FIFA World Cup 2026 | ಅಮೆರಿಕಕ್ಕೆ ಆಗಮಿಸಿದ ಇರಾಕ್ ನ ಸ್ಟಾರ್ ಸ್ಟ್ರೈಕರ್ ಐಮನ್ ಹುಸೇನ್ ವಶಕ್ಕೆ; ವಿಮಾನ ನಿಲ್ದಾಣದಲ್ಲಿ 7 ಗಂಟೆಗಳ ಕಾಲ ವಿಚಾರಣೆ

Photo Credit : facebook
ಚಿಕಾಗೊ, ಜೂ. 7: ಫಿಫಾ ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಆಗಮಿಸಿದ ಇರಾಕ್ ನ ಸ್ಟಾರ್ ಸ್ಟ್ರೈಕರ್ ಹಾಗೂ ತಂಡದ ಪ್ರಮುಖ ಆಟಗಾರ ಐಮನ್ ಹುಸೇನ್ ಅವರನ್ನು ಚಿಕಾಗೋದ ಓ'ಹೇರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಏಳು ಗಂಟೆಗಳ ಕಾಲ ವಶದಲ್ಲಿರಿಸಿ ವಿಚಾರಣೆ ನಡೆಸಲಾಗಿದೆ ಎಂದು ಇರಾಕಿ ಕ್ರೀಡಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇರಾಕ್ ತಂಡದ ವಿಶ್ವಕಪ್ ಅರ್ಹತೆಯನ್ನು ಖಚಿತಪಡಿಸಿದ್ದ ಮಹತ್ವದ ಗೋಲು ಗಳಿಸಿದ್ದ ಹುಸೇನ್ ಅವರನ್ನು ಶನಿವಾರ ಮುಂಜಾನೆ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿತ್ತು. ಬಳಿಕ ಅವರಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ ನೀಡಲಾಯಿತು.
ಆದರೆ, ರಾಷ್ಟ್ರೀಯ ಫುಟ್ಬಾಲ್ ತಂಡದ ಫೊಟೋಗ್ರಾಫರ್ ತಲಾಲ್ ಸಲಾಹ್ ಅವರನ್ನು 10 ಗಂಟೆಗಳಿಗೂ ಹೆಚ್ಚು ಕಾಲ ವಶದಲ್ಲಿರಿಸಿ ವಿಚಾರಣೆ ನಡೆಸಿದ ನಂತರ ಅಮೆರಿಕ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾಕಿ ಒಲಿಂಪಿಕ್ ಸಮಿತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಹಾಗೂ ರಾಷ್ಟ್ರೀಯ ಫುಟ್ಬಾಲ್ ತಂಡದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅಧಿಕಾರಿಯೊಬ್ಬರ ಪ್ರಕಾರ, ಸುದೀರ್ಘ ಪ್ರಶ್ನೋತ್ತರ ಪ್ರಕ್ರಿಯೆಯ ವೇಳೆ ಹುಸೇನ್ ಅವರ ಮೊಬೈಲ್ ಫೋನ್ ಪರಿಶೀಲಿಸಲಾಗಿದೆ. ತಲಾಲ್ ಸಲಾಹ್ ಅವರ ಫೋನ್ ನನ್ನೂ ಇದೇ ರೀತಿಯಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ಬಳಿಕ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ.
ಈ ಕುರಿತು ಇರಾಕಿ ಫುಟ್ಬಾಲ್ ಸಂಘವು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ (ECI) ಹಾಗೂ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ಜಂಟಿಯಾಗಿ ಆಯೋಜಿಸುತ್ತಿರುವ ಫಿಫಾ ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಶನಿವಾರ ಬೆಳಗಿನ ಜಾವ ರಾಷ್ಟ್ರೀಯ ತಂಡವನ್ನು ಸ್ವಾಗತಿಸಲು ಚಿಕಾಗೊ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಇರಾಕಿ ಅಭಿಮಾನಿಗಳು ಧ್ವಜಗಳನ್ನು ಬೀಸುತ್ತಾ ಆಟಗಾರರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನಾಲ್ಕು ದಶಕಗಳ ಬಳಿಕ ಇರಾಕ್ ವಿಶ್ವಕಪ್ ನಲ್ಲಿ ಆಡಲಿದ್ದು, 30 ವರ್ಷದ ಐಮನ್ ಹುಸೇನ್ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅವರೊಂದಿಗೆ ಇಪ್ಸ್ವಿಚ್ ಟೌನ್ ಫಾರ್ವರ್ಡ್ ಅಲಿ ಅಲ್–ಹಮದಿ ಹಾಗೂ ಯುವ ಆಟಗಾರರಾದ ಅಲಿ ಜಾಸಿಮ್ ಮತ್ತು ಯೂಸೆಫ್ ಅಮಿನ್ ತಂಡವನ್ನು ಮುನ್ನಡೆಸಲಿದ್ದಾರೆ.
ಗುಂಪು ‘ಐ’ನಲ್ಲಿ ಸ್ಥಾನ ಪಡೆದಿರುವ ಇರಾಕ್ ತಂಡವು ಫ್ರಾನ್ಸ್, ಸೆನೆಗಲ್ ಹಾಗೂ ನಾರ್ವೆ ತಂಡಗಳ ಸವಾಲು ಎದುರಿಸಲಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಇತ್ತೀಚಿನ ವಾರಗಳಲ್ಲಿ ಇರಾನ್ ನ ಪರಮಾಣು ಕಾರ್ಯಕ್ರಮ ಹಾಗೂ ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವ ಉದ್ದೇಶದ ರಾಜತಾಂತ್ರಿಕ ಪ್ರಯತ್ನಗಳ ನಡುವೆಯೂ ಅಮೆರಿಕ ಮತ್ತು ಇರಾನ್ ಪರಸ್ಪರ ಮಿಲಿಟರಿ ದಾಳಿಗಳನ್ನು ನಡೆಸಿವೆ.
ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳನ್ನು ಎದುರಾಳಿ ದುರ್ಬಲಗೊಳಿಸುತ್ತಿದೆ ಎಂದು ಎರಡೂ ರಾಷ್ಟ್ರಗಳು ಪರಸ್ಪರ ಆರೋಪಿಸಿವೆ. ಹಲವು ಸುತ್ತಿನ ಮಾತುಕತೆಗಳು ಸ್ಥಗಿತಗೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಇರಾನಿನ ಡ್ರೋನ್ ಗಳು, ಕ್ಷಿಪಣಿ ದಾಳಿ ಹಾಗೂ ಇರಾನಿನ ಮಿಲಿಟರಿ ಮೂಲಸೌಕರ್ಯಗಳ ಮೇಲೆ ಅಮೆರಿಕ ನಡೆಸಿದ ದಾಳಿಗಳಂತಹ ಬೆಳವಣಿಗೆಗಳು ವರದಿಯಾಗಿವೆ.






