FIH ಮಹಿಳೆಯರ ವಿಶ್ವಕಪ್ ಫೈನಲ್ | ಅರ್ಜೆಂಟೀನ ತಂಡಕ್ಕೆ ನೆದರ್ಲ್ಯಾಂಡ್ಸ್ ಎದುರಾಳಿ

Photo Credit : fih.hockey
ಆ್ಯಮ್ಸ್ಟೆಲ್ವೀನ್, ಆ. 28: ಅರ್ಜೆಂಟೀನ ಹಾಕಿ ತಂಡವು ಶನಿವಾರ ನಡೆಯಲಿರುವ ಮಹಿಳೆಯರ ಹಾಕಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.
ದಕ್ಷಿಣ ಅಮೆರಿಕ ತಂಡವು ಗುರುವಾರ ನಡೆದಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 1-0 ಅಂತರದಿಂದ ಮಣಿಸಿದ ನಂತರ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.
2022ರ ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಅರ್ಜೆಂಟೀನ-ನೆದರ್ಲ್ಯಾಂಡ್ಸ್ ಸೆಣಸಾಡಿದ್ದವು. ಆಗ ಸ್ಪೇನ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಡಚ್ಚರು ಅರ್ಜೆಂಟೀನ ತಂಡವನ್ನು 3-1 ಅಂತರದಿಂದ ಮಣಿಸಿದ್ದರು.
ಅರ್ಜೆಂಟೀನದ ಪರ ಜುಲಿಯೆಟಾ ಜಾಂಕುನಾಸ್ ಪೆನಾಲ್ಟಿ ಕಾರ್ನರ್ನ ಮೂಲಕ ನಾಲ್ಕನೇ ಕ್ವಾರ್ಟರ್ನಲ್ಲಿ ಗೋಲು ಗಳಿಸಿದರು.
ಇದಕ್ಕೂ ಮೊದಲು ಮತ್ತೊಂದು ಸೆಮಿಫೈನಲ್ನಲ್ಲಿ ನೆದರ್ಲ್ಯಾಂಡ್ಸ್ ತಂಡವು ಆತಿಥೇಯ ದೇಶ ಬೆಲ್ಜಿಯಮ್ ತಂಡವನ್ನು 1-0 ಅಂತರದಿಂದ ಮಣಿಸಿತು. ಸತತ ಎಂಟನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿತು. ನೆದರ್ಲ್ಯಾಂಡ್ಸ್ ಪರ ಫೆಡೆರೆಕ್ ಮಟ್ಲಾ 28ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಅರ್ಜೆಂಟೀನ ತಂಡವು ಈ ಹಿಂದೆ ಆರು ಬಾರಿ ಫೈನಲ್ಗೆ ತಲುಪಿದ್ದು, ಎರಡು ಬಾರಿ ಜಯ ಸಾಧಿಸಿತ್ತು.
ಯುರೋಪಿಯನ್ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ನೆದರ್ಲ್ಯಾಂಡ್ಸ್ ತಂಡವು ಸತತ ನಾಲ್ಕನೇ ಪ್ರಶಸ್ತಿ ಹಾಗೂ ಒಟ್ಟಾರೆ ದಾಖಲೆಯ 10ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಈ ಹಿಂದೆ 2014, 2018, 2022ರಲ್ಲಿ ಪ್ರಶಸ್ತಿ ಗೆದ್ದಿದೆ.






