ಮತ್ತೊಂದು ವಿವಾದಕ್ಕೆ ಸಾಕ್ಷಿಯಾದ ಫಿಫಾ ವಿಶ್ವಕಪ್: ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಆಟಗಾರರ ಪಾಸ್ಪೋರ್ಟ್ ಮಾಹಿತಿ ಸೋರಿಕೆ

Photo: x.com/SportExpressen
ಬ್ಯೂನಸ್ ಐರಿಸ್/ಅಲಬಾಮಾ : ಖ್ಯಾತ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಹಾಗೂ ಅವರ ಅರ್ಜೆಂಟೀನಾ ಸಹ ಆಟಗಾರರ ಪಾಸ್ಪೋರ್ಟ್ ಮಾಹಿತಿಗಳು ಸೋರಿಕೆಯಾಗಿದ್ದು, ಇದರೊಂದಿಗೆ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಭದ್ರತಾ ಪ್ರಮಾದದಿಂದಾಗಿ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ತಂಡದ ಎಲ್ಲ ಆಟಗಾರರ ಪಾಸ್ಪೋರ್ಟ್ ಮಾಹಿತಿಗಳು ಮಂಗಳವಾರ ಐಸ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಸೋರಿಕೆಯಾಗಿವೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಪಾಸ್ಪೋರ್ಟ್ ಸಂಖ್ಯೆಯನ್ನು ಅಧಿಕೃತ ಟೀಮ್ಶೀಟ್ನಲ್ಲಿ ಪಟ್ಟಿ ಮಾಡಲಾಗಿದ್ದು, ಮಾಧ್ಯಮಕ್ಕೆ ಮತ್ತು ಸಾರ್ವಜನಿಕರಿಗೆ ಅದನ್ನು ಬಿಡುಗಡೆ ಮಾಡುವ ಮುನ್ನ ಅದನ್ನು ಮಬ್ಬುಗೊಳಿಸಬೇಕಿತ್ತು. ಆದರೆ ಅಲಬಾಮಾದ ಜೋರ್ಡನ್-ಹೇರ್ ಸ್ಟೇಡಿಯಂನಲ್ಲಿ ಈ ಸಂಖ್ಯೆಗಳನ್ನು ಮರೆಮಾಚದೇ ಪ್ರಕಟಿಸಲಾಗಿತ್ತು.
ಆದರೆ, ಐಸ್ಲೆಂಡ್ ಆಟಗಾರರು ಟೀಮ್ಶೀಟ್ಗೆ ತಮ್ಮ ಪಾಸ್ಪೋರ್ಟ್ ಸಂಖ್ಯೆಗಳನ್ನು ಸಲ್ಲಿಸಿರಲಿಲ್ಲ. ರಾಯ್ಟರ್ಸ್ ಈ ಸಂಬಂಧ ಅರ್ಜೆಂಟೀನಾ ಫುಟ್ಬಾಲ್ ಫೆಡರೇಷನ್ ಮತ್ತು ಫಿಫಾದ ಅಭಿಪ್ರಾಯವನ್ನು ಕೋರಿದೆ.
ಇದಕ್ಕೂ ಮುನ್ನ ಅಮೆರಿಕದ ವಿಮಾನ ನಿಲ್ದಾಣದಲ್ಲಿ ಸೆನೆಗಲ್ ಆಟಗಾರರಿಗೆ ತೀವ್ರ ಭದ್ರತಾ ತಪಾಸಣೆಗಳನ್ನು ನಡೆಸಿದ ಬಗೆಗಿನ ವಿಡಿಯೊ ವಿವಾದಕ್ಕೆ ಕಾರಣವಾಗಿತ್ತು. ಸ್ಯಾಡಿಯೊ ಮಾನೆ ಮತ್ತು ಕಲಿಡು ಕುಲಿಬಲಿಯಂಥ ದಿಗ್ಗಜರನ್ನು ಹೊಂದಿದ್ದ ತಂಡದ ಆಟಗಾರರನ್ನು ತೀವ್ರ ತಪಾಸಣೆಗೆ ಗುರಿಪಡಿಸಲಾಗಿದೆ ಎಂಬ ವಿಡಿಯೊ ವಿವಾದಕ್ಕೆ ಕಾರಣವಾಗಿತ್ತು. ಸ್ಪೇನ್ನಂಥ ತಂಡಗಳಿಗೆ ಇಂತಹ ತಪಾಸಣೆ ಮಾಡಿರಲಿಲ್ಲ ಎಂದು ಜಾಲತಾಣ ಬಳಕೆದಾರರು ಆಕ್ಷೇಪಿಸಿದ್ದರು.






