ಮೊದಲ ಏಕದಿನ: ವೆಸ್ಟ್ಇಂಡೀಸ್ ವಿರುದ್ಧ ಭಾರತ ಜಯಭೇರಿ
ಕುಲದೀಪ್ ಯಾದವ್, ರವೀಂದ್ರ ಜಡೇಜ ಸ್ಪಿನ್ ಮೋಡಿ, ಇಶಾನ್ ಕಿಶನ್ ಅರ್ಧಶತಕ

ರವೀಂದ್ರ ಜಡೇಜ, Photo: twitter
ಬಾರ್ಬಡೋಸ್, ಜು.27:ಅವಳಿ ಸ್ಪಿನ್ನರ್ಗಳಾದ ಕುಲದೀಪ್ ಯಾದವ್(4-6) ಹಾಗೂ ರವೀಂದ್ರ ಜಡೇಜ(3-37)ಅಮೋಘ ಬೌಲಿಂಗ್ ಹಾಗೂ ಇಶಾನ್ ಕಿಶನ್ ಅರ್ಧಶತಕದ(52 ರನ್,46 ಎಸೆತ, 7 ಬೌಂಡರಿ, 1 ಸಿಕ್ಸರ್) ಕೊಡುಗೆ ನೆರವಿನಿಂದ ಆತಿಥೇಯ ವೆಸ್ಟ್ಇಂಡೀಸ್ ವಿರುದ್ಧ ಗುರುವಾರ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಮೊದಲ ಏಕದಿನ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಗೆಲ್ಲಲು 115 ರನ್ ಸುಲಭ ಸವಾಲು ಪಡೆದಿದ್ದ ಭಾರತ 22.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು. ರವೀಂದ್ರ ಜಡೇಜ(ಔಟಾಗದೆ 16) ಹಾಗೂ ರೋಹಿತ್ ಶರ್ಮಾ(ಔಟಾಗದೆ 12)ತಂಡವನ್ನು ಗೆಲುವಿನ ದಡ ಸೇರಿಸಿದರು.ಸೂರ್ಯಕುಮಾರ್ 19 ರನ್ ಗಳಿಸಿ ಔಟಾದರು. ಶುಭಮನ್ ಗಿಲ್(7) ಹಾಗೂ ಹಾರ್ದಿಕ್ಪಾಂಡ್ಯ(5 ರನ್)ಬೇಗನೆ ಔಟಾದರು. ಕಿಶನ್ 4ನೇ ಅರ್ಧಶತಕ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ವಿಂಡೀಸ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು. ಕುಲದೀಪ್ ಹಾಗೂ ಜಡೇಜ ಸ್ಪಿನ್ ಮೋಡಿಗೆ ತತ್ತರಿಸಿದ ವಿಂಡೀಸ್ 23 ಓವರ್ಗಳಲ್ಲಿ ಕೇವಲ 114 ರನ್ಗೆ ಗಂಟುಮೂಟೆ ಕಟ್ಟಿತು.





