ಕೇರಳದ ಪ್ರಪ್ರಥಮ ಒಲಿಂಪಿಕ್ ಪದಕ ವಿಜೇತ ಹಾಕಿ ಪಟು ಮ್ಯಾನ್ಯುಯೆಲ್ ಫ್ರೆಡ್ರಿಕ್ ನಿಧನ

ಮ್ಯಾನ್ಯುಯೆಲ್ ಫ್ರೆಡ್ರಿಕ್ (Photo credit: kairalinewsonline.com)
ಕಣ್ಣೂರು/ಬೆಂಗಳೂರು: ಕೇರಳದ ಪ್ರಪ್ರಥಮ ಒಲಿಂಪಿಕ್ ಪದಕ ವಿಜೇತ ಹಾಕಿ ಪಟು ಮ್ಯಾನ್ಯುಯೆಲ್ ಫ್ರೆಡ್ರಿಕ್ ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಫ್ರೆಡ್ರಿಕ್ ಮ್ಯಾನ್ಯುಯೆಲ್ ಗೆ 78 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯವರಾದ ಫ್ರೆಡ್ರಿಕ್ ಮ್ಯಾನ್ಯುಯೆಲ್, 1972ರ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ ಹಾಲೆಂಡ್ ಎದುರು ನಡೆದಿದ್ದ ಪಂದ್ಯದಲ್ಲಿ ಭಾರತ ಹಾಕಿ ತಂಡದ ಪರ ಗೋಲ್ ಕೀಪರ್ ಆಗಿದ್ದರು. ಆ ಪಂದ್ಯದಲ್ಲಿ ಭಾರತ ತಂಡ ಕಂಚಿನ ಪದಕಕ್ಕೆ ಭಾಜನವಾಗಿತ್ತು.
ಏಳು ವರ್ಷಗಳ ಕಾಲ ಭಾರತ ತಂಡದ ಪರವಾಗಿ ಆಡಿದ್ದ ಫ್ರೆಡ್ರಿಕ್ ಮ್ಯಾನ್ಯುಯೆಲ್ ಅವರಿಗೆ 2019ರಲ್ಲಿ ಕ್ರೀಡೆಯಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ ಧ್ಯಾನ್ ಚಂದ್ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.
ತಾವು ಪ್ರತಿನಿಧಿಸುತ್ತಿದ್ದ ರಾಜ್ಯ ತಂಡವು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎದುರಾಳಿ ತಂಡದೆದುರು ಟೈಬ್ರೇಕರ್ ಆಗಿದ್ದ ಸಂದರ್ಭಗಳಲ್ಲಿ, ಗೋಲ್ ಕೀಪರ್ ಆಗಿ 16 ಬಾರಿ ತಮ್ಮ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಿರಿಮೆಯೂ ಅವರದ್ದಾಗಿದೆ.
ಫುಟ್ ಬಾಲ್ ನಲ್ಲಿ ಸ್ಟ್ರೈಕರ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದ ಫ್ರೆಡ್ರಿಕ್ ಮ್ಯಾನ್ಯುಯೆಲ್, ಬಳಿಕ ಹಾಕಿಯಲ್ಲಿ ಗೋಲ್ ಕೀಪರ್ ಪಾತ್ರವನ್ನು ನಿರ್ವಹಿಸತೊಡಗಿದರು. ಕಣ್ಣೂರಿನಲ್ಲಿರುವ ಸೇಂಟ್ ಮೈಕೇಲ್ಸ್ ಶಾಲೆಯ ತಂಡದ ಮೂಲಕ ಅವರು ಹಾಕಿಯಲ್ಲಿ ಸಕ್ರಿಯರಾಗಿದ್ದರು.
ಅಕ್ಟೋಬರ್ 20, 1947ರಲ್ಲಿ ಜನಿಸಿದ ಫ್ರೆಡ್ರಿಕ್ ಮ್ಯಾನ್ಯುಯೆಲ್, ತಮ್ಮ 17ನೇ ವಯಸ್ಸಿನಲ್ಲಿ ಬಾಂಬೆ ಗೋಲ್ಡ್ ಕಪ್ ನಲ್ಲಿ ಆಡುವ ಮೂಲಕ ರಾಷ್ಟ್ರೀಯ ಮಟ್ಟದ ಹಾಕಿಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಅವರು 1971ರಲ್ಲಿ ತಮ್ಮ ಪ್ರಪ್ರಥಮ ಅಂತಾರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿದ್ದರು.







