FIFA 2026 | ವಿಜಯದ ಸಂಭ್ರಮಾಚರಣೆಯ ವೇಳೆ ಗಂಭೀರವಾಗಿ ಗಾಯಗೊಂಡ ಇಂಗ್ಲೆಂಡ್ ಆಟಗಾರ ಜೋರ್ಡಾನ್ ಹೆಂಡೆರ್ಸನ್

ಜೋರ್ಡಾನ್ ಹೆಂಡೆರ್ಸನ್ | Photo Credit : X \ @brfootball
ಮೆಕ್ಸಿಕೊ: ಕ್ವಾರ್ಟರ್ ಫೈನಲ್ ನಲ್ಲಿ ಬಲಿಷ್ಠ ಮೆಕ್ಸಿಕೊ ತಂಡವನ್ನು ಇಂಗ್ಲೆಂಡ್ ಮಣಿಸಿದ ಬಳಿಕ ನಡೆದ ವಿಜಯ ಸಂಭ್ರಮಾಚರಣೆಯ ವೇಳೆ ಇಂಗ್ಲೆಂಡ್ ತಂಡದ ಮಿಡ್ ಫೀಲ್ಡರ್ ಜೋರ್ಡಾನ್ ಹೆಂಡೆರ್ಸನ್ ಗಂಭೀರ ಮಣಿಕಟ್ಟು ಗಾಯಕ್ಕೆ ಗುರಿಯಾಗಿರುವ ಘಟನೆ ನಡೆದಿದೆ.
ಮೆಕ್ಸಿಕೊ ತಂಡವನ್ನು 3-2ರ ಅಂತರದಲ್ಲಿ ಇಂಗ್ಲೆಂಡ್ ತಂಡ ಮಣಿಸಿದ ಬಳಿಕ, ಜಾಹೀರಾತು ಫಲಕದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡ ಜೋರ್ಡಾನ್ ಹೆಂಡೆರ್ಸನ್ ಅವರನ್ನು ಸ್ಟ್ರೆಚರ್ ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಅವರು ಈ ಪಂದ್ಯದಲ್ಲಿ ತಂಡದಲ್ಲಿರಲಿಲ್ಲ.
ಈ ಕುರಿತು BBC ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ತಂಡದ ವ್ಯವಸ್ಥಾಪಕ ಥಾಮಸ್ ಟಚೆಲ್, “ಜೋರ್ಡಾನ್ ಹೆಂಡೆರ್ಸನ್ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದು, ಅವರ ಮಣಿಕಟ್ಟು ಗಂಭೀರವಾಗಿ ಗಾಯಗೊಂಡಿರುವಂತೆ ಕಂಡು ಬರುತ್ತಿದೆ” ಎಂದು ತಿಳಿಸಿದ್ದಾರೆ.
“ಅದು ಗಂಭೀರ ಗಾಯವಾಗಿದ್ದು, ಇಂದು ಸಂಜೆ ಜೋರ್ಡಾನ್ ನಮ್ಮೊಂದಿಗೆ ಇಲ್ಲದಿರುವುದು ಸೂಕ್ತವೆನಿಸುತ್ತಿಲ್ಲ. ಅವರೀಗ ಆಸ್ಪತ್ರೆಯಲ್ಲಿದ್ದಾರೆ ಎಂದು ವೈದ್ಯರು ನನಗೆ ತಿಳಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಪಂದ್ಯ ಮುಕ್ತಾಯಗೊಂಡ ಬಳಿಕ, ಇಂಗ್ಲೆಂಡ್ ತಂಡದ ಮುಖ್ಯ ತರಬೇತುದಾರರೂ ಆಗಿರುವ ಥಾಮಸ್ ಟಚೆಲ್ ತಮ್ಮ ತಂಡವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಪಂದ್ಯದ 54ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡದ ಡಿಫೆಂಡರ್ ಜಾರೆಲ್ ಕ್ವಾನ್ಸಾ ರೆಡ್ ಕಾರ್ಡ್ ಪಡೆದಿದ್ದರಿಂದ, ಇಂಗ್ಲೆಂಡ್ ತಂಡದ ಆಟಗಾರರ ಸಂಖ್ಯೆ 10ಕ್ಕೆ ಇಳಿಕೆಯಾಯಿತು. ಹೀಗಿದ್ದೂ ದಣಿವರಿಯದ ಹೋರಾಟ ನಡೆಸಿದ ಇಂಗ್ಲೆಂಡ್ ತಂಡ, ಬಲಿಷ್ಠ ಮೆಕ್ಸಿಕೊ ತಂಡವನ್ನು 3-2ರ ಅಂತರದಲ್ಲಿ ಮಣಿಸಿ, ವಿಜಯದ ನಗೆ ಬೀರಿತು.






