ಎಫ್ಐಎಚ್ ಪ್ರೊ ಲೀಗ್-2025 | ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿ ಭಾರತದ ಪುರುಷರ ಹಾಕಿ ತಂಡ

ಸಾಂದರ್ಭಿಕ ಚಿತ್ರ | PC : PTI
ಆಂಟ್ವರ್ಪ್: ಯುರೋಪ್ ನಲ್ಲಿ ನಡೆದಿದ್ದ ಪ್ರೊ ಲೀಗ್ನಲ್ಲಿ ಸತತ 6 ಪಂದ್ಯಗಳಲ್ಲಿ ಸೋಲನುಭವಿಸಿ ಮುಂದಿನ ವರ್ಷದ ವಿಶ್ವಕಪ್ ಗೆ ನೇರ ಪ್ರವೇಶ ಪಡೆಯುವ ಅವಕಾಶವನ್ನು ಕಳೆದುಕೊಂಡಿರುವ ಭಾರತೀಯ ಪುರುಷರ ಹಾಕಿ ತಂಡ ಬೆಲ್ಜಿಯಮ್ ವಿರುದ್ಧ ತನ್ನ ಕೊನೆಯ 2 ಪಂದ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶ ಪಡೆದು ತನ್ನ ಅಭಿಯಾನವನ್ನು ಅಂತ್ಯಗೊಳಿಸುವ ಇರಾದೆಯಲ್ಲಿದೆ.
ಭಾರತೀಯ ಪುರುಷರ ಹಾಕಿ ತಂಡವು ಶನಿವಾರ ಹಾಗೂ ರವಿವಾರ ಸತತ ಪಂದ್ಯಗಳಲ್ಲಿ ವಿಶ್ವದ ನಂ.3ನೇ ತಂಡ ಬೆಲ್ಜಿಯಂ ಅನ್ನು ಎದುರಿಸಲಿದೆ.
ಈ ವರ್ಷಾರಂಭದಲ್ಲಿ ಸ್ವದೇಶದಲ್ಲಿ ನಡೆದಿದ್ದ ಪ್ರೊ ಲೀಗ್ನಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದ ಭಾರತೀಯ ಪುರುಷರ ತಂಡವು ಭಾರೀ ವಿಶ್ವಾಸದೊಂದಿಗೆ ಯುರೋಪ್ಗೆ ಪ್ರವಾಸಕೈಗೊಂಡಿತ್ತು. ಆದರೆ ಸತತ ಸೋಲನುಭವಿಸಿ ಭಾರೀ ನಿರಾಸೆಗೊಳಿಸಿದೆ.
ಸತತ ಸೋಲಿನಿಂದಾಗಿ ಭಾರತವು 9 ತಂಡಗಳಿರುವ ಅಂಕಪಟ್ಟಿಯಲ್ಲಿ 3ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿದಿದೆ. ಪ್ರೊ ಲೀಗ್ ನ ವಿಜೇತ ತಂಡವು ವಿಶ್ವಕಪ್ಗೆ ಸ್ವಯಂ ಆಗಿ ಅರ್ಹತೆ ಪಡೆಯಲಿದೆ. ವಿಶ್ವಕಪ್ ಟೂರ್ನಿಯು ಬೆಲ್ಜಿಯಮ್ ಹಾಗೂ ನೆದರ್ಲ್ಯಾಂಡ್ಸ್ನ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ತಂಡವು 1-2 ಹಾಗೂ 2-3 ಅಂತರದಿಂದ ಸೋತಿತ್ತು ಆ ನಂತರ ಅರ್ಜೆಂಟೀನ(2-3, 1-2)ಹಾಗೂ ಆಸ್ಟ್ರೇಲಿಯ(2-3, 2-3)ತಂಡದ ವಿರುದ್ಧ ಸೋತಿತ್ತು.
ಯುರೋಪ್ ನಲ್ಲಿ ಭಾರತ ತಂಡವು ಅಷ್ಟೇನು ಕಳಪೆ ಪ್ರದರ್ಶನ ನೀಡಿರಲಿಲ್ಲ. ಅದು ಕೊನೆಯ ಕ್ಷಣದಲ್ಲಿ ಗೋಲುಗಳನ್ನು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿದೆ. ಪಂದ್ಯದ ಕೊನೆಯ ಹಂತದಲ್ಲಿ ಭಾರತದ ರಕ್ಷಣಾ ವಿಭಾಗವು ಒತ್ತಡಕ್ಕೆ ಕುಸಿದಿದೆ. ಎದುರಾಳಿ ತಂಡಗಳು ಬಹುತೇಕ ಪಂದ್ಯಗಳನ್ನು ಕೊನೆಯಕ್ಷಣದಲ್ಲಿ ಗೆದ್ದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಡಿಫೆನ್ಸ್ ವಿಭಾಗದಲ್ಲಿ ಹರ್ಮನ್ಪ್ರೀತ್ ಸಿಂಗ್ ಸಮರ್ಥ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅಮಿತ್ ರೋಹಿದಾಸ್ ಹಾಗೂ ಸುಮಿತ್ ಯುವ ಗೋಲ್ಕೀಪರ್ ಕೃಷ್ಣ ಪಾಠಕ್ ಹಾಗೂ ಸೂರಜ್ ಕರ್ಕೇರಗೆ ಸರಿಯಾದ ಬೆಂಬಲ ನೀಡುತ್ತಿಲ್ಲ. ಭಾರತದ ಫಾರ್ವರ್ಡ್ ಆಟಗಾರರು ತಮಗೆ ಲಭಿಸಿರುವ ಅವಕಾಶವನ್ನು ಗೋಲಾಗಿ ಪರಿವರ್ತಿಸುವ ಅಗತ್ಯವಿದೆ.
ಮುಖ್ಯ ಕೋಚ್ ಕ್ರೆಗ್ ಫುಲ್ಟನ್ ಅವರು ತಂಡದ ಪೆನಾಲ್ಟಿ ಕಾರ್ನರ್ಅನ್ನು ಗೋಲಾಗಿ ಪರಿವರ್ತಿಸುವ ಸಾಮರ್ಥ್ಯದ ಬಗ್ಗೆ ಚಿಂತಿತರಾಗಿದ್ದಾರೆ.
►ಸತತ 4 ಪಂದ್ಯಗಳಲ್ಲಿ ಮಹಿಳೆಯರ ತಂಡಕ್ಕೆ ಸೋಲು
ಭಾರತೀಯ ಮಹಿಳೆಯರ ಹಾಕಿ ತಂಡ ಕೂಡ ಲಂಡನ್ನಲ್ಲಿ ಈ ತನಕ ಸತತ 4 ಪಂದ್ಯಗಳಲ್ಲಿ ಸೋಲನುಭವಿಸಿ ಕಳಪೆ ಫಾರ್ಮ್ನಲ್ಲಿದೆ.
ಭಾರತ ತಂಡವು ಆಸ್ಟ್ರೇಲಿಯ ವಿರುದ್ಧ 2-3 ಹಾಗೂ 1-2, ಅರ್ಜೆಂಟೀನದ ಎದುರು 1-4 ಹಾಗೂ 0-2 ಅಂತರದಿಂದ ಸೋಲುಂಡಿದೆ.
ಮುಖ್ಯ ಕೋಚ್ ಹರೇಂದರ್ ಸಿಂಗ್ ಮಾರ್ಗದರ್ಶನದಲ್ಲಿ ಮಹಿಳೆಯರ ಹಾಕಿ ತಂಡವು ಕ್ಷಿಪ್ರ ಪಾಸ್ಗಳ ಮೂಲಕ ವೇಗದ ಹಾಗೂ ಆಕ್ರಮಣಕಾರಿ ಶೈಲಿಯ ಹಾಕಿ ಪಂದ್ಯವನ್ನು ಆಡುತ್ತಿದೆ.
ಮಹಿಳೆಯರ ಹಾಕಿ ತಂಡ ಕೂಡ ಶನಿವಾರ ಹಾಗೂ ರವಿವಾರ ಬೆಲ್ಜಿಯಂ ತಂಡದ ವಿರುದ್ದ ಸತತ ಪಂದ್ಯಗಳನ್ನು ಆಡಲಿದ್ದು, ಯುರೋಪ್ ಪ್ರವಾಸದಲ್ಲಿ ತನ್ನ ಮೊದಲ ಗೆಲುವಿನತ್ತ ಚಿತ್ತಹರಿಸಿದೆ.
9 ತಂಡಗಳಿರುವ ಅಂಕಪಟ್ಟಿಯಲ್ಲಿ ಮಹಿಳೆಯರ ಹಾಕಿ ತಂಡ ಸದ್ಯ 7ನೇ ಸ್ಥಾನದಲ್ಲಿದೆ. ಜೂನ್ 28 ಹಾಗೂ 29ರಂದು ಬರ್ಲಿನ್ನಲ್ಲಿ ಚೀನಾ ತಂಡದ ವಿರುದ್ಧ ಸತತ ಪಂದ್ಯಗಳನ್ನು ಆಡುವ ಮೂಲಕ ತನ್ನ ಅಭಿಯಾನ ಅಂತ್ಯಗೊಳಿಸಲಿದೆ.







