ಐದನೇ ಆ್ಯಶಸ್ ಟೆಸ್ಟ್: ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ ಶತಕ

ಸ್ಟೀವನ್ ಸ್ಮಿತ್ | Photo Credit : PTI
ಸಿಡ್ನಿ, ಜ.6: ‘ರನ್ ಯಂತ್ರ’ ಟ್ರಾವಿಸ್ ಹೆಡ್(163 ರನ್, 166 ಎಸೆತ, 24 ಬೌಂಡರಿ, 1 ಸಿಕ್ಸರ್)ಹಾಗೂ ನಾಯಕ ಸ್ಟೀವನ್ ಸ್ಮಿತ್(ಔಟಾಗದೆ 129 ರನ್, 205 ಎಸೆತಮ 15 ಬೌಂಡರಿ, 1 ಸಿಕ್ಸರ್)ಆಕರ್ಷಕ ಶತಕದ ಸಹಾಯದಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 134 ರನ್ ಮುನ್ನಡೆಯಲ್ಲಿರುವ ಆಸ್ಟ್ರೇಲಿಯ ತಂಡವು ಬಿಗಿ ಹಿಡಿತ ಸಾಧಿಸಿದೆ.
ಪರ್ತ್ ನಲ್ಲಿ 123 ಹಾಗೂ ಅಡಿಲೇಡ್ ನಲ್ಲಿ 170 ರನ್ ಗಳಿಸಿದ್ದ ಹೆಡ್ ಅವರು ಸರಣಿಯಲ್ಲಿ ಇಂದು ಮೂರನೇ ಶತಕ ಗಳಿಸಿ ಅಗ್ರ ಸರದಿಯಲ್ಲಿ ತನ್ನ ಭರ್ಜರಿ ಫಾರ್ಮ್ ಮುಂದುವರಿಸಿದರು. ಇದೇ ವೇಳೆ ಸ್ಮಿತ್ ಅವರು ಸರಣಿಯಲ್ಲಿ ತನ್ನ ಮೊದಲ ಶತಕವನ್ನು ದಾಖಲಿಸುವ ಮೂಲಕ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಮೊತ್ತ 384ಕ್ಕೆ ಉತ್ತರವಾಗಿ ಮಂಗಳವಾರ ಮೂರನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡವು 7 ವಿಕೆಟ್ ಗಳ ನಷ್ಟಕ್ಕೆ 518 ರನ್ ಗಳಿಸುವಲ್ಲಿ ನೆರವಾದರು.
ಬ್ಯೂ ವೆಬ್ಸ್ಟರ್ ಔಟಾಗದೆ 58 ಎಸೆತಗಳಲ್ಲಿ 42 ರನ್ ಗಳಿಸಿ ಸ್ಮಿತ್ ಗೆ ಸಾಥ್ ನೀಡುತ್ತಿದ್ದಾರೆ.
ಕೇವಲ 105 ಎಸೆತಗಳಲ್ಲಿ ಶತಕವನ್ನು ಪೂರೈಸಿರುವ ಹೆಡ್ ಅವರು ದ್ವಿಶತಕದತ್ತ ಮುಖ ಮಾಡಿದ್ದರು. ಆದರೆ ಭೋಜನ ವಿರಾಮದ ನಂತರದ ಮೂರನೇ ಓವರ್ನಲ್ಲಿ ಪಾರ್ಟ್ ಟೈಮ್ ಸ್ಪಿನ್ನರ್ ಜೇಕಬ್ ಬೆಥೆಲ್ಗೆ ವಿಕೆಟ್ ಒಪ್ಪಿಸಿದರು. ಬೆಥೆಲ್ ಸರಣಿಯಲ್ಲಿ ಮೊದಲ ಬಾರಿ ಬೌಲಿಂಗ್ ಮಾಡಿದ್ದು, 32ರ ಹರೆಯದ ಹೆಡ್ ಅವರು ಸ್ವೀಪ್ಗೆ ಯತ್ನಿಸುತ್ತಿದ್ದಾಗ ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿ ಅಮೋಘ ಇನಿಂಗ್ಸ್ಗೆ ತೆರೆ ಎಳೆದರು.
ಸ್ಮಿತ್ ಅವರು ಬೆಥೆಲ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸುವುದರೊಂದಿಗೆ ತನ್ನ 37ನೇ ಟೆಸ್ಟ್ ಶತಕ ಪೂರೈಸಿದರು. ಆ್ಯಶಸ್ ಸರಣಿಯಲ್ಲಿ 13ನೇ ಶತಕವನ್ನು ಗಳಿಸುವುದರೊಂದಿಗೆ ಇಂಗ್ಲೆಂಡ್ ಲೆಜೆಂಡ್ ಜೇಕ್ ಹೊಬ್ಸ್ ದಾಖಲೆಯನ್ನು ಮುರಿದರು. ಆ್ಯಶಸ್ ಸರಣಿಯಲ್ಲಿ ಬ್ರಾಡ್ಮನ್ ಮಾತ್ರ ಗರಿಷ್ಠ ಶತಕಗಳನ್ನು(19)ಸಿಡಿಸಿದ್ದಾರೆ.
ತನ್ನ 88ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ಹಿರಿಯ ಆಟಗಾರ ಉಸ್ಮಾನ್ ಖ್ವಾಜಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 17 ರನ್ ಗಳಿಸಿ ಬ್ರೆಂಡನ್ ಕಾರ್ಸ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಜೋಶ್ ಟೊಂಗ್ಗೆ ವಿಕೆಟ್ ಒಪ್ಪಿಸುವ ಮೊದಲು ಅಲೆಕ್ಸ್ ಕ್ಯಾರಿ 16 ರನ್ ಗಳಿಸಿದರು. ನೈಟ್ ವಾಚ್ಮ್ಯಾನ್ ಮೈಕಲ್ ನೆಸೆರ್ 24 ರನ್ ಹಾಗೂ ಕ್ಯಾಮರೂನ್ ಗ್ರೀನ್ 37 ರನ್ ಕೊಡುಗೆ ನೀಡಿದರು.
ಜೇಕ್ ವೆದರಾಲ್ಡ್(21 ರನ್)ಹಾಗೂ ಮಾರ್ನಸ್ ಲ್ಯಾಬುಶೇನ್(48 ರನ್)ಸೋಮವಾರವೇ ಔಟಾಗಿದ್ದು, ಹೆಡ್ 91 ರನ್ನೊಂದಿಗೆ ನೆಸೆರ್ ಜೊತೆಗೆ 2 ವಿಕೆಟ್ ಗಳ ನಷ್ಟಕ್ಕೆ 166 ರನ್ನಿಂದ ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮುಂದುವರಿಸಿದರು. ತಕ್ಷಣವೇ ಫಾರ್ಮ್ ಕಂಡುಕೊಂಡಿರುವ ಹೆಡ್ ಅವರು ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿ ಮೂರಂಕೆ ತಲುಪಿದರು.
ಇದು ಹೆಡ್ ಗಳಿಸಿದ 12ನೇ ಟೆಸ್ಟ್ ಶತಕ ಹಾಗೂ ಸಿಡ್ನಿಯಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದರು. ಖ್ವಾಜಾ ಬೆನ್ನುನೋವಿಗೆ ಒಳಗಾದ ಹಿನ್ನೆಲೆಯಲ್ಲಿ ಪರ್ತ್ ಟೆಸ್ಟ್ನಲ್ಲಿ ಅಗ್ರ ಸರದಿಯಲ್ಲಿ ಭಡ್ತಿ ಪಡೆದಿದ್ದ ಹೆಡ್ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
ಶತಕವನ್ನು ಪೂರೈಸಿದ ನಂತರ ಮ್ಯಾಥ್ಯೂ ಪಾಟ್ಸ್ ಬೌಲಿಂಗ್ ನಲ್ಲಿ ಸತತ ಮೂರು ಬೌಂಡರಿಗಳನ್ನು ಸಿಡಿಸಿರುವ ಹೆಡ್ ಅವರು 121 ರನ್ ಗಳಿಸಿದ್ದಾಗ ಜೀವದಾನ ಪಡೆದರು. ಕಾರ್ಸ್ ಬೌಲಿಂಗ್ ನಲ್ಲಿ ಹೆಡ್ ನೀಡಿದ ಸಿಂಪಲ್ ಕ್ಯಾಚ್ ಅನ್ನು ಜಾಕ್ಸ್ ಕೈಚೆಲ್ಲಿದರು.
90 ಎಸೆತಗಳನ್ನು ಎದುರಿಸಿ ಇಂಗ್ಲೆಂಡ್ ಬೌಲರ್ ಗಳನ್ನು ಹತಾಶೆಗೊಳಿಸಿದ ನೆಸೆರ್, ಸ್ಪೆಷಲಿಸ್ಟ್ ಅಗ್ರ ಸರದಿಯ ಆಟಗಾರನಂತೆ ಬ್ಯಾಟಿಂಗ್ ಮಾಡಿದರು. ಕಾರ್ಸ್ ಎಸೆತದಲ್ಲಿ ವಿಕೆಟ್ಕೀಪರ್ ಸ್ಮಿತ್ ಗೆ ಕ್ಯಾಚ್ ನೀಡುವ ಮೊದಲು ನಾಲ್ಕು ಬೌಂಡರಿಗಳನ್ನು ಸಿಡಿಸಿದ್ದರು.
ಸ್ಮಿತ್ 12 ರನ್ ಗಳಿಸಿದ್ದಾಗ ಝ್ಯಾಕ್ ಕ್ರಾಲಿ ಅವರಿಂದ ಜೀವದಾನ ಪಡೆದರು. ಸ್ಮಿತ್ ಲಂಚ್ ವಿರಾಮದ ವೇಳೆ 50 ರನ್ ಗಳಿಸಿದರು.
ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಸದ್ಯ ಒತ್ತಡವನ್ನು ಎದುರಿಸುತ್ತಿದ್ದು, ಅಮೋಘ ಕವರ್ಡ್ರೈವ್ ಹಾಗೂ ಸಿಕ್ಸರ್ ಮೂಲಕ ಗಮನ ಸೆಳೆದರು. ಕಾರ್ಸ್ ಎಸೆತವನ್ನು ಕೆಣಕಲು ಹೋದ ಗ್ರೀನ್ ಅವರು 64 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 37 ರನ್ ಗಳಿಸಿ ಬೆನ್ ಡಕೆಟ್ಗೆ ವಿಕೆಟ್ ಒಪ್ಪಿಸಿದರು.
ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಬ್ರೆಂಡನ್ ಕಾರ್ಸ್(3-108)ಹಾಗೂ ಬೆನ್ ಸ್ಟೋಕ್ಸ್(2-87)ಐದು ವಿಕೆಟ್ ಗಳನ್ನು ಹಂಚಿಕೊಂಡರು.
►ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನಿಂಗ್ಸ್: 384 ರನ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್:518/7
(ಟ್ರಾವಿಸ್ ಹೆಡ್ 163, ಸ್ಟೀವನ್ ಸ್ಮಿತ್ ಔಟಾಗದೆ 129, ಲ್ಯಾಬುಶೇನ್ 48, ಬ್ಯೂ ವೆಬ್ಸ್ಟರ್ ಔಟಾಗದೆ 42, ಕ್ಯಾಮರೂನ್ ಗ್ರೀನ್ 37, ಬ್ರೆಂಡನ್ ಕಾರ್ಸ್ 3-108, ಬೆನ್ ಸ್ಟೋಕ್ಸ್ 2-87, ಬೆಥೆಲ್ 1-50)







