ಎಫ್ಐಎಚ್ ಜೂನಿಯರ್ ಹಾಕಿ ವಿಶ್ವಕಪ್ | ಅರ್ಜೆಂಟೀನವನ್ನು ಸೋಲಿಸಿದ ಭಾರತಕ್ಕೆ ಕಂಚು

Photo Credit : PTI
ಚೆನ್ನೈ, ಡಿ. 10: ಚೆನ್ನೈಯಲ್ಲಿ ಮಂಗಳವಾರ ನಡೆದ ಎಫ್ಐಎಚ್ ಜೂನಿಯರ್ ಹಾಕಿ ವಿಶ್ವಕಪ್ನ ಮೂರನೇ ಸ್ಥಾನ ನಿರ್ಧರಿಸುವ ಪ್ಲೇಆಫ್ ಪಂದ್ಯದಲ್ಲಿ ಭಾರತ ತಂಡವು ಅರ್ಜೆಂಟೀನವನ್ನು 4-2 ಗೋಲುಗಳಿಂದ ಸೋಲಿಸಿದೆ. ಆರಂಭದಲ್ಲಿ ಎರಡು ಗೋಲುಗಳಿಂದ ಹಿಂದಿದ್ದ ಭಾರತ ಬಳಿಕ ಅಮೋಘ ಪ್ರತಿಹೋರಾಟ ನೀಡಿ ವಿಜಯವನ್ನು ತನ್ನದಾಗಿಸಿತು.
ಅರ್ಜೆಂಟೀನ ಮೊದಲ ಕ್ವಾರ್ಟರ್ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ತನ್ನ ಖಾತೆ ಆರಂಭಿಸಿತು. ಈ ಪೆನಾಲ್ಟಿ ಕಾರ್ನರನ್ನು ನಿಕೊಲಸ್ ರೋಡ್ರಿಗ್ಸ್ ಗೋಲಾಗಿ ಪರಿವರ್ತಿಸಿದರು.
ಮೂರನೇ ಕ್ವಾರ್ಟರ್ ನಲ್ಲಿ ಸಾಂಟಿಯಾಗೊ ಫೆರ್ನಾಂಡಿಸ್ ಶಾರ್ಟ್ ಕಾರ್ನರ್ನಿಂದ ಗೋಲು ಬಾರಿಸಿದರು. ಅದರೊಂದಿಗೆ ಅರ್ಜೆಂಟೀನ ತನ್ನ ಅಂಕವನ್ನು 2-0ಗೆ ಹೆಚ್ಚಿಸಿತು.
ಆದರೆ, ಅಂತಿಮ ಕ್ವಾರ್ಟರ್ ನಲ್ಲಿ ಭಾರತವು ಪೆನಾಲ್ಟಿ ಕಾರ್ನರ್ಗಳ ಮೂಲಕ ಎರಡು ಗೋಲುಗಳನ್ನು ದಾಖಲಿಸಿತು. ಆ ಗೋಲುಗಳನ್ನು ಅನ್ಮೋಲ್ ಮತ್ತು ಮನ್ಮೀತ್ ಸಿಂಗ್ ಬಾರಿಸಿದರು. ಬಳಿಕ, 56ನೇ ನಿಮಿಷದಲ್ಲಿ ಭಾರತದ ಶಾರ್ದ ನಂದ ತಿವಾರಿ ಗೋಲು ಬಾರಿಸಿದರು. ಇದರೊಂದಿಗೆ ಭಾರತ 3-2ರ ಮುನ್ನಡೆಯನ್ನು ಗಳಿಸಿತು.
ಪಂದ್ಯದ ಅಂತಿಮ ಕ್ಷಣಗಳಲ್ಲಿ, ಗೋಲು ಗಳಿಸಬೇಕೆನ್ನುವ ಧಾವಂತದಲ್ಲಿ ಅರ್ಜೆಂಟೀನವು ಗೋಲುಕೀಪರ್ರನ್ನೂ ಸಕ್ರಿಯ ಆಟಕ್ಕೆ ತೊಡಗಿಸಿತು. ಆಗ ಭಾರತಕ್ಕೆ ಇನ್ನೊಂದು ಪೆನಾಲ್ಟಿ ಕಾರ್ನರ್ ಲಭಿಸಿತು. ಪಂದ್ಯ ಮುಗಿಯಲು ಎರಡು ನಿಮಿಷಗಳು ಬಾಕಿ ಇರುವಾಗ ಗೋಲುಕೀಪರ್ ಇಲ್ಲದ ಗೋಲು ಪೆಟ್ಟಿಗೆಗೆ ಚೆಂಡನ್ನು ತಳ್ಳಿದ ಅನ್ಮೋಲ್ ಭಾರತದ ವಿಜಯದ ಅಂತರವನ್ನು 4-2ಕ್ಕೆ ಏರಿಸಿದರು.
ಭಾರತವು ಕಂಚಿನ ಪದಕ ಪಡೆಯಿತು.







