ಮೊದಲ ಏಕದಿನ | ಅಫ್ಘಾನ್ ವಿರುದ್ಧ ಭಾರತಕ್ಕೆ ಜಯ

Photo credit : X@BCCI
ಧರ್ಮಶಾಲಾ, ಜೂ.13: ನಾಯಕ ಶುಭಮನ್ ಗಿಲ್ (ಔಟಾಗದೆ 84; 66 ಎಸೆತ, 11 ಬೌಂಡರಿ, 2 ಸಿಕ್ಸರ್) ಅವರ ಅರ್ಧಶತಕದ ಬಲದಿಂದ ಭಾರತ ಕ್ರಿಕೆಟ್ ತಂಡವು ಅಫ್ಘಾನಿಸ್ತಾನದ ವಿರುದ್ಧದ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನು ಏಳು ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಶನಿವಾರ ನಡೆದ ಮಳೆಬಾಧಿತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಅಫ್ಘಾನ್ ತಂಡವು ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ (102; 51 ಎಸೆತ, 8 ಬೌಂಡರಿ, 8 ಸಿಕ್ಸರ್) ಅವರ ಏಕಾಂಗಿ ಹೋರಾಟದ ಹೊರತಾಗಿಯೂ 24.5 ಓವರ್ಗಳಲ್ಲಿ 194 ರನ್ಗಳಿಗೆ ಆಲೌಟ್ ಆಯಿತು.
ಚೊಚ್ಚಲ ಪಂದ್ಯವಾಡಿದ ಗುರ್ನೂರ್ ಬ್ರಾರ್ (3–27) ಹಾಗೂ ಹರ್ಷ ದುಬೆ (3–47) ತಲಾ ಮೂರು ವಿಕೆಟ್ ಪಡೆದರು. ನಿತೀಶ್ ರೆಡ್ಡಿ (2–31) ಹಾಗೂ ಅರ್ಷದೀಪ್ ಸಿಂಗ್ (2–27) ತಲಾ ಎರಡು ವಿಕೆಟ್ ಕಬಳಿಸಿದರು.
ಗೆಲ್ಲಲು 195 ರನ್ಗಳ ಗುರಿ ಪಡೆದ ಭಾರತ ತಂಡವು 22.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ನಾಯಕ ಶುಭಮನ್ ಗಿಲ್ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಮಳೆಯಿಂದಾಗಿ ಪಂದ್ಯವನ್ನು 25 ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು.




