ನಾಳೆ ಮೊದಲ ಕ್ವಾಲಿಫೈಯರ್: ಹಾಲಿ ಚಾಂಪಿಯನ್ ಆರ್ಸಿಬಿಗೆ ಗುಜರಾತ್ ಎದುರಾಳಿ

Photo Credit : PTI
ಹೊಸದಿಲ್ಲಿ, ಮೇ 25: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಪ್ಲೇ ಆಫ್ನ ಅತಿ ದೊಡ್ಡ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, ಧರ್ಮಶಾಲಾದ ಎಚ್ಪಿಸಿಎ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡವು ಫೈನಲ್ಗೆ ನೇರ ಪ್ರವೇಶ ಪಡೆಯಲಿದೆ. ಸೋಲುವ ತಂಡವು ಎರಡನೇ ಕ್ವಾಲಿಫೈಯರ್ನಲ್ಲಿ ಆಡುವ ಮೂಲಕ ಮತ್ತೊಂದು ಅವಕಾಶ ಪಡೆಯಲಿದೆ.
ಎರಡು ಶ್ರೇಷ್ಠ ತಂಡಗಳ ನಡುವಿನ ನೈಜ ಹೋರಾಟ ಇದಾಗಿದೆ ಎಂದು ಗುಜರಾತ್ ತಂಡದ ಸಹಾಯಕ ಕೋಚ್ ವಿಜಯ್ ದಹಿಯಾ ಬಣ್ಣಿಸಿದ್ದಾರೆ.
‘‘ಈ ಕ್ಷಣವನ್ನು ನೀವು ಸಮರ ಎಂದು ಕರೆಯುತ್ತೀರಿ, ಹೌದು ಇದೊಂದು ಸಮರವಾಗಿದೆ. ಪ್ರಸಕ್ತ ಆವೃತ್ತಿಯ ಟೂರ್ನಿಯಲ್ಲಿ ಉಭಯ ತಂಡಗಳು ಎರಡು ಬಾರಿ ಸೆಣಸಾಡಿವೆ. ಎರಡೂ ತಂಡಗಳು ಉತ್ತಮವಾಗಿವೆ. ಎರಡೂ ತಂಡಗಳ ಪ್ರಮುಖ ಆಟಗಾರರು ಒಗ್ಗಟ್ಟಿನಿಂದ ಆಡುತ್ತಿದ್ದಾರೆ’’ ಎಂದು ವಿಜಯ್ ಹೇಳಿದ್ದಾರೆ.
ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ತಲಾ 18 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿವೆ. ನೆಟ್ರನ್ರೇಟ್ ಈ ಎರಡು ತಂಡವನ್ನು ಬೇರ್ಪಡಿಸಿವೆೆ. ಎರಡು ತಂಡಗಳು ಈ ಋತುವಿನಲ್ಲಿ ತಲಾ ಒಂದು ಪಂದ್ಯ ಗೆದ್ದುಕೊಂಡಿವೆ. ಒಟ್ಟು ಹೆಡ್-ಟು-ಹೆಡ್ ದಾಖಲೆಯು 4-4ರಿಂದ ಸಮಬಲದಲ್ಲಿದೆ.
ಕಳೆದ ಋತುವಿನಲ್ಲಿ ದೀರ್ಘಕಾಲದ ಕನಸನ್ನು ಈಡೇರಿಸಿಕೊಂಡಿದ್ದ ಆರ್ಸಿಬಿ ತಂಡವು ಸತತ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಗುಜರಾತ್ ತಂಡವು 2022ರ ತನ್ನ ಮೊದಲ ಐಪಿಎಲ್ ಅಭಿಯಾನವನ್ನು ಪುನರಾವರ್ತಿಸುವ ಕನಸು ಕಾಣುತ್ತಿದೆ. ಆಗ ಅದು ತನ್ನ ಮೊದಲ ಐಪಿಎಲ್ನಲ್ಲೇ ಪ್ರಶಸ್ತಿ ಎತ್ತಿ ಹಿಡಿದಿತ್ತು.
ಕ್ವಾಲಿಫೈಯರ್-1 ನಿರ್ಧರಿಸಲಿದೆ ಬೌಲಿಂಗ್ ವಿಭಾಗ
ಎರಡೂ ತಂಡಗಳು ಸ್ಫೋಟಕ ಬ್ಯಾಟಿಂಗ್ ಸರದಿ ಹೊಂದಿವೆ. ಆದರೆ ವಿಜಯ್ ದಹಿಯಾ ಪ್ರಕಾರ, ನಾಕೌಟ್ ಹಣಾಹಣಿಯಲ್ಲಿ ಬೌಲಿಂಗ್ ವಿಭಾಗವು ಮಹತ್ವದ ಪಾತ್ರವಹಿಸಲಿದೆ.
ಈ ವರ್ಷದ ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಆರ್ಸಿಬಿ ಹಾಗೂ ಗುಜರಾತ್ ತಂಡಗಳ ಬೌಲರ್ಗಳು ಆಕ್ರಮಿಸಿಕೊಂಡಿದ್ದಾರೆ.
ಈ ಋತುವಿನಲ್ಲಿ ಆರ್ಸಿಬಿ ವೇಗಿ ಭುವನೇಶ್ವರ ಕುಮಾರ್ ಹಾಗೂ ಗುಜರಾತ್ ವೇಗದ ಬೌಲರ್ ಕಾಗಿಸೊ ರಬಾಡ ತಲಾ 24 ವಿಕೆಟ್ಗಳನ್ನು ಪಡೆದಿದ್ದಾರೆ. ಪ್ರಮುಖ ಪಂದ್ಯದಲ್ಲಿ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ಹೊಣೆಗಾರಿಕೆ ಹೊಂದಿದ್ದಾರೆ.
ಎಲ್ಲರ ಚಿತ್ತ ಕೊಹ್ಲಿ, ಗಿಲ್, ಸುದರ್ಶನ್ರತ್ತ
ಪ್ರಮುಖ ಪಂದ್ಯಕ್ಕಿಂತ ಮೊದಲು ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರ ಮಹತ್ವವನ್ನು ವಿಜಯ್ ದಹಿಯಾ ಒತ್ತಿ ಹೇಳಿದರು.
ಕೊಹ್ಲಿ ಪ್ರಸಕ್ತ ಋತುವಿನಲ್ಲಿ ಉತ್ತಮ ಟಚ್ನಲ್ಲಿದ್ದು 50.63ರ ಸರಾಸರಿಯಲ್ಲಿ, 163.82ರ ಸ್ಟ್ರೈಕ್ರೇಟ್ನಲ್ಲಿ 14 ಪಂದ್ಯಗಳಲ್ಲಿ ಒಟ್ಟು 557 ರನ್ ಗಳಿಸಿದ್ದಾರೆ. ತನ್ನ ಹೆಸರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನು ಹೊಂದಿದ್ದಾರೆ.
ಮತ್ತೊಂದೆಡೆ, ಗಿಲ್ ಹಾಗೂ ಸುದರ್ಶನ್ ಟೂರ್ನಮೆಂಟ್ನಲ್ಲಿ ಈ ತನಕ ಟಾಪ್-2 ರನ್ ಸ್ಕೋರರ್ ಆಗಿದ್ದಾರೆ. ಗಿಲ್ ಅವರು 47.38ರ ಸರಾಸರಿಯಲ್ಲಿ, 161.37ರ ಸ್ಟ್ರೈಕ್ರೇಟ್ನಲ್ಲಿ 13 ಪಂದ್ಯಗಳಲ್ಲಿ ಒಟ್ಟು 616 ರನ್ ಗಳಿಸಿದ್ದಾರೆ. ಸುದರ್ಶನ್ 157.92ರ ಸ್ಟ್ರೈಕ್ರೇಟ್ನಲ್ಲಿ 49.08 ಸರಾಸರಿಯಲ್ಲಿ ಒಟ್ಟು 638 ರನ್ ಗಳಿಸಿದ್ದಾರೆ.
‘‘ನಿಶ್ಚಿತವಾಗಿ ಈ ಮೂವರು ಆಟಗಾರರು ಅತ್ಯಂತ ನಿರ್ಣಾಯಕ ಪಾತ್ರವಹಿಸಲಿದ್ದಾರೆ’’ಎಂದ ಭಾರತದ ಮಾಜಿ ವಿಕೆಟ್ಕೀಪರ್-ಬ್ಯಾಟರ್ ವಿಜಯ್, ಗುಜರಾತ್ ನಾಯಕ ಗಿಲ್ರನ್ನು ವಿಶೇಷವಾಗಿ ಶ್ಲಾಘಿಸಿದರು.
‘‘ವಿರಾಟ್ ಕೊಹ್ಲಿ ಅನುಭವಿ ಆಟಗಾರನಾಗಿರುವ ಕಾರಣ ಗಿಲ್ ಹಾಗೂ ಸುದರ್ಶನ್ಗಿಂತ ಶ್ರೇಷ್ಠ ಸಾಧನೆ ಮಾಡಿದ್ದಾರೆ. ತಾಂತ್ರಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಹೇಗೆ ಬಲಿಷ್ಠವಾಗಿರಬೇಕು ಎಂದು ಈ ಋತುವಿನಲ್ಲಿ ಶುಭಮನ್ ಗಿಲ್ ತೋರಿಸಿಕೊಟ್ಟಿದ್ದಾರೆ’’ ಎಂದು ವಿಜಯ್ ಹೇಳಿದರು.
ಸಿರಾಜ್ ಸಾಧನೆಗೆ ಶ್ಲಾಘನೆ: ವಿಜಯ್ ದಹಿಯಾ ಅವರು ಗುಜರಾತ್ ತಂಡದ ವೇಗದ ಬೌಲರ್ ಮುಹಮ್ಮದ್ ಸಿರಾಜ್ರನ್ನು ವಿಶೇಷವಾಗಿ ಶ್ಲಾಘಿಸಿದರು. ಈ ವರ್ಷದ ಐಪಿಎಲ್ನಲ್ಲಿ ಸಿರಾಜ್ ಅವರು ಆಡಿರುವ 14 ಪಂದ್ಯಗಳಲ್ಲಿ 17 ವಿಕೆಟ್ಗಳನ್ನು ಪಡೆದಿದ್ದಾರೆ. ಆಕ್ರಮಣಕಾರಿ ಬೌಲಿಂಗ್ನ ಮೂಲಕ ಎದುರಾಳಿ ಬ್ಯಾಟರ್ಗಳನ್ನು ನಿರಂತರವಾಗಿ ಕಾಡಿದ್ದಾರೆ.
ಧರ್ಮಶಾಲಾದ ಪಿಚ್ ಹಾಗೂ ಸ್ಪಿನ್ನರ್ಗಳ ಪಾತ್ರ
ಧರ್ಮಶಾಲಾ ಸ್ಟೇಡಿಯಂ ಗರಿಷ್ಠ ಮೊತ್ತದ ಹಣಾಹಣಿಗೆ ಹೆಸರುವಾಸಿಯಾಗಿದೆ. ಸ್ಪಿನ್ನರ್ಗಳು ಪ್ರಮುಖ ಪಾತ್ರವಹಿಸಲಾರರು ಎಂದು ದಹಿಯಾ ಅಭಿಪ್ರಾಯಪಟ್ಟಿದ್ದಾರೆ.
ಧರ್ಮಶಾಲಾ ಸ್ಟೇಡಿಯಂ ಈ ವರ್ಷ ಮೂರು ಲೀಗ್ ಹಂತದ ಪಂದ್ಯಗಳ ಆತಿಥ್ಯ ವಹಿಸಿದೆ. ಎಲ್ಲವೂ ಗರಿಷ್ಠ ಮೊತ್ತದ ಹಣಾಹಣಿಯಾಗಿ ಪರಿವರ್ತಿತವಾಗಿತ್ತು. ಈ ಸುಂದರ ಕ್ರೀಡಾಂಗಣದಲ್ಲಿ ಪ್ರತಿಬಾರಿಯೂ ತಂಡಗಳು 200ಕ್ಕೂ ಅಧಿಕ ರನ್ ಗಳಿಸಿವೆ.
ಆರ್ಸಿಬಿ ಈ ಋತುವಿನಲ್ಲಿ ಈಗಾಗಲೇ ಧರ್ಮಶಾಲಾದಲ್ಲಿ ಒಂದು ಪಂದ್ಯ ಆಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್ಗಳಿಂದ ಜಯಶಾಲಿಯಾಗಿದೆ. ಗುಜರಾತ್ ತಂಡ ಈ ವರ್ಷ ಮೊದಲ ಬಾರಿ ಈ ಸ್ಟೇಡಿಯಂನಲ್ಲಿ ಆಡಲಿದೆ.
‘‘ಧರ್ಮಶಾಲಾದಲ್ಲಿ ಐಪಿಎಲ್ ಪಂದ್ಯ ಹಾಗೂ ಇತರ ಪಂದ್ಯಗಳನ್ನು ಆರಂಭಿಸಿದ ನಂತರ ರನ್ ಹೊಳೆ ಹರಿದಿದೆ. ಇತರ ಎಲ್ಲ ಮೈದಾನಕ್ಕಿಂತ ಹೆಚ್ಚು ಸಿಕ್ಸರ್ಗಳು ಇಲ್ಲೇ ದಾಖಲಾಗಿವೆ. ಬೆಂಗಳೂರಿನಲ್ಲಿ ಕೂಡ ಸಾಕಷ್ಟು ಸಿಕ್ಸರ್ ಸಿಡಿಯಲ್ಪಟ್ಟಿದೆ. ಉಭಯ ತಂಡಗಳ ಅನುಭವಿ ಸ್ಪಿನ್ನರ್ಗಳು ಪರಿಣಾಮಕಾರಿ ಪ್ರದರ್ಶನ ನೀಡಬಹುದು’’ ಎಂದು ವಿಜಯ್ ದಹಿಯಾ ಹೇಳಿದ್ದಾರೆ.
ಈ ವರ್ಷದ ಐಪಿಎಲ್ನಲ್ಲಿ ನಾಲ್ಕು ಪ್ಲೇ ಆಫ್ ಪಂದ್ಯಗಳು ಆಡಲು ಬಾಕಿ ಇದ್ದರೂ ಬ್ಯಾಟಿಂಗ್ ವಿಚಾರದಲ್ಲಿ ಹೊಸ ಮೈಲಿಗಲ್ಲು ದಾಖಲಾಗಿದೆ. 9.85 ಗರಿಷ್ಠ ರನ್ರೇಟ್ ಆಗಿದ್ದು, ಹಲವಾರು ಸಿಕ್ಸರ್ಗಳು, 200ಕ್ಕೂ ಅಧಿಕ ಮೊತ್ತಗಳು ದಾಖಲಾಗಿವೆ ಹಾಗೂ 200 ಪ್ಲಸ್ ಸ್ಕೋರ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಅಂದಾಜು ಹತ್ತರ ರನ್ರೇಟ್ನಲ್ಲಿ ಸ್ಕೋರ್ ದಾಖಲಾಗಿದೆ. 61 ಬಾರಿ 200 ರನ್ ಗಳಿಸಲಾಗಿದೆ. ಸನ್ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತಲಾ 9 ಬಾರಿ ಈ ಸಾಧನೆ ಮಾಡಿವೆ. ಒಂದೇ ಟಿ-20 ಪಂದ್ಯಾವಳಿಯಲ್ಲಿ ತಂಡವೊಂದರ ಶ್ರೇಷ್ಠ ಸಾಧನೆ ಇದಾಗಿದೆ. ಪಂಜಾಬ್ ತಂಡ ಕೂಡ 9 ಬಾರಿ 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿದೆ.
ಈ ತನಕ ಒಟ್ಟು 1,349 ಸಿಕ್ಸರ್ಗಳು ಸಿಡಿಯಲ್ಪಟ್ಟಿವೆ. 2025ರಲ್ಲಿ ಒಟ್ಟು 1,294 ಸಿಕ್ಸರ್ ಸಿಡಿಯಲ್ಪಟಿದ್ದವು. ಲೀಗ್ ಹಂತದಲ್ಲಿ ಪಂಜಾಬ್ ತಂಡವು ಗರಿಷ್ಠ ಸಿಕ್ಸರ್(163)ಸಿಡಿಸಿದೆ. ಎಸ್ಆರ್ಎಚ್ 162 ಸಿಕ್ಸರ್ಗಳನ್ನು ಸಿಡಿಸಿದೆ.






