ಪುರುಷರ ಹಾಕಿ ವಿಶ್ವಕಪ್ | ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

Photo Credit : Hockey India
ಹೊಸದಿಲ್ಲಿ, ಆ.17: ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡದ ವಿರುದ್ಧ 2-4 ಗೋಲುಗಳ ಅಂತರದಿಂದ ಸೋಲನುಭವಿಸಿದೆ. ಈ ಮೂಲಕ 1994ರಿಂದ ತನ್ನ ಯುರೋಪಿನ ಎದುರಾಳಿ ತಂಡದ ವಿರುದ್ಧ ವಿಶ್ವಕಪ್ನಲ್ಲಿ ಸೋಲಿನ ಸರಪಳಿ ಮುಂದುವರಿಸಿದೆ.
ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ನೆದರ್ಲ್ಯಾಂಡ್ಸ್ನ ವಾಗ್ನೆರ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ 2-1 ಅಲ್ಪ ಮುನ್ನಡೆ ಸಾಧಿಸಿ 32 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸುವ ವಿಶ್ವಾಸದಲ್ಲಿತ್ತು.
ಆದರೆ ದ್ವಿತೀಯಾರ್ಧದಲ್ಲಿ ಪ್ರತಿ ಹೋರಾಟ ನೀಡಿದ ಇಂಗ್ಲೆಂಡ್ ತಂಡವು ಮೂರು ಗೋಲುಗಳನ್ನು ಗಳಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.
ಇಂಗ್ಲೆಂಡ್ ತಂಡದ ಪರ ನಿಕೊಲಸ್ ಬಂಡುರಾಕ್(14ನೇ, 55ನೇ ನಿಮಿಷ) ಅವಳಿ ಗೋಲು ಗಳಿಸಿದರೆ, ಸ್ಟುವರ್ಟ್ ರಶ್ಮೀರ್(39ನೇ ನಿಮಿಷ) ಹಾಗೂ ಹೆನ್ರಿ ಕ್ರಾಫ್ಟ್ (43ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.
ಭಾರತೀಯ ತಂಡದ ಪರ ಹರ್ಮನ್ಪ್ರೀತ್ ಸಿಂಗ್(17ನೇ ನಿಮಿಷ) ಹಾಗೂ ದಿಲ್ಪ್ರೀತ್ ಸಿಂಗ್(25ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದಿರುವ ಇಂಗ್ಲೆಂಡ್ ತಂಡವು ‘ಡಿ’ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಟೂರ್ನಿಯಲ್ಲಿ ಎರಡನೇ ಸುತ್ತಿನಲ್ಲಿ ತನ್ನ ಸ್ಥಾನ ಖಚಿತಪಡಿಸಿದೆ. ಇಂಗ್ಲೆಂಡ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 4-1 ಅಂತರದಿಂದ ಮಣಿಸಿತ್ತು.
ಒಂದರಲ್ಲಿ ಜಯ, ಮತ್ತೊಂದರಲ್ಲಿ ಸೋತಿರುವ ಭಾರತ ತಂಡವು ಉತ್ತಮ ಗೋಲು ವ್ಯತ್ಯಾಸದ ಹಿನ್ನೆಲೆಯಲ್ಲಿ ಎರಡನೇ ಸ್ಥಾನದಲ್ಲಿದೆ.
ಭಾರತ ತಂಡವು ಆ.19ರಂದು ತನ್ನ ಮೂರನೇ ಗ್ರೂಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯವು ಭಾರತ ತಂಡಕ್ಕೆ ನಿರ್ಣಾಯಕವಾಗಿದೆ. ಇಂಗ್ಲೆಂಡ್ ತಂಡವು ವೇಲ್ಸ್ ತಂಡವನ್ನು ಎದುರಿಸಲಿದೆ.
ಭಾರತದ ಹಾಕಿ ತಂಡವು ವೇಲ್ಸ್ ವಿರುದ್ಧ 3-1 ಅಂತರದಿಂದ ಜಯಶಾಲಿಯಾಗಿ ತನ್ನ ಅಭಿಯಾನ ಆರಂಭಿಸಿತ್ತು. ಇಂಗ್ಲೆಂಡ್ ವಿರುದ್ಧ ಸೋತ ಹೊರತಾಗಿಯೂ ಭಾರತ ತಂಡವು ಎರಡನೇ ಹಂತಕ್ಕೇರುವ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ. ಪ್ರತೀ ಗುಂಪಿನ ಅಗ್ರ ಎರಡು ತಂಡಗಳನ್ನು ಇನ್ನೂ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ.
ಭಾರತ ತಂಡವು ಪಾಕಿಸ್ತಾನವನ್ನು ಮಣಿಸಿದರೆ ಮುಂದಿನ ಸುತ್ತಿಗೇರುವುದು ಖಚಿತವಾಗಲಿದೆ. ಕ್ರೆಗ್ ಫುಲ್ಟನ್ ಮಾರ್ಗದರ್ಶನದಲ್ಲಿ ಮುಂದಿನ ಸುತ್ತಿಗೇರಲು ಭಾರತ ತಂಡ ಎಲ್ಲ ಮೂರಂಕವನ್ನು ಗಳಿಸುವ ಅಗತ್ಯವಿದೆ.
ಒಂದು ವೇಳೆ ಭಾರತ ತಂಡವು ಡ್ರಾ ಸಾಧಿಸಿದರೆ, ವೇಲ್ಸ್ ತಂಡವು ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಬಾರದು, ಒಂದೊಮ್ಮೆ ಪಾಕಿಸ್ತಾನದ ವಿರುದ್ದ ಭಾರತ ಸೋತರೆ ಎರಡನೇ ಸುತ್ತಿಗೆ ತಲುಪುವುದಿಲ್ಲ.






