ಮೊದಲ ಏಕದಿನ| ಕಿವೀಸ್ ವಿರುದ್ಧ ಭಾರತಕ್ಕೆ ಐದು ವಿಕೆಟ್ ಗಳ ಜಯ

Photo Credit : PTI
ಆಕ್ಲೆಂಡ್: ವಿರಾಟ್ ಕೊಹ್ಲಿ 50 ಓವರ್ ಮಾದರಿಯ ಕ್ರಿಕೆಟ್ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿ ಮಳೆ ಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಭಾರತ ಕ್ರಿಕೆಟ್ ತಂಡ ಐದು ವಿಕೆಟ್ಗಳ ಅಂತರದಿಂದ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದರು.
ಈಡನ್ಪಾರ್ಕ್ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ಡಿಎಲ್ಎಸ್ ಪದ್ದತಿಯ ಪ್ರಕಾರ ಗೆಲುವಿಗೆ ಪರಿಷ್ಕೃತ ಗುರಿ 32 ಓವರ್ಗಳಲ್ಲಿ 143 ರನ್ ಪಡೆಯಿತು. ವಿರಾಟ್ ಕೊಹ್ಲಿ 51 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಿತ 74 ರನ್ ಗಳಿಸಿ ಭಾರತ ತಂಡವು ಸುಲಭ ಗೆಲುವು ದಾಖಲಿಸಿ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಸಹಾಯ ಮಾಡಿದರು.
ಗುರುವಾರ 38ನೇ ವಯಸ್ಸಿಗೆ ಕಾಲಿಡಲಿರುವ ಕೊಹ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ ತನ್ನ 80ನೇ ಅರ್ಧಶತಕ ಪೂರೈಸಿದರು. ರನ್ ಚೇಸ್ ವೇಳೆ ಮತ್ತೊಂದು ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ರೋಹಿತ್ ಶರ್ಮಾ ಮೊದಲ ಓವರ್ನಲ್ಲಿ ಶೂನ್ಯಕ್ಕೆ ಔಟಾದಾಗ ಕ್ರೀಸಿಗಿಳಿದ ಭಾರತ ತಂಡದ ಮಾಜಿ ನಾಯಕ ಕೊಹ್ಲಿ ತಕ್ಷಣವೇ ಜವಾಬ್ದಾರಿ ವಹಿಸಿಕೊಂಡು ಇನಿಂಗ್ಸ್ ಆಧರಿಸಲು ಮುಂದಾದರು.
ಅನುಭವಿ ಬ್ಯಾಟರ್ಗೆ ನಾಯಕ ಶುಭಮನ್ ಗಿಲ್ ಸಾಥ್ ನೀಡಿದರು. ಈ ಜೋಡಿಯು ಎರಡನೇ ವಿಕೆಟ್ಗೆ 113 ರನ್ ಜೊತೆಯಾಟದಲ್ಲಿ ಭಾಗಿಯಾಯಿತು. 37 ರನ್ ಗಳಿಸಿದ ಗಿಲ್ ಪೋಷಕನ ಪಾತ್ರ ವಹಿಸಿದರು. ಕೊಹ್ಲಿ ಸಾಂದರ್ಭಿಕ ಬೌಂಡರಿಗಳ ಮೂಲಕ ಅಗತ್ಯದ ರನ್ರೇಟ್ ಅನ್ನು ನಿಯಂತ್ರಿಸಿದರು.
ನ್ಯೂಝಿಲ್ಯಾಂಡ್ನ ವೇಗದ ಬೌಲರ್ ಜೇಕಬ್ ಡಫಿ 49 ರನ್ ನೀಡಿ ಮೂರು ವಿಕೆಟ್ಗಳನ್ನು ಪಡೆದು ಆತಿಥೇಯರು ಸ್ಪರ್ಧೆಯಲ್ಲಿರುವಂತೆ ಮಾಡಿದರು. ಆದರೆ ಕೊಹ್ಲಿ-ಗಿಲ್ ಜೊತೆಯಾಟದ ಮೂಲಕ ಭಾರತವು ಸಾಕಷ್ಟು ಹಾನಿವುಂಟು ಮಾಡಿತು. ನಮನ್ ಧೀರ್ ಬೌಂಡರಿ ಗಳಿಸುವ ಮೂಲಕ ಗೆಲುವಿನ ರನ್ ಗಳಿಸಿದರು.
ಭಾರತ ತಂಡವು 22.4 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 143 ರನ್ ಗಳಿಸಿದ್ದು, ಐದು ವಿಕೆಟ್ಗಳ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಪಡೆಯಿತು.
ಭಾರತದ ವೇಗಿಗಳ ದಾಳಿಗೆ ಕಿವೀಸ್ ಪಡೆ ಕಂಗಾಲು: ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತ ತಂಡದ ನಾಯಕ ಶುಭಮನ್ ಗಿಲ್ ಫೀಲ್ಡಿಂಗ್ ಆಯ್ದುಕೊಂಡರು. ಭಾರತ ಯುವ ವೇಗದ ಬೌಲಿಂಗ್ ದಾಳಿಯು ಅತ್ಯುತ್ತಮ ಪ್ರದರ್ಶನ ನೀಡಿ ನ್ಯೂಝಿಲ್ಯಾಂಡ್ ತಂಡವನ್ನು 40.2 ಓವರ್ಗಳಲ್ಲಿ 185 ರನ್ಗೆ ಆಲೌಟ್ ಮಾಡುವಲ್ಲಿ ನೆರವಾದರು.
ಅರ್ಷದೀಪ್ ಸಿಂಗ್(4-70) ನಾಲ್ಕು ವಿಕೆಟ್ ಗೊಂಚಲು ಪಡೆದು ಮಿಂಚಿದರೆ, ಗುರ್ನೂರ್ ಬ್ರಾರ್ (3-44)ಹಾಗೂ ಅನ್ಶುಲ್ ಕಾಂಬೋಜ್(2-22) ಅವರು ಉತ್ತಮ ಸಾಥ್ ನೀಡಿ ಆತಿಥೇಯ ತಂಡವನ್ನು ಈಡನ್ಪಾರ್ಕ್ ಮೈದಾನದಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
ಅರ್ಷದೀಪ್ ಸಿಂಗ್ ಅವರು ವಿಲ್ ಯಂಗ್(9 ರನ್) ಅವರನ್ನು ಬೇಗನೆ ಔಟ್ ಮಾಡಿ ಆರಂಭಿಕ ಆಘಾತ ನೀಡಿದರು. ಹೆನ್ರಿ ನಿಕೊಲ್ಸ್ ಕೂಡ 9 ರನ್ಗೆ ಔಟಾದರು. ಎಡಗೈ ವೇಗದ ಬೌಲರ್ ಅರ್ಷದೀಪ್ ಬೌನ್ಸ್ನ ಲಾಭ ಪಡೆದು ನ್ಯೂಝಿಲ್ಯಾಂಡ್ ಅಗ್ರ ಸರದಿಗೆ ಸವಾಲಾದರು.
ಟಿಮ್ ಸೀಫಟ್(38 ರನ್, 43 ಎಸೆತ, 3 ಬೌಂಡರಿ,2 ಸಿಕ್ಸರ್)ಒಂದಷ್ಟು ಪ್ರತಿರೋಧ ಒಡ್ಡಿದರು. ಗುರ್ನೂರ್ ಬ್ರಾರ್ ಅವರು ಸೀಫರ್ಟ್ ಪ್ರತಿರೋಧಕ್ಕೆ ತಡೆಯೊಡ್ಡಿದರು. ಗುರ್ನೂರ್ ತನ್ನ ವೇಗ ಹಾಗೂ ಬೌನ್ಸ್ ಮೂಲಕ ನ್ಯೂಝಿಲ್ಯಾಂಡ್ ಬ್ಯಾಟರ್ಗಳನ್ನು ನಿರಂತರವಾಗಿ ಕಾಡಿದರು. ಚುರುಕಿನ ರಿಟರ್ನ್ ಕ್ಯಾಚ್ ಮೂಲಕ ಟಾಮ್ ಲ್ಯಾಥಮ್(3 ರನ್) ವಿಕೆಟನ್ನು ಉರುಳಿಸಿದರು. ಆಗ ಆತಿಥೇಯರು 84 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡರು.
ಡ್ಯಾರಿಲ್ ಮಿಚೆಲ್(28 ರನ್, 41 ಎಸೆತ) ಅವರು ಗ್ಲೆನ್ ಫಿಲಿಪ್ಸ್ (30 ರನ್,51 ಎಸೆತ) ಜೊತೆಗೂಡಿ ಇನಿಂಗ್ಸ್ ಆಧರಿಸಲು ಯತ್ನಿಸಿದರು. ರೋಹಿತ್ ಹಾಗೂ ರಾಹುಲ್ ಅವರು ಮಿಚೆಲ್ರನ್ನು ರನೌಟ್ ಮಾಡಿ ಈ ಜೋಡಿಯನ್ನು ಬೇರ್ಪಡಿಸಿದರು.
ಮಧ್ಯಮ ಓವರ್ಗಳಲ್ಲಿ ಅನ್ಶುಲ್ ಕಾಂಬೋಜ್ ಗಮನಾರ್ಹ ಪ್ರದರ್ಶನ ನೀಡಿದರು. ಶಿಸ್ತುಬದ್ದ ಲೈನ್ ಹಾಗೂ ಲೆಂಗ್ತ್ ಕಾಯ್ದುಕೊಂಡು ಬಿಗಿಯಾದ ಬೌಲಿಂಗ್ ನಡೆಸಿದರು. ಹರ್ಯಾಣದ ವೇಗಿ ಕಾಂಬೋಜ್ ಕಿವೀಸ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್(4 ರನ್)ಹಾಗೂ ನಾಥನ್ ಸ್ಮಿತ್(1)ವಿಕೆಟನ್ನು ಪಡೆದರು. 10 ಓವರ್ಗಳಲ್ಲಿ ಎರಡು ಮೇಡನ್ ಸಹಿತ 22 ರನ್ಗೆ 2 ವಿಕೆಟ್ಗಳನ್ನು ಉರುಳಿಸಿದರು.
ಕಾಂಬೋಜ್ ತನ್ನ ಪೂರ್ಣ ಕೋಟಾದಲ್ಲಿ ಕೇವಲ 22 ರನ್ ನೀಡಿ ಇಕಾನಮಿ ರೇಟ್ ಅನ್ನು 2.20ಕ್ಕೆ ಕಾಯ್ದುಕೊಂಡರು. 46 ಡಾಟ್ ಬಾಲ್ಗಳನ್ನು ಎಸೆದರು. ಇತ್ತೀಚೆಗಿನ ದಿನಗಳಲ್ಲಿ 10 ಓವರ್ಗಳ ಬೌಲಿಂಗ್ನಲ್ಲಿ ಭಾರತೀಯ ಬೌಲರ್ನ ಅತ್ಯಂತ ಮಿತವ್ಯಯಿ ಪ್ರದರ್ಶನ ಇದಾಗಿದೆ.
ನ್ಯೂಝಿಲ್ಯಾಂಡ್ನ ಕೆಳ ಕ್ರಮಾಂಕದ ಬ್ಯಾಟರ್ಗಳು ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ಯತ್ನಿಸಿದರು. ವೇಗಿ ಬ್ಲೇರ್ ಟಿಕ್ನೆರ್ ಕೇವಲ 23 ಎಸೆತಗಳಲ್ಲಿ 4 ಸಿಕ್ಸರ್ಗಳ ಸಹಿತ 34 ರನ್ ಗಳಿಸಿದರು. ಆದರೆ ಟಿಕ್ನೆರ್ ಪ್ರಯತ್ನದ ಹೊರತಾಗಿಯೂ ಆತಿಥೇಯರು 185 ರನ್ ದಾಟಲಿಲ್ಲ.
ಭಾರತದ ರನ್ ಚೇಸ್ಗೆ ಅಡ್ಡಿಯಾದ ಮಳೆರಾಯ: ಭಾರತದ ರನ್ ಚೇಸ್ಗೆ ಮಳೆ ರಾಯ ಪದೇ ಪದೇ ಅಡ್ಡಿಯಾದ ಪರಿಣಾಮ ಗೆಲುವಿನ ಗುರಿಯನ್ನು ಡಿಎಲ್ಎಸ್ ನಿಯಮದ ಪ್ರಕಾರ 32 ಓವರ್ಗಳಲ್ಲಿ 143ಕ್ಕೆ ಪರಿಷ್ಕರಿಸಲಾಯಿತು. ಕೈಲ್ ಜಮೀಸನ್ ಅವರ ಮೊದಲ ಓವರ್ನಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದಾಗ ಭಾರತ ತಂಡ ಹಿನ್ನಡೆ ಕಂಡಿತು. ಆದರೆ ಗಿಲ್ ಹಾಗೂ ಕೊಹ್ಲಿ ಅವರು ರನ್ ಚೇಸ್ನಲ್ಲಿ ಮತ್ತೆ ಹಿನ್ನಡೆಯಾಗದಂತೆ ನೋಡಿಕೊಂಡರು.






