ಎಫ್ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್: ಕೊರಿಯವನ್ನು 4-2ರಿಂದ ಸೋಲಿಸಿದ ಭಾರತ

Photo: KhelNow.com
ಕೌಲಾಲಂಪುರ (ಮಲೇಶ್ಯ): ಎಫ್ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ನ ತನ್ನ ಆರಂಭಿಕ ಪಂದ್ಯದಲ್ಲಿ ಮಂಗಳವಾರ ಭಾರತವು ಅರೈಜೀತ್ ಸಿಂಗ್ ಹುಂಡಲ್ರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ದಕ್ಷಿಣ ಕೊರಿಯವನ್ನು 4-2 ಗೋಲುಗಳಿಂದ ಸೋಲಿಸಿದೆ.
‘ಸಿ’ ಗುಂಪಿನ ಪಂದ್ಯದಲ್ಲಿ, ಭಾರತದ ಪರವಾಗಿ ಹುಂಡಲ್ 11, 16 ಮತ್ತು 41ನೇ ನಿಮಿಷಗಳಲ್ಲಿ ಗೋಲುಗಳನ್ನು ಬಾರಿಸಿದರೆ, ಅಮನ್ದೀಪ್ 30ನೇ ನಿಮಿಷದಲ್ಲಿ ಗೋಲು ಗಳಿಸಿದರು.
ದಕ್ಷಿಣ ಕೊರಿಯದ ಪರವಾಗಿ ಡೊಹ್ಯುನ್ ಲಿಮ್ 38ನೇ ನಿಮಿಷದಲ್ಲಿ ಮತ್ತು ಮಿನ್ಕ್ವೋನ್ ಕಿಮ್ 45ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.
ಭುವನೇಶ್ವರದಲ್ಲಿ ನಡೆದ 2021ರ ಆವೃತ್ತಿಯಲ್ಲಿ, ಭಾರತವು ಕಂಚಿನ ಪದಕದ ಸ್ಪರ್ಧೆಯಲ್ಲಿ ಫ್ರಾನ್ಸ್ ವಿರುದ್ಧ ಸೋಲನುಭವಿಸಿತ್ತು.
ಮಂಗಳವಾರ, ಭಾರತವು ಪ್ರಬಲ ಆರಂಭವನ್ನೇ ಮಾಡಿತು. ಮೊದಲ ಕ್ವಾರ್ಟರ್ನಲ್ಲೇ ಹುಂಡಲ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು.
ಎರಡನೇ ಕ್ವಾರ್ಟರ್ನಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಭಾರತೀಯರು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದರು. ಎರಡನೇ ಕ್ವಾರ್ಟರ್ನ ಮೊದಲ ಗೋಲನ್ನು ಹುಂಡಲ್ ಬಾರಿಸಿದರೆ, ಎರಡನೇ ಗೋಲನ್ನು ಅಮನ್ದೀಪ್ ಗಳಿಸಿದರು. ಅವರೆಡೂ ಫೀಲ್ಡ್ ಗೋಲುಗಳು. ಅರ್ಧ ವಿರಾಮದ ವೇಳೆಗೆ, ಭಾರತವು 3-0 ಅಂತರದಿಂದ ಮುಂದಿತ್ತು.
ಮೂರನೇ ಕ್ವಾರ್ಟರ್ನಲ್ಲಿ, ದಕ್ಷಿಣ ಕೊರಿಯವು ಡೊಹ್ಯುನ್ ಮೂಲಕ ಗೋಲು ಗಳಿಸಿತು. ಆದರೆ ಸ್ವಲ್ಪವೇ ಹೊತ್ತಿನಲ್ಲಿ ಭಾರತದ ಪರವಾಗಿ ಹುಂಡಲ್ ಇನ್ನೊಂದು ಗೋಲು ದಾಖಲಿಸಿದರು. ಆ ಮೂಲಕ ಅವರು ಹ್ಯಾಟ್ರಿಕ್ ಸಂಪೂರ್ಣಗೊಳಿಸಿದರು.
ಅದರೊಂದಿಗೆ ಭಾರತವು 4-1ರಿಂದ ಮುಂದಕ್ಕೆ ಹೋಯಿತು. ಆಗ ಭಾರತ ಸ್ವಲ್ಪ ನಿಧಾನಿಸಿದಂತೆ ಕಂಡುಬಂತು. ಆದರೆ, ಕೊರಿಯನ್ನರು ಗೋಲುಗಳಿಗಾಗಿ ಹೋರಾಟವನ್ನು ತೀವ್ರಗೊಳಿಸಿದರು. ಅದರಲ್ಲಿ ಯಶಸ್ವಿಯೂ ಆದರು. ಮಿನ್ಕ್ವೊನ್ 45ನೇ ನಿಮಿಷದಲ್ಲಿ ಬಾರಿಸಿದ ಚೆಂಡು ಗುರಿಯನ್ನು ತಲುಪಿತು. ಅಂಕ 4-2 ಆಯಿತು.
ನಾಲ್ಕನೇ ಕ್ವಾರ್ಟರ್ನಲ್ಲಿ ಇದೇ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಉಭಯ ತಂಡಗಳು ಯಶಸ್ವಿಯಾದವು.
ಭಾರತ ತನ್ನ ಗುಂಪಿನ ಎರಡನೇ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ನಾಲ್ಕು ತಂಡಗಳ ಸಿ ಗುಂಪಿನಲ್ಲಿ ಇರುವ ಇನ್ನೊಂದು ದೇಶ ಕೆನಡ.
ಭಾರತವು ಈವರೆಗೆ ಎರಡು ಬಾರಿ- 2001 ಮತ್ತು 2016ರಲ್ಲಿ - ಪ್ರಶಸ್ತಿ ಗೆದ್ದಿದೆ. ಒಮ್ಮೆ-1997ರಲ್ಲಿ- ಅದು ರನ್ನರ್ಸ್ ಅಪ್ ಆಗಿದೆ.







