19 ವರ್ಷಗಳ ಹಿಂದೆ ಎತ್ತಿ ಆಡಿಸಿದ್ದ ಮಗುವೇ ಫಿಫಾ ವಿಶ್ವಕಪ್ನಲ್ಲಿ ಮೆಸ್ಸಿ ಎದುರಾಳಿ!

ಲಿಯೊನೆಲ್ ಮೆಸ್ಸಿ , ಲ್ಯಾಮಿನ್ ಯಮಲ್ | Photo Credit : AP
ನ್ಯೂಯಾರ್ಕ್, ಜು.17: ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ರವಿವಾರ ರಾತ್ರಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡವು 2010ರ ಚಾಂಪಿಯನ್ ಸ್ಪೇನ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ 39ರ ವಯಸ್ಸಿನ ಲಿಯೊನೆಲ್ ಮೆಸ್ಸಿ ಹಾಗೂ ಸ್ಪೇನ್ನ 18ರ ಹರೆಯದ ಲ್ಯಾಮಿನ್ ಯಮಲ್ ಮುಖಾಮುಖಿಯಾಗಲಿದ್ದಾರೆ.
19 ವರ್ಷಗಳ ಹಿಂದೆ ಯುನಿಸೆಫ್ನ ಕಾರ್ಯಕ್ರಮವೊಂದರಲ್ಲಿ ಆರು ತಿಂಗಳ ಮಗು ಯಮಲ್ರನ್ನು ಮೆಸ್ಸಿ ಎತ್ತಿ ಆಡಿಸಿದ್ದರು. ಈಗ ಆ ಛಾಯಾಚಿತ್ರವು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
2007ರಲ್ಲಿ 20ನೇ ವಯಸ್ಸಿನವರಾಗಿದ್ದ ಮೆಸ್ಸಿ ಅದಾಗಲೇ ಫುಟ್ಬಾಲ್ ಜಗತ್ತಿನ ಅದ್ಭುತ ಎಂದು ಕರೆಸಿಕೊಂಡಿದ್ದರು. ಬಾರ್ಸಿಲೋನದ ಡಿಯಾಡಿಯೊ ಸ್ಪೋರ್ಟ್ಸ್ ಎಂಬ ದಿನಪತ್ರಿಕೆ ಹಾಗೂ ಯೂನಿಸೆಫ್ ಸೇರಿ ಚಾರಿಟಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದವು. ಫೋಟೊಶೂಟ್ಗಾಗಿ ಫುಟ್ಬಾಲ್ ಮಾಂತ್ರಿಕ ಮೆಸ್ಸಿ ಪುಟ್ಟ ಮಗುವಿಗೆ ಬಾತ್ ಟಬ್ನಲ್ಲಿ ಸ್ನಾನ ಮಾಡಿಸಬೇಕಿತ್ತು.
ಮೆಸ್ಸಿ ತೋಳಲ್ಲಿ ಆರು ತಿಂಗಳ ಗಂಡು ಮಗುವಿತ್ತು.ಆ ಮಗುವನ್ನು ಬಾತ್ಟಬ್ನಲ್ಲಿಟ್ಟು ಮೆಸ್ಸಿ ಸ್ನಾನ ಮಾಡಿಸಿದ್ದರು. ಅಂದಿನ ಆ ಮಗುವೇ ಫಿಫಾ ವಿಶ್ವಕಪ್ನಲ್ಲಿ ಸ್ಪೇನ್ ತಂಡದ ಅತಿ ದೊಡ್ಡ ಅಸ್ತ್ರವಾಗಿರುವ ಲಾಮಿನ್ ಯಮಲ್.
ವರ್ಷಗಳು ಕಳೆದರೂ, ಪೀಳಿಗೆಗಳು ಬದಲಾದರೂ ಮೆಸ್ಸಿ ಮಾತ್ರ ಹಾಗೇ ಇದ್ದಾರೆ, 2022ರಲ್ಲಿ ಅರ್ಜೆಂಟೀನ ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಮೆಸ್ಸಿ ಮತ್ತೊಮ್ಮೆ ಫೈನಲ್ ಅಖಾಡದಲ್ಲಿ ಬಂದು ನಿಂತಿದ್ದಾರೆ. ಫೈನಲ್ನಲ್ಲಿ ಮೆಸ್ಸಿಯನ್ನು ಎದುರಿಸಿ ನಿಂತಿರುವುದು ಯಮಲ್ ಅವರನ್ನೊಳಗೊಂಡ ಸ್ಪೇನ್ ತಂಡ.
11 ವರ್ಷಗಳ ಹಿಂದೆ ತನ್ನೊಂದಿಗೆ ಫೋಟೊ ತೆಗೆಸಿಕೊಂಡಿದ್ದ ಹುಡುಗ ಇಟಲಿಯ ಜನ್ನಿಕ್ ಸಿನ್ನರ್ ಇತ್ತೀಚೆಗೆ ನೊವಾಕ್ ಜೊಕೊವಿಕ್ರ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಕನಸಿಗೆ ಕೊಳ್ಳಿ ಇಟ್ಟಿದ್ದ.19 ವರ್ಷದ ಹಿಂದೆ ಎತ್ತಿ ಆಡಿಸಿದ್ದ ಆ ಮಗುವೇ ಫಿಫಾ ವಿಶ್ವಕಪ್ನಲ್ಲಿ ಲಿಯೊನೆಲ್ ಮೆಸ್ಸಿ ಪಾಲಿನ ಅತಿ ದೊಡ್ಡ ಸವಾಲು. ಮೆಸ್ಸಿ ಇಂತಹ ಸವಾಲುಗಳನ್ನು ಮೆಟ್ಟಿಯೇ ಶ್ರೇಷ್ಠ ಎನಿಸಿಕೊಂಡಿದ್ದಾರೆ.
ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 85 ನಿಮಿಷಗಳ ಕಾಲ ಮೆಸ್ಸಿಯ ಸುತ್ತ ಚಕ್ರವ್ಯೆಹ ನಿರ್ಮಿಸಿ ಕಟ್ಟಿಹಾಕಲಾಗಿತ್ತು. ಆದರೆ ಪಂದ್ಯದುದ್ದಕ್ಕೂ ಮೆಸ್ಸಿ ಗೋಲು ಗಳಿಸದೇ ಇದ್ದರೂ ಸಹ ಆಟಗಾರರಿಗೆ ಎರಡು ಗೋಲು ಗಳಿಸುವಲ್ಲಿ ನೆರವಾಗಿ ತಂತ್ರಗಾರಿಕೆ ಮೆರೆದಿದ್ದರು.






