ಮೊದಲ ಏಕದಿನ: ಶ್ರೀಲಂಕಾ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ

Photo Credit : PTI
ರಾವಲ್ಪಿಂಡಿ, ನ.12: ವನಿಂದು ಹಸರಂಗ ಆಲ್ರೌಂಡ್ ಪ್ರದರ್ಶನದ ಹೊರತಾಗಿಯೂ ಸಲ್ಮಾನ್ ಅಲಿ(ಔಟಾಗದೆ 105 ರನ್, 87 ಎಸೆತ, 9 ಬೌಂಡರಿ) ಹಾಗೂ ಹುಸೇನ್ ತಲತ್(62 ರನ್, 63 ಎಸೆತ, 6 ಬೌಂಡರಿ,1 ಸಿಕ್ಸರ್)ಅರ್ಧಶತಕಗಳ ಕೊಡುಗೆ, ಹಾರಿಸ್ ರವೂಫ್(4-61), ಫಹೀಂ ಅಶ್ರಫ್(2-49) ಹಾಗೂ ನಸೀಂ ಶಾ(2-55)ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಆತಿಥೇಯ ಪಾಕಿಸ್ತಾನ ಕ್ರಿಕೆಟ್ ತಂಡ ಶ್ರೀಲಂಕಾ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 6ರನ್ನಿಂದ ರೋಚಕವಾಗಿ ಗೆದ್ದುಕೊಂಡಿದೆ.
ಈ ಗೆಲುವಿನ ಮೂಲಕ ಪಾಕಿಸ್ತಾನ ತಂಡವು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡವು ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 299 ರನ್ ಗಳಿಸಿತು. 95 ರನ್ ಗೆ 4 ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿದ್ದ ಪಾಕಿಸ್ತಾನ ತಂಡವು ಸಲ್ಮಾನ್ ಹಾಗೂ ಹುಸೇನ್ ತಲತ್ 5ನೇ ವಿಕೆಟ್ ಗೆ ಸೇರಿಸಿದ 138 ರನ್ ಜೊತೆಯಾಟದಿಂದ ಚೇತರಿಸಿಕೊಂಡಿತು. ಕೊನೆಯ 10 ಓವರ್ ಗಳಲ್ಲಿ 104 ರನ್ ಕಲೆ ಹಾಕಿದ ಪಾಕಿಸ್ತಾನ ತಂಡವು ಸ್ಪರ್ಧಾತ್ಮಕ ಸ್ಕೋರ್ ಗಳಿಸಿತು.
ಗೆಲ್ಲಲು 300 ರನ್ ಗುರಿ ಪಡೆದಿದ್ದ ಶ್ರೀಲಂಕಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 293 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪಥುಮ್ ನಿಸ್ಸಾಂಕ (29 ರನ್, 39 ಎಸೆತ) ಹಾಗೂ ಕಮಿಲ್ ಮಿಶಾರ(38 ರನ್, 36 ಎಸೆತ) ಮೊದಲ ವಿಕೆಟ್ ಗೆ ಕೇವಲ 70 ಎಸೆತಗಳಲ್ಲಿ 85 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಲಂಕಾ ತಂಡವು ಮಧ್ಯಮ ಓವರ್ ಗಳಲ್ಲಿ ವಿಕೆಟ್ ಕೈಚೆಲ್ಲಿತು. ಸಮರವಿಕ್ರಮ(39 ರನ್, 48 ಎಸೆತ) ಹಾಗೂ ನಾಯಕ ಚರಿತ ಅಸಲಂಕ (32 ರನ್, 49 ಎಸೆತ) 4ನೇ ವಿಕೆಟ್ ಗೆ 57 ರನ್ ಸೇರಿಸಿದರೂ, ಶ್ರೀಲಂಕಾ 7 ಸ್ಪೆಷಲಿಸ್ಟ್ ಬ್ಯಾಟರ್ ಗಳನ್ನು ಆಡಿಸಿದರೂ ಗೆಲುವು ಒಲಿಯಲಿಲ್ಲ.
ಆಲ್ರೌಂಡರ್ ವನಿಂದು ಹಸರಂಗ(59 ರನ್, 52 ಎಸೆತ, 7 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿ ಕೊನೆಯ ಓವರ್ ತನಕ ಹೋರಾಡಿದರು. ಲಂಕಾ ಗೆಲುವಿಗೆ 10 ಎಸೆತಗಳಿಗೆ 21 ರನ್ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು. ಮಹೀಶ್ ತೀಕ್ಷಣ(ಔಟಾಗದೆ 21) ಕೊನೆಯ ಓವರ್ ನಲ್ಲಿ 2 ಬೌಂಡರಿ ಗಳಿಸಿ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ ಹಸರಂಗ ವಿಕೆಟನ್ನು ಪಡೆದ ನಸೀಂ ಶಾ ಗೆಲುವನ್ನು ನಿರಾಕರಿಸಿದರು.
ಏಕದಿನ ಕ್ರಿಕೆಟ್ನಲ್ಲಿ 2ನೇ ಶತಕ ದಾಖಲಿಸಿ ಪಾಕಿಸ್ತಾನ ತಂಡ ಆರಂಭಿಕ ಕುಸಿತದಿಂದ ಚೇತರಿಸಿಕೊಳ್ಳುವಲ್ಲಿ ನೆರವಾದ ಸಲ್ಮಾನ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ 2ಭಾಜನರಾದರು.







