ಮೊದಲ ಆ್ಯಶಸ್ ಟೆಸ್ಟ್: ಆಸ್ಟ್ರೇಲಿಯಕ್ಕೆ ಸುಲಭ ತುತ್ತಾದ ಇಂಗ್ಲೆಂಡ್

ಟ್ರಾವಿಸ್ ಹೆಡ್ | Photo Credit : PTI
ಪರ್ತ್, ನ.22: ಬದಲಿ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಕೇವಲ 69 ಎಸೆತಗಳಲ್ಲಿ ಗಳಿಸಿದ ಶತಕದ ಸಹಾಯದಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಮೊದಲ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸುಲಭವಾಗಿ ಮಣಿಸಿತು.
ಪರ್ತ್ ಸ್ಟೇಡಿಯಂನಲ್ಲಿ ಎರಡನೇ ದಿನದಾಟವಾದ ಶನಿವಾರ ಗೆಲ್ಲಲು 205 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯದ ಪರ ಹೆಡ್ ಅವರು 123 ರನ್(83 ಎಸೆತ, 16 ಬೌಂಡರಿ,4 ಸಿಕ್ಸರ್) ಗಳಿಸಿದರು. 8 ವಿಕೆಟ್ಗಳ ಅಂತರದಿಂದ ಜಯಶಾಲಿಯಾಗಿರುವ ಆತಿಥೇಯರು ಐದು ಪಂದ್ಯಗಳ ಆ್ಯಶಸ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಮಾರ್ನಸ್ ಲ್ಯಾಬುಶೇನ್ ಔಟಾಗದೆ 51 ರನ್(49 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಸ್ಟೀವ್ ಸ್ಮಿತ್ ಔಟಾಗದೆ 2 ರನ್ ಗಳಿಸಿದರು.
ವೇಗಿದ್ವಯರಾದ ಸ್ಕಾಟ್ ಬೋಲ್ಯಾಂಡ್ ಹಾಗೂ ಮಿಚೆಲ್ ಸ್ಟಾರ್ಕ್ ಭೋಜನ ವಿರಾಮದ ಬಳಿಕ ಅಮೋಘ ಬೌಲಿಂಗ್ ಸಂಘಟಿಸಿ ಇಂಗ್ಲೆಂಡ್ ತಂಡದ ಕುಸಿತಕ್ಕೆ ಕಾರಣರಾದರು. ಪ್ರವಾಸಿ ತಂಡ 1 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತ್ತು. ಒಟ್ಟು ಏಳು ವಿಕೆಟ್ಗಳನ್ನು ಉರುಳಿಸಿದ ಬೋಲ್ಯಾಂಡ್ ಹಾಗೂ ಸ್ಟಾರ್ಕ್ ಇಂಗ್ಲೆಂಡ್ ತಂಡಕ್ಕೆ ಮರ್ಮಾಘಾತ ನೀಡಿದರು.
ಬೋಲ್ಯಾಂಡ್ 11 ಎಸೆತಗಳಲ್ಲಿ ಬೆನ್ ಡಕೆಟ್(28 ರನ್), ಓಲಿ ಪೋಪ್(33 ರನ್)ಹಾಗೂ ಹ್ಯಾರಿ ಬ್ರೂಕ್(0)ವಿಕೆಟ್ಗಳನ್ನು ಕಬಳಿಸಿದರೆ, ಎರಡು ಎಸೆತಗಳ ನಂತರ ಸ್ಟಾರ್ಕ್ ಅವರು ಜೋ ರೂಟ್ಗೆ(8ರನ್)ಪೆವಿಲಿಯನ್ ಹಾದಿ ತೋರಿಸಿದರು.
ಸ್ಟಾರ್ಕ್ ಅವರು ನಾಯಕ ಬೆನ್ ಸ್ಟೋಕ್ಸ್(2ರನ್)ವಿಕೆಟ್ ಉರುಳಿಸಿದಾಗ ಇಂಗ್ಲೆಂಡ್ 88 ರನ್ಗೆ 6ನೇ ವಿಕೆಟ್ ಕಳೆದುಕೊಂಡಿತು. ಹಿರಿಯ ವೇಗದ ಬೌಲರ್ ಸ್ಟಾರ್ಕ್ ವೃತ್ತಿಜೀವನದಲ್ಲಿ ಮೂರನೇ ಬಾರಿ 10 ವಿಕೆಟ್ ಗೊಂಚಲು ಪಡೆದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಸ್ಟಾರ್ಕ್ ಜೀವನಶ್ರೇಷ್ಠ ಇನಿಂಗ್ಸ್(7-58)ಆಡಿದ್ದರು.
ಗಸ್ ಅಟ್ಕಿನ್ಸನ್(37 ರನ್)ಹಾಗೂ ಬ್ರೆಂಡನ್ ಕಾರ್ಸ್(20 ರನ್)ನಿರ್ಣಾಯಕ 50 ರನ್ ಜೊತೆಯಾಟ ನಡೆಸಿ ಇಂಗ್ಲೆಂಡ್ ತಂಡವನ್ನು ಆಧರಿಸಿದರು.
ಆಸ್ಟ್ರೇಲಿಯದ ರನ್ ಚೇಸ್ ವೇಳೆ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಝಾ ಬೆನ್ನುನೋವಿನಿಂದಾಗಿ ಕ್ರೀಸಿಗೆ ಇಳಿಯಲಿಲ್ಲ. ಖ್ವಾಜಾ ಬದಲಿಗೆ ಇನಿಂಗ್ಸ್ ಆರಂಭಿಸಿದ ಹೆಡ್, ಹೊಡಿಬಡಿ ಆಟಕ್ಕೆ ಮುಂದಾದರು. ಕಾರ್ಸ್ ಹಾಗೂ ಮಾರ್ಕ್ ವುಡ್ ಬೌಲಿಂಗ್ನಲ್ಲಿ ಸೊಗಸಾದ ಬೌಂಡರಿ ಹಾಗೂ ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದರು.
36 ಎಸೆತಗಳಲ್ಲಿ ತನ್ನ ಅರ್ಧಶತಕವನ್ನು ಪೂರೈಸಿದ ಹೆಡ್, ಟೆಸ್ಟ್ ಕ್ರಿಕೆಟ್ನಲ್ಲಿ 4,000 ರನ್ ಪೂರೈಸಿದರು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಇನ್ನೋರ್ವ ಆರಂಭಿಕ ಆಟಗಾರ ಜೇಕ್ ವೆದರಾಲ್ಡ್ 23 ರನ್ ಗಳಿಸಿ ಕಾರ್ಸ್ಗೆ ವಿಕೆಟ್ ಒಪ್ಪಿಸಿದರು.
ಸ್ಟೋಕ್ಸ್ ಓವರ್ನಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದ ಹೆಡ್ ಇಂಗ್ಲೆಂಡ್ಗೆ ಒತ್ತಡ ಹೇರಿದರು. ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿ ತನ್ನ 10ನೇ ಶತಕ ಪೂರೈಸಿದರು. ಕಾರ್ಸ್ ಎಸೆತದಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು.
ಮೊದಲ ದಿನದಾಟವಾದ ಶುಕ್ರವಾರ ಒಟ್ಟು 19 ವಿಕೆಟ್ಗಳು ಉರುಳಿದ್ದು, ಬೌಲರ್ಗಳು ಮೇಲುಗೈ ಸಾಧಿಸಿದ್ದರು. 9 ವಿಕೆಟ್ಗಳ ನಷ್ಟಕ್ಕೆ 123 ರನ್ನಿಂದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯ ನಿನ್ನೆಯ ಮೊತ್ತಕ್ಕೆ ಕೇವಲ 9 ರನ್ ಸೇರಿಸಿತು. ಕಾರ್ಸ್(20 ರನ್) ವಿಕೆಟನ್ನು ಪಡೆದ ಡೊಗೆಟ್ ಆಸ್ಟ್ರೇಲಿಯವನ್ನು ಮೊದಲ ಇನಿಂಗ್ಸ್ನಲ್ಲಿ 132 ರನ್ಗೆ ನಿಯಂತ್ರಿಸಿದರು.
ಸ್ಟೋಕ್ಸ್ ಕೇವಲ 36 ಎಸೆತಗಳಲ್ಲಿ 23 ರನ್ಗೆ ಐದು ವಿಕೆಟ್ಗಳನ್ನು ಉರುಳಿಸಿ ಇಂಗ್ಲೆಂಡ್ ತಂಡವು 2010-11ರ ಸರಣಿಯ ನಂತರ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸುವರ್ಣಾವಕಾಶ ಸೃಷ್ಟಿಸಿದ್ದರು.
*ಇಂಗ್ಲೆಂಡ್ 164 ರನ್ಗೆ ಆಲೌಟ್:
40 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಕೇವಲ 164 ರನ್ಗೆ ಸರ್ವಪತನ ಕಂಡಿತು. ಮೊದಲ ಓವರ್ನ 5ನೇ ಎಸೆತದಲ್ಲಿ ಝಾಕ್ ಕ್ರಾವ್ಲೆ ವಿಕೆಟನ್ನು ಉರುಳಿಸಿದ 35ರ ವಯಸ್ಸಿನ ಸ್ಟಾರ್ಕ್ ಆಸ್ಟ್ರೇಲಿಯಕ್ಕೆ ಆರಂಭಿಕ ಮೇಲುಗೈ ಒದಗಿಸಿದರು. ಡಕೆಟ್(28 ರನ್) ಹಾಗೂ ಪೋಪ್ (33 ರನ್)ಎರಡನೇ ವಿಕೆಟ್ಗೆ 65 ರನ್ ಸೇರಿಸಿ ಇನಿಂಗ್ಸ್ ಆಧರಿಸಿದರು.
ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಜೋ ರೂಟ್ ಕೇವಲ 8 ರನ್ ಗಳಿಸಿ ಸ್ಟಾರ್ಕ್ಗೆ ಕ್ಲೀನ್ಬೌಲ್ಡಾದರು. ಬ್ರೆಂಡನ್ ಡೊಗೆಟ್(3-55) ಅವರು ಜಮೀ ಸ್ಮಿತ್(15 ರನ್), ಕಾರ್ಸ್(20 ರನ್) ಹಾಗೂ ಆರ್ಚರ್ರನ್ನು(5ರನ್)ಔಟ್ ಮಾಡಿದರು. ಸ್ಕಾಟ್ ಬೋಲ್ಯಾಂಡ್(4-33) ಹಾಗೂ ಮಿಚೆಲ್ ಸ್ಟಾರ್ಕ್(3-55)ಉಳಿದ ಏಳು ವಿಕೆಟ್ಗಳನ್ನು ಪಡೆದರು.







