FIFA World Cup | ಪೋರ್ಚುಗಲನ್ನು 1-1 ಡ್ರಾಕ್ಕೆ ಹಿಡಿದಿಟ್ಟ ಕಾಂಗೊ

Photo Credit : AP
ಹ್ಯೂಸ್ಟನ್ (ಅಮೆರಿಕ), ಜೂ. 18: ಐವತ್ತೆರಡು ವರ್ಷಗಳ ಬಳಿಕ ವಿಶ್ವಕಪ್ಗೆ ಮರಳಿರುವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ಬುಧವಾರ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಠ ಪೋರ್ಚುಗಲ್ ತಂಡವನ್ನು 1-1ರ ಡ್ರಾದಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ಪಂದ್ಯ ಆರಂಭಗೊಂಡ ಆರನೇ ನಿಮಿಷದಲ್ಲೇ ಪೋರ್ಚುಗಲ್ ಮೊದಲ ಗೋಲು ದಾಖಲಿಸಿದಾಗ, ಕಾಂಗೊ ದೊಡ್ಡ ಸೋಲಿನತ್ತ ಮುಖ ಮಾಡಿದೆಯೇನೋ ಎಂಬಂತೆ ಪ್ರೇಕ್ಷಕರಿಗೆ ಅನಿಸಿತು. ಆದರೆ, ಹಾಗಾಗಲಿಲ್ಲ. ಕಾಂಗೊ ತೀವ್ರ ಪ್ರತಿ ಹೋರಾಟವನ್ನು ಸಂಘಟಿಸಿ ಪೋರ್ಚುಗಲ್ ಆಟಗಾರರ ಮುನ್ನಡೆಯನ್ನು ತಡೆಯಿತು.
ಆರನೇ ನಿಮಿಷದಲ್ಲಿ, ಪೋರ್ಚುಗಲ್ನ ಮೊದಲ ಗೋಲನ್ನು ಜೋವೊ ನೀವ್ಸ್ ಬಾರಿಸಿದರು. ಅವರು ಪೆಡ್ರೊ ನೆಟೊ ನೀಡಿದ ಚೆಂಡನ್ನು ಯಶಸ್ವಿಯಾಗಿ ತಲೆಯ ಮೂಲಕ ಗೋಲು ಪೆಟ್ಟಿಗೆಯೊಳಗೆ ಕಳುಹಿಸಿದರು.
‘ಕೆ’ ಗುಂಪಿನ ಪಂದ್ಯದಲ್ಲಿ, ಪೋರ್ಚುಗಲ್ ಚೆಂಡಿನ ಮೇಲೆ ಪಂದ್ಯದ ಹೆಚ್ಚಿನ ಸಮಯ ನಿಯಂತ್ರಣ ಹೊಂದಿತ್ತು. ಆದರೆ, ಕಾಂಗೊ ಮಣಿಯಲಿಲ್ಲ. ಆಟದ ಗತಿಯನ್ನು ನಿಧಾನಿಸಿ ಎಲ್ಲಾ ಒತ್ತಡಗಳನ್ನು ಹೀರಿಕೊಂಡಿತು. ಅವಕಾಶ ಸಿಕ್ಕಿದಾಗಲೆಲ್ಲ ಚೆಂಡನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.
ಪ್ರಥಮಾರ್ಧದ ನಂತರದ ಹೆಚ್ಚುವರಿ ಅವಧಿಯ ಐದನೇ ನಿಮಿಷದಲ್ಲಿ ಕಾಂಗೊ ತನ್ನ ಮೊದಲ ಗೋಲನ್ನು ಬಾರಿಸಿ ಅಂಕಪಟ್ಟಿಯನ್ನು ಸಮಬಲಗೊಳಿಸಿತು. ಆರ್ತರ್ ಮಸುವಕು ನೀಡಿದ ಚೆಂಡನ್ನು ಯೋನ್ ವಿಸ್ಸ ತಲೆಯಿಂದ ಗೋಲುಪೆಟ್ಟಿಗೆಯೊಳಗೆ ಕಳುಹಿಸಿದರು. ಇದು ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಕಾಂಗೊದ ಮೊದಲ ಗೋಲಾಗಿದೆ.
ದ್ವಿತೀಯಾರ್ಧದಲ್ಲಿ ಯಾವುದೇ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯವು 1-1 ಡ್ರಾದಲ್ಲಿ ಮುಕ್ತಾಯಗೊಂಡಿತು.
ಈ ಹಿಂದೆ, 1974ರ ಫುಟ್ಬಾಲ್ ವಿಶ್ವಕಪ್ನಲ್ಲಿ ಆಡಿದ್ದ ಕಾಂಗೊ, ಗುಂಪು ಹಂತದ ಮೂರು ಪಂದ್ಯಗಳಲ್ಲಿ ಯಾವುದೇ ಗೋಲು ಗಳಿಸದೆ ಹಾಗೂ ಯಾವುದೇ ಅಂಕ ಪಡೆಯದೆ ವಾಪಸಾಗಿತ್ತು.
ಮಾನಸಿಕ ಶಕ್ತಿ, ತಂತ್ರಗಾರಿಕೆಯಿಂದ ಸಾಧ್ಯವಾಯಿತು: ಕೋಚ್
ಪೋರ್ಚುಗಲ್ ವಿರುದ್ಧದ ಪಂದ್ಯಕ್ಕೆ ಮೊದಲು ತನ್ನ ತಂಡ ಒತ್ತಡದಲ್ಲಿತ್ತು ಎನ್ನುವುದನ್ನು ಕಾಂಗೊ ಕೋಚ್ ಸೆಬಾಸ್ಟಿಯನ್ ಡೆಸಬರ್ ಒಪ್ಪಿಕೊಂಡರು. ಆದರೆ, ಆರನೇ ನಿಮಿಷದಲ್ಲಿ ಗೋಲೊಂದನ್ನು ಬಿಟ್ಟುಕೊಟ್ಟ ಬಳಿಕ ಪ್ರತಿಹೋರಾಟ ನೀಡಿತು ಎಂದು ಅವರು ಹೇಳಿದರು.
‘‘ಈ ಪಂದ್ಯದ ಫಲಿತಾಂಶವನ್ನು ಸಂಭ್ರಮಿಸುವುದು ಅಗತ್ಯವಾಗಿದೆ. ಇದು ನಮ್ಮ ಮೊದಲ ಅಂಕ ಮತ್ತು ವಿಶ್ವಕಪ್ ಒಂದರಲ್ಲಿ ಮೊದಲ ಗೋಲು. ನನ್ನ ಆಟಗಾರರ ಬಗ್ಗೆ ನನಗೆ ಹೆಮ್ಮೆಯಿದೆ’’ ಎಂದು ಕಾಂಗೊ ಕೋಚ್ ಹೇಳಿದರು.
‘‘ಇದು ಮೊದಲ ಹೆಜ್ಜೆಯಷ್ಟೆ. ಇದಕ್ಕಿಂತ ಮುಂದೆ ಹೋಗುವುದು ಮುಖ್ಯವಾಗಿದೆ. ಆ ಮಾನಸಿಕ ಶಕ್ತಿ ನಮ್ಮಲ್ಲಿದೆ. ಕಷ್ಟದಾಯಕ ಆರಂಭವನ್ನು ನಿಭಾಯಿಸುವುದು ಹೇಗೆ ಎನ್ನುವುದು ನಮಗೆ ಗೊತ್ತಿದೆ’’ ಎಂದು ಅವರು ನುಡಿದರು.
ಕೇವಲ 25 ಬಾರಿ ಚೆಂಡು ಸ್ಪರ್ಶಿಸಿದ ರೊನಾಲ್ಡೊ
ತನ್ನ ಆರನೇ ವಿಶ್ವಕಪ್ನಲ್ಲಿ ಆಡುತ್ತಿರುವ ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ ಕಾಂಗೊ ವಿರುದ್ಧದ ಪಂದ್ಯದುದ್ದಕ್ಕೂ ಚೆಂಡಿನಿಂದ ದೂರವೇ ಉಳಿದಿದ್ದರು. 90 ನಿಮಿಷಗಳ ಅವಧಿಯಲ್ಲಿ, ಅವರಿಗೆ ಕೇವಲ 25 ಬಾರಿ ಚೆಂಡನ್ನು ಸ್ಪರ್ಶಿಸಲು ಸಾಧ್ಯವಾಯಿತು. ಈ ಪೈಕಿ ಕೇವಲ ಐದು ಸ್ಪರ್ಶಗಳು ಎದುರಾಳಿಯ ಪೆನಾಲ್ಟಿ ಪ್ರದೇಶದಲ್ಲಿ ಸಂಭವಿಸಿದವು.
ಅದೂ ಅಲ್ಲದೆ, ಅವರಿಗೆ ಕೇವಲ ಒಂದು ಪಾಸ್ ನೀಡಲು ಸಾಧ್ಯವಾಯಿತು. ಪ್ರಥಮಾರ್ಧದ ವೇಳೆಗೆ, ಅವರಿಗೆ ಕೇವಲ 16 ಬಾರಿ ಚೆಂಡನ್ನು ಸ್ಪರ್ಶಿಸಲು ಸಾಧ್ಯವಾಯಿತು.






