ಎಫ್ಐಎಚ್ ಹಾಕಿ ಮಹಿಳೆಯರ ಜೂನಿಯರ್ ವಿಶ್ವಕಪ್; ಜರ್ಮನಿ ವಿರುದ್ಧ ಭಾರತಕ್ಕೆ ಸೋಲು

PHOTO: Hockey India
ಸಾಂಟಿಯಾಗೊ (ಚಿಲಿ): ಚಿಲಿ ದೇಶದ ಸಾಂಟಿಯಾಗೊ ನಗರದಲ್ಲಿ ನಡೆಯುತ್ತಿರುವ ಎಫ್ಐಎಚ್ ಹಾಕಿ ಮಹಿಳೆಯರ ಜೂನಿಯರ್ ವಿಶ್ವಕಪ್ನಲ್ಲಿ ಶುಕ್ರವಾರ ಜರ್ಮನಿಯು ಭಾರತವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿದೆ.
ಭಾರತೀಯ ಮಹಿಳೆಯರು ಪಂದ್ಯಾವಳಿಯ ತಮ್ಮ ಎರಡನೇ ಪಂದ್ಯದಲ್ಲಿ ಧೀರೋದಾತ್ತ ಪ್ರದರ್ಶನ ನೀಡಿದರಾದರೂ, ಕಳೆದ ಬಾರಿಯ ರನ್ನರ್ಸ್-ಅಪ್ ಜರ್ಮನಿಯು ಅಂತಿಮ ಕ್ಷಣಗಳಲ್ಲಿ ತೀವ್ರ ಪ್ರತಿಹೋರಾಟ ನೀಡಿ ಪಂದ್ಯವನ್ನು ಜಯಿಸಿತು.
ಭಾರತದ ಪರವಾಗಿ ಅನು 11ನೇ ನಿಮಿಷದಲ್ಲಿ, ರೋಪ್ನಿ ಕುಮಾರಿ 14ನೇ ನಿಮಿಷದಲ್ಲಿ ಮತ್ತು ಮಮ್ತಾಝ್ ಖಾನ್ 24ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.
ಜರ್ಮನಿಯ ಪರವಾಗಿ ಸೋಫಿಯಾ ಶ್ವಾಬ್ 17ನೇ ನಿಮಿಷದಲ್ಲಿ, ಲೋರಾ ಪ್ಲತ್ 21 ಮತ್ತು 36ನೇ ನಿಮಿಷಗಳಲ್ಲಿ ಮತ್ತು ಕ್ಯಾರಲಿನ್ ಸೈಡಲ್ 38ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.
ಆರಂಭಿಕ ಕ್ವಾರ್ಟರ್ನಲ್ಲಿ ಭಾರತೀಯ ಆಟಗಾರರು ಎದುರಾಳಿಯ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು. ಚೆಂಡನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಜರ್ಮನಿಯ ರಕ್ಷಣಾ ವಿಭಾಗವನ್ನು ಸಾಕಷ್ಟು ಪರೀಕ್ಷೆಗೊಳಪಡಿಸಿದರು. ಈ ಕ್ವಾರ್ಟರ್ನಲ್ಲಿ ಭಾರತ ಎರಡು ಗೋಲುಗಳನ್ನು ಬಾರಿಸಿತು.
ಆದರೆ, ಎರಡನೇ ಕ್ವಾರ್ಟರ್ನಲ್ಲಿ ಭಾರತಕ್ಕೆ ಕೊಂಚ ಹಿನ್ನಡೆಯಾಯಿತು. ಜರ್ಮನಿ ಎರಡು ಗೋಲುಗಳನ್ನು ಗಳಿಸಿದರೆ ಭಾರತಕ್ಕೆ ಒಂದೇ ಗೋಲು ಲಭಿಸಿತು. ಆದರೂ, ಭಾರತವೇ 3-2ರಿಂದ ಮುಂದಿತ್ತು.
ಆದರೆ ಮೂರನೇ ಕ್ವಾರ್ಟರ್ನಲ್ಲಿ ಜರ್ಮನಿ ವಿಜೃಂಭಿಸಿತು. 36ನೇ ನಿಮಿಷದಲ್ಲಿ ಲಾರಾ ಪ್ಲತ್ ಬಾರಿಸಿದ ಗೋಲಿನೊಂದಿಗೆ ಜರ್ಮನಿಯು ಗೋಲು ಪಟ್ಟಿಯನ್ನು ಸಮಬಲಗೊಳಿಸಿತು. ಮಾತ್ರವಲ್ಲ, 38ನೇ ನಿಮಿಷದಲ್ಲಿ ಕ್ಯಾರಲಿನ್ ಸೈಡಲ್ ಪೆನಾಲ್ಟಿ ಕಾರ್ನರ್ ಗೋಲು ಜರ್ಮನಿಗೆ 4-3ರ ಮುನ್ನಡೆಯನ್ನು ಒದಗಿಸಿತು.
ಇದೇ ಮುನ್ನಡೆಯನ್ನು ಕೊನೆಯವರೆಗೂ ಕಾದುಕೊಂಡು ಬರುವಲ್ಲಿ ಜರ್ಮನಿಯು ಯಶಸ್ವಿಯಾಯಿತು.







