊದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾರ್ವಜನಿಕ ಸುರಕ್ಷತೆ ಸಚಿವರ ತಿಳಿಸಿದರು.
ಟೊರಾಂಟೊಗೆ 45 ಮಿಲಿಯ ಡಾಲರ್ (ಸುಮಾರು 427 ಕೋಟಿ ರೂಪಾಯಿ) ಮತ್ತು ವ್ಯಾಂಕೋವರ್ಗೆ 100 ಮಿಲಿಯ ಡಾಲರ್ (ಸುಮಾರು 950 ಕೋಟಿ ರೂಪಾಯಿ) ಒದಗಿಸಲಾಗುವುದು ಎಂದು ಅವರು ಹೇಳಿದರು.
ಈ ಮೊತ್ತವು ಕೆನಡ ಸರಕಾರವು ಈಗಾಗಲೇ ಆತಿಥೇಯ ನಗರಗಳಿಗೆ ನೀಡಿರುವ 220 ಮಿಲಿಯ ಡಾಲರ್ (ಸುಮಾರು 2,087 ಕೋಟಿ ರೂಪಾಯಿ)ಗೆ ಹೆಚ್ಚುವರಿಯಾಗಿರುತ್ತದೆ.




