ಪಾಕಿಸ್ತಾನದ ವಿರುದ್ಧ ಅಂತಿಮ ಟ್ವೆಂಟಿ-20 ಪಂದ್ಯ ; ಡ್ಯಾರಿಲ್ ಮಿಚೆಲ್ ಗೆ ವಿಶ್ರಾಂತಿ, ರಚಿನ್ ರವೀಂದ್ರಗೆ ಅವಕಾಶ

ಚಿನ್ ರವೀಂದ್ರ | Photo: PTI
ಹ್ಯಾಮಿಲ್ಟನ್: ಪಾಕಿಸ್ತಾನ ವಿರುದ್ಧ ನ್ಯೂಝಿಲ್ಯಾಂಡ್ ಆಡಲಿರುವ ಅಂತಿಮ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯಕ್ಕೆ ಡ್ಯಾರಿಲ್ ಮಿಚೆಲ್ ಲಭ್ಯವಿರುವುದಿಲ್ಲ ಎಂದು ಆತಿಥೇಯ ತಂಡ ದೃಢಪಡಿಸಿದೆ.
ರವಿವಾರ ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿರುವ ಅಂತಿಮ ಟಿ-20 ಪಂದ್ಯದಲ್ಲಿ ಸಹ ಆಲ್ರೌಂಡರ್ ರಚಿನ್ ರವೀಂದ್ರ, ಮಿಚೆಲ್ ಬದಲಿಗೆ ಆಡಲಿದ್ದಾರೆ.
ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 4-0 ಮುನ್ನಡೆ ಪಡೆದಿರುವ ನ್ಯೂಝಿಲ್ಯಾಂಡ್ ಕೆಲಸದ ಒತ್ತಡವನ್ನು ನಿಭಾಯಿಸುವ ಭಾಗವಾಗಿ ಮಿಚೆಲ್ ಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ಶನಿವಾರ ತಿಳಿಸಿದೆ.
ಡ್ಯಾರಿಲ್ ಮಿಚೆಲ್ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ನಮಗೆ ಅತ್ಯಂತ ಮುಖ್ಯ ಆಟಗಾರ. ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಚಿನ್ ರವೀಂದ್ರ ಸ್ವತಃ ವಿಶ್ರಾಂತಿ ಪಡೆದಿದ್ದು, ಅಂತಿಮ ಪಂದ್ಯಕ್ಕೆ ತನ್ನ ಅಮೂಲ್ಯ ಕೌಶಲ್ಯವನ್ನು ಪ್ರದರ್ಶಿಸಲಿದ್ದು, ಕ್ರಿಕೆಟ್ ಗೆ ವಾಪಸಾಗಲಿದ್ದಾರೆ ಎಂದು ಕೋಚ್ ಗ್ಯಾರಿ ಸ್ಟಡ್ ಹೇಳಿದ್ದಾರೆ.
ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಸ್ವೀಕರಿಸಿದ್ದ ಡೆವೊನ್ ಕಾನ್ವೇ ಶುಕ್ರವಾರ ನಡೆದಿದ್ದ 4ನೇ ಪಂದ್ಯದಿಂದ ಹೊರಗುಳಿದಿದ್ದರು. ರವಿವಾರ ನಡೆಯಲಿರುವ ಅಂತಿಮ ಟಿ-20 ಪಂದ್ಯಕ್ಕೆ ಕಾನ್ವೇ ಅವರನ್ನು ಸೇರಿಸಿಕೊಳ್ಳಬೇಕೋ, ಬೇಡವೋ ಎಂದು ನ್ಯೂಝಿಲ್ಯಾಂಡ್ ಇನ್ನಷ್ಟೇ ನಿರ್ಧರಿಸಬೇಕಾಗಿದೆ.







