ಫಿಫಾ ವಿಶ್ವಕಪ್: ಮೆಕ್ಸಿಕೋ ಶುಭಾರಂಭಕ್ಕಿಂತ ದೊಡ್ಡ ಸುದ್ದಿ ಮಾಡಿದ ರೆಡ್ಕಾರ್ಡ್ !

Photo: x.com/MirrorUSSports
ಮೆಕ್ಸಿಕೊ ಸಿಟಿ: ಫಿಫಾ-2026 ಟೂರ್ನಿಗೆ ಗುರುವಾರ ನಾಟಕೀಯ ಚಾಲನೆ ದೊರಕಿದ್ದು, ಸಹ ಅತಿಥೇಯ ಮೆಕ್ಸಿಕೊ ತಂಡ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 2-0 ಗೋಲುಗಳಿಂದ ಸೋಲಿಸಿದೆ. ಆದರೆ ಆರಂಭಿಕ ಪಂದ್ಯದಲ್ಲೇ ಮೂವರು ಆಟಗಾರರು ರೆಡ್ಕಾರ್ಡ್ ಪಡೆದಿರುವುದು ಹೊಸ ದಾಖಲೆ ಎನಿಸಿದೆ.
ಫಿಫಾ ವಿಶ್ವಕಪ್-2010ರ ಆರಂಭಿಕ ಪಂದ್ಯದಲ್ಲಿ ಜೋಹಾನ್ಸ್ಬರ್ಗ್ನಲ್ಲಿ 1-1 ಡ್ರಾ ಮಾಡಿಕೊಂಡ ಹದಿನಾರು ವರ್ಷಗಳ ಬಳಿಕ ಎಸ್ಟಾಡಿಯೊ ಅಝೆಟ್ಕಾದಲ್ಲಿ ತವರಿನ ಪ್ರೇಕ್ಷಕರ ಬೆಂಬಲದ ಪ್ರಯೋಜನ ಪಡೆದ ಮೆಕ್ಸಿಕೋ ತಂಡ, ಜ್ಯೂಲಿಯನ್ ಕ್ವಿನೊನೆಸ್ ಹಾಗೂ ರವೂಲ್ ಜಿಮೆನೆಝ್ ಅವರ ಗೋಲುಗಳ ನೆರವಿನೊಂದಿಗೆ ಮೂರು ಪೂರ್ಣ ಅಂಕ ಪಡೆಯಿತು. ಆದರೆ ಆಘಾತಕಾರಿ ಅಂಶವೆಂದರೆ, ಇದೇ ಮೊದಲ ಬಾರಿಗೆ ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಮೂವರು ಆಟಗಾರರು ರೆಡ್ಕಾರ್ಡ್ ಪಡೆದು ತಂಡದಿಂದ ಹೊರನಡೆಯಬೇಕಾಯಿತು.
ಮೆಕ್ಸಿಕೊ ತಂಡ ಟೂರ್ನಿಯಲ್ಲಿ ಪರಿಪೂರ್ಣ ಆರಂಭ ಪಡೆದು, ಒಂಬತ್ತನೇ ನಿಮಿಷದಲ್ಲೇ ಕ್ವಿನೊನೆಸ್ ಅವರ ಗೋಲಿನ ನೆರವಿನಿಂದ ಮುನ್ನಡೆ ಸಾಧಿಸಿತು. ಇದು ಪ್ರಸಕ್ತ ವಿಶ್ವಕಪ್ನ ಪ್ರಥಮ ಗೋಲು ಆಗಿ ದಾಖಲಾಯಿತು. ಈ ಗೋಲಿನ ಬಳಿಕ ಜವೀರ್ ಅಗುರ್ರೆ ನೇತೃತ್ವದ ತಂಡ ಆಟದ ಅವಧಿಯುದ್ದಕ್ಕೂ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತು.
ಅರ್ಧವಿರಾಮಕ್ಕಿಂತ ಸ್ವಲ್ಪ ಮುನ್ನ ಎರಡನೇ ಗೋಲು ಗಳಿಸುವ ಅವಕಾಶದಿಂದ ಕ್ವಿನೊನೆಸ್ ಅಲ್ಪ ಅಂತರದಲ್ಲಿ ವಂಚಿತರಾದರು. ಅವರು ಬಡಿದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿಯಿತು. ದಕ್ಷಿಣ ಆಫ್ರಿಕಾ ತಂಡ ದಾಳಿಯ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಹೆಣಗಾಡಿತು. ದಕ್ಷಿಣ ಆಫ್ರಿಕಾದ ಸಿಫೆಫೆಲೊ ಸಿತ್ಹೋಲ್ ನೇರವಾಗಿ ರೆಡ್ಕಾರ್ಡ್ ಪಡೆದ ಬಳಿಕ ಆಫ್ರಿಕಾದ ಅವಕಾಶ ಮತ್ತಷ್ಟು ಕ್ಷೀಣಿಸಿತು.
ಹಿರಿಯ ಆಟಗಾರ ರವೂಲ್ ಜಿಮೆನೆಝ್ ಅವರ ಗೋಲಿನ ನೆರವಿನಿಂದ ಪಂದ್ಯದ 67ನೇ ನಿಮಿಷದಲ್ಲಿ ಮೆಕ್ಸಿಕೊ ಮುನ್ನಡೆಯನ್ನು 2-0ಗೆ ಏರಿಸಿಕೊಂಡಿತು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾದ ಥೆಂಬಾ ಝ್ವೇನ್ ವಿರುದ್ಧವೂ ರೆಡ್ಕಾರ್ಡ್ ಪ್ರದರ್ಶಿಸಲಾಯಿತು. ಅಂತಿಮವಾಗಿ ಮೆಕ್ಸಿಕೋದ ರಕ್ಷಣಾ ಆಟಗಾರ ಸೀಸರ್ ಮೋಂಟ್ಸ್ ಕೂಡ ದಕ್ಷಿಣ ಆಫ್ರಿಕಾದ ಗೋಲು ತಡೆಯುವ ಪ್ರಯತ್ನದಲ್ಲಿ ರೆಡ್ಕಾರ್ಡ್ ಪಡೆದು ತಂಡ 10 ಆಟಗಾರರೊಂದಿಗೆ ಪಂದ್ಯವನ್ನು ಮುಗಿಸಿತು.






